ಬಸವನಭಾವಿ ರಸ್ತೆ ಕಾಮಗಾರಿ ಪೂರ್ಣಕ್ಕೆ ಕರವೇ ಆಗ್ರಹ

ರಾಯಚೂರು,ಆ.೧೧-
ನಗರದ ಬಸವನಭಾವಿ ವೃತ್ತದಿಂದ ನರಸಿಂಹ ರೈಸ್‌ಮಿಲ್ ವರೆಗೆ ರಸ್ತೆ ಕಾಮಗಾರಿಯನ್ನು ಕೈಗೆತ್ತಿಕೊಂಡು ಮಧ್ಯದಲ್ಲಿಯೇ ನಿಲ್ಲಿಸಿದ ಕಾಮಗಾರಿಯನ್ನು ಕೂಡಲೇ ಪೂರ್ಣಗೊಳಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ನಗರದ ಬಸವನಬಾವಿ ವೃತ್ತದಿಂದ ಗದ್ವಾಲ್ ರಸ್ತೆ ಬಳಿ ಬರುವ ನರಸಿಂಹ ರೈಸ್‌ಮಿಲ್‌ವರೆಗೆ ರಸ್ತೆ ಕಾಮಗಾರಿಯನ್ನು ಕೈಗೆತ್ತಿಕೊಂಡು ಒಂದು ವರ್ಷ ಕಳೆಯುತ್ತಿದೆ ಎಂದು ದೂರಿದರು.
ಆದರೆ ಇಲ್ಲಿಯವರೆಗೆ ಸದರಿ ರಸ್ತೆಯನ್ನು ಪೂರ್ಣಗೊಳಿಸದೇ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿ ರಸ್ತೆಯನ್ನು ಬೇಕಾಬಿಟ್ಟಿ ಮಾಡಿದರಿಂದ ಸಾರ್ವಜನಿಕರಿಗೆ ಹಾಗೂ ವಾಹನ ಚಾಲಕರಿಗೆ ಮತ್ತು ಪಾದಾಚಾರಿಗಳಿಗೆ ಅಲ್ಲದೇ ರಸ್ತೆಯ ಅಕ್ಕಪಕ್ಕದಲ್ಲಿರುವ ನಿವಾಸಿಗಳಿಗೆ ಧೂಳಿನಿಂದ ವಾತಾವರಣ ಕಲುಷಿತಗೊಂಡು ವಾಯುಮಾಲಿನ್ಯದಿಂದ ಸಾರ್ವಜನಿಕರ ಆರೋಗ್ಯದ ಮೇಲೆ ಅಸ್ತಮಾ, ಶ್ವಾಸಕೋಶ ಸಮಸ್ಯೆ ಇತರೆ ರೋಗ ರುಜನೆಗಳಿಗೆ ತುತ್ತಾಗಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ ಎಂದು ದೂರಿದರು.
ಸದರಿ ರಸ್ತೆ ಕಾಮಗಾರಿಯನ್ನು ಕೈಗೆತ್ತಿಕೊಂಡು ವಿಧಾನಸಭಾ ಚುನಾವಣೆಯ ನೆಪವೊಡ್ಡಿ ಕಾಮಗಾರಿಯನ್ನು ಸ್ಥಗಿತಗೊಳಿಸಿದ್ದು, ಇದುವರೆಗೆ ಕಾಮಗಾರಿಯನ್ನು ಮರುಚಾಲನೆ ಮಾಡಿರುವುದಿಲ್ಲ. ಇದರಿಂದ ಸಾಮಾನ್ಯ ಜನರಿಗೆ ತೀರಾ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಅಲ್ಲದೇ ಗದ್ವಾಲ್ ರಸ್ತೆಯ ಮೇಲೆ ಹೋಗುವ ವಾಹನಗಳ ಚಾಲಕರು ಜಿಲ್ಲಾಡಳಿತದ ಮೇಲೆ ಹಿಡಿಶಾಪ ಹಾಕುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ರಸ್ತೆಯ ಮುಖಾಂತರ ಹೋಗುವ ಶಾಲಾ ವಿದ್ಯಾರ್ಥಿಗಳು, ಕೂಲಿಕಾರರಿಗೆ ತೊಂದರೆಯಾಗುತ್ತಿದೆ ಕೂಡಲೇ ಕಾಮಗಾರಿ ಪೂರ್ಣಗೊಳಿಸಬೇಕು ಇಲ್ಲವಾದಲ್ಲಿ ಹೋರಾಟ ನಡೆಸಲಾಗುವುದೆಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ವಿನೋದರೆಡ್ಡಿ, ಲಕ್ಷ್ಮಣ, ಲೋಕೇಶ, ನರಸಿಂಹಲು ಸೇರಿದಂತೆ ಉಪಸ್ಥಿತರಿದ್ದರು.