ಬಸವನಹುಳು ಬಾಧೆಯಿಂದ ಬೆಳೆ ಹಾನಿ: ಪರಿಹಾರ ನೀಡಲು ಆಗ್ರಹ

ಕಲಬುರಗಿ,ಜು.19: ಬಸವನಹುಳುಗಳ ಬಾಧೆಯಿಂದ ಬೆಳೆ ಹಾನಿಯಾಗಿದ್ದು, ಕೂಡಲೇ ಸಂತ್ರಸ್ತ ರೈತರಿಗೆ ಸೂಕ್ತ ಪರಿಹಾರ ನೀಡುವ ಮೂಲಕ ಸರ್ಕಾರವು ನೆರವಿಗೆ ಧಾವಿಸಬೇಕು ಎಂದು ನವ ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ದಯಾನಂದ್ ಪಾಟೀಲ್ ಅವರು ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೀದರ್, ಕಲಬುರ್ಗಿ, ಯಾದಗಿರಿ, ಕೊಪ್ಪಳ್, ಬಳ್ಳಾರಿ, ರಾಯಚೂರು ಸೇರಿದಂತೆ ಇಡೀ ಕಲ್ಯಾಣ ಕರ್ನಾಟಕದಲ್ಲಿ ಬಸವನಹುಳು ಬಾಧೆಯಿಂದ ಬೆಳೆ ಕಳೆದುಕೊಂಡು ರೈತರು ಕಂಗಾಲಾಗಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಬಸವನಹುಳುಗಳ ಬಾಧೆಯಿಂದ ಮುಂಗಾರು ಬೆಳೆಗಳಾದ ಉದ್ದು, ಹೆಸರು, ಸೋಯಾಬಿನ್ ಮುಂತಾದ ಬೀಜಗಳನ್ನು ರಾಸಾಯನಿಕ ಗೊಬ್ಬರ ಹಾಕಿ ಬೆಳೆಸಿದ್ದರೂ ಹಾನಿಗೆ ಒಳಗಾಗಿವೆ. ಬೆಳೆಗಳ ಮೂಲ ಬೀಜಗಳನ್ನು ಬಸವನಹುಳುಗಳು ತಿಂದು ಹಾಕಿವೆ. ಬಸವನಹುಳುಗಳನ್ನು ನಿಯಂತ್ರಿಸಲು ಸರ್ಕಾರವು ಸೂಕ್ತ ಕ್ರಮಗಳನ್ನೂ ಸಹ ಕೈಗೊಂಡಿಲ್ಲ. ಹೀಗಾಗಿ ಬೆಳೆ ಕಳೆದುಕೊಂಡ ರೈತರು ರೋಸಿ ಹೋಗಿದ್ದಾರೆ ಎಂದು ಅವರು ಸರ್ಕಾರದ ವಿರುದ್ಧ ಹರಿಹಾಯ್ದರು.
ಕೂಡಲೇ ಬಸವನಹುಳುಗಳ ಬಾಧೆಯಿಂದ ಹಾನಿಗೀಡಾದ ರೈತರ ಬೆಳೆಯ ಕುರಿತು ಸಮೀಕ್ಷೆ ಕೈಗೊಂಡು ಹಾನಿಯ ಪರಿಹಾರವನ್ನು ಸರ್ಕಾರ ಕೂಡಲೇ ಕೊಡಬೇಕು ಎಂದು ಅವರು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಚಂದ್ರಕಾಂತ್ ಓಗೆ, ರವಿ ಗುತ್ತೇದಾರ್, ಶಿವರಾಜ್ ದಣ್ಣೂರ್, ನಾಗಣ್ಣ ಗೌಡಗೇರಿ, ನಾಗಮೂರ್ತಿ ಗುತ್ತೇದಾರ್ ಮುಂತಾದವರು ಉಪಸ್ಥಿತರಿದ್ದರು.