ಬಸವತತ್ವ ನಿಜ ಆಚರಣೆಗೆ ತಂದ ಪಟ್ಟದ್ದೇವರು

ಭಾಲ್ಕಿ:ಎ.23:ಗಡಿ ಭಾಗದಲ್ಲಿ 109 ವರ್ಷಗಳ ಕಾಲ ಗಂಧದಂತೆ ಬದುಕು ಸವಿಸಿದ ಡಾ.ಚನ್ನಬಸವ ಪಟ್ಟದ್ದೇವರು ಬಸವತತ್ವ ಕೇವಲ ಉಪದೇಶ ಮಾಡಲಿಲ್ಲ, ಬದಲಾಗಿ ನಿಜ ಜೀವನದಲ್ಲಿ ಆಚರಣೆಗೆ ತಂದು ನುಡಿದಂತೆ ನಡೆದಿದ್ದರು ಎಂದು ಶಾಸಕ ಈಶ್ವರ ಖಂಡ್ರೆ ಅಭಿಪ್ರಾಯ ವ್ಯಕ್ತ ಪಡಿಸಿದರು.
ಪಟ್ಟಣದ ಚನ್ನಬಸವಾಶ್ರಮ ಪರಿಸರದಲ್ಲಿ ಹಿರೇಮಠ ಸಂಸ್ಥಾನದ ವತಿಯಿಂದ ಶನಿವಾರ ಆಯೋಜಿಸಿದ್ದ ವಿಶ್ವಗುರು ಬಸವಣ್ಣನವರ ಜಯಂತಿ, ವಚನ ಜಾತ್ರೆ-2023 ಮತ್ತು ಡಾ.ಚನ್ನಬಸವ ಪಟ್ಟದ್ದೇವರ 24ನೆಯ ಸ್ಮರಣೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪಟ್ಟದ್ದೇವರು ಮಾತಿನ ಸ್ವಾಮೀಜಿ ಆಗಿರಲಿಲ್ಲ, ಬರೀ ಭಾಷಣ ಮಾಡಲಿಲ್ಲ. ಅವರು ಸತ್ಯಶುದ್ಧ ಕಾಯಕದ ಸ್ವಾಮೀಜಿ ಆಗಿದ್ದರು. ಮಾತಿನ ಸದ್ದು ದೂರ ಕೇಳಿಸುತ್ತದೆ. ಆದರೆ, ಕೆಲಸದ ಸದ್ದು ಇನ್ನೂ ದೂರ ಕೇಳಿಸುತ್ತದೆ. ಮಾತು ಅಳಿಸಿ ಹೋಗಬಹುದು, ಆದರೆ ಮಾಡಿದ ಕೆಲಸ ಅಚ್ಚಳಿಯದಂತೆ ಉಳಿಯುತ್ತದೆ.
ಅಂತಹ ಕೆಲಸ ಈ ಭಾಗದಲ್ಲಿ ಪಟ್ಟದ್ದೇವರು ಮಾಡಿದ್ದರು. ಬಸವಣ್ಣನರ ವಿಚಾರಧಾರೆ ಬದುಕಿನುದಕ್ಕೂ ಪಾಲಿಸಿದರು. ಶ್ರೀಮಠದ ಗೌರವ ಎತ್ತಿ ಹಿಡಿಯುವ ಕೆಲಸ ಮಾಡಿದರು. ಬಸವಕಲ್ಯಾಣ ಅನುಭವ ಮಂಟಪಕ್ಕೆ ಶ್ರೀಗಳು ಹೊಸ ಆಯಾಮ ನೀಡಿದರೇ ಪರಿಣಾಮ ಇಂದು ಪಾರ್ಲೇಮೆಂಟ್ ಪರಿಕಲ್ಪನೆ ಉಳಿದಿದೆ. ಅವರ ಚಿಂತನೆ ಆದರ್ಶಗಳನ್ನು ನಾವೆಲ್ಲರೂ ಮೈಗೂಡಿಸಿ ಕೊಂಡು ಉತ್ತಮ ಬದುಕು ಸಾಗಿಸೋಣ ಎಂದು ತಿಳಿಸಿದರು.
ಸಮಾರಂಭ ಉದ್ಘಾಟಿಸಿದ ಬೆಂಗಳೂರಿನ ಖ್ಯಾತ ಚಿಂತಕ ಡಾ.ಸಿದ್ಧನಗೌಡ ಪಾಟೀಲ್ ಮಾತನಾಡಿ, ಬಸವತತ್ವ ಶಾಲಾ-ಕಾಲೇಜು ಪಠ್ಯದಲ್ಲಿ ಸೇರಿಸುವ ಕೆಲಸ ಆಗಬೇಕು ಎಂದು ಆಶಿಸಿದರು.
ದಿವ್ಯ ಸಮ್ಮುಖ ವಹಿಸಿದ ಕೌಠಾ ಬಸವಯೋಗಾಶ್ರಮದ ಸಿದ್ಧರಾಮೇಶ್ವರ ಬೆಲ್ದಾಳ ಶರಣರು ಮಾತನಾಡಿ, ಡಾ.ಚನ್ನಬಸವ ಪಟ್ಟದ್ದೇವರು ತಮ್ಮ ಇಡೀ ಜೀವನ ಬಸವತತ್ವಕ್ಕೆ ಮೀಸಲಿಟ್ಟು ಬಸವಮಯ ಬದುಕು ಸಾಗಿಸಿದರು. ಇತ್ತಿಚಿಗೆ ಎಲ್ಲರೂ ಬಸವತತ್ವದ ಬಗ್ಗೆ ಉಪದೇಶ ಹೇಳುವರು ಹೆಚ್ಚಾಗಿದ್ದಾರೆ. ಅದರಂತೆ ನಡೆಯುವರು ಅತ್ಯಂತ ವಿರಳ. ಹಾಗಾಗಿ ಯುವ ಜನಾಂಗದಲ್ಲಿ ಜಾಗೃತಿ ಮೂಡಿಸಲು ಬಸವತತ್ವದ ತರಬೇತಿ ನೀಡುವುದು ಅಗತ್ಯವಾಗಿದೆ ಎಂದು ತಿಳಿಸಿದರು.
ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್‍ನ ಅಧ್ಯಕ್ಷ ಡಾ.ಬಸವಲಿಂಗ ಪಟ್ಟದ್ದೇವರು ದಿವ್ಯ ಸಾನ್ನಿಧ್ಯ ವಹಿಸಿದರು. ಬೀದರ್ ಹಿರಿಯ ಬಿಜೆಪಿ ಮುಖಂಡ ಗುರುನಾಥ ಕೊಳ್ಳುರು ಅವರು ಬಸವ ಗುರುವಿನ ಪೂಜೆ ನೆರವೇರಿಸಿದರು. ಬಸವಕಲ್ಯಾಣ ಅನುಭವ ಮಂಟಪ ಸಂಚಾಲಕ ವಿ.ಸಿದ್ದರಾಮಣ್ಣ ಶರಣರು ಷಟಸ್ಥಲ ಧ್ವಜರೋಹಣ ನೆರವೇರಿಸಿದರು. ಹಿರಿಯ ಪತ್ರಕರ್ತ ರಾಹುಲ ಬೆಳಗಲಿ ಗ್ರಂಥ ಬಿಡುಗಡೆ ಮಾಡಿದರು.
ಅಕ್ಕ ಗಂಗಾಂಬಿಕೆ ತಾಯಿ, ಉಳಿವಿಯ ಶರಣ ಬಸವ ಸ್ವಾಮೀಜಿ, ಮೈತ್ರಾದೇವಿ ತಾಯಿ, ಮಹಾದೇವಮ್ಮ ತಾಯಿ ಸಮ್ಮುಖ ವಹಿಸಿದರು.
ಈ ಸಂದರ್ಭದಲ್ಲಿ ಬುಡಾ ಅಧ್ಯಕ್ಷ ಬಾಬು ವಾಲಿ, ರಾಜ್ಯ ಸರಕಾರಿ ನೌಕರರ ಸಂಘದ ಉಪಾಧ್ಯಕ್ಷ ರಾಜೇಂದ್ರಕುಮಾರ ಗಂದಗೆ, ಜಿಪಂ ಮಾಜಿ ಸದಸ್ಯೆ ಶಕುಂತಲಾ ಬೆಲ್ದಾಳೆ, ಜಿಲ್ಲಾ ಕಸಾಪ ಅಧ್ಯಕ್ಷ ಸುರೇಶ ಚನಶೆಟ್ಟಿ, ಪ್ರಾಣಿ ಕಲ್ಯಾಣ ಮಂಡಳಿ ಸದಸ್ಯ ಬಂಡೆಪ್ಪ ಕಂಟೆ ಸೇರಿದಂತೆ ಹಲವರು ಇದ್ದರು.
ಚಂದ್ರಕಾಂತ ಬಿರಾದಾರ್ ಸ್ವಾಗತಿಸಿದರು. ಆಕಾಶವಾಣಿ ಕಲಾವಿದ ನವಲಿಂಗ ಪಾಟೀಲ್ ನಿರೂಪಿಸಿದರು. ಪ್ರೇಮಲಾ ಶಿವರುದ್ರಯ್ಯ ಸ್ವಾಮಿ ವಂದಿಸಿದರು.ಲೋಕನಾಥ ಚಾಂಗ್ಲೇರ್, ಯಲ್ಲನಗೌಡ ಬಾಗಲಕೋಟ ವಚನ ಗಾಯನ ನಡೆಸಿ ಕೊಟ್ಟರು.