ಬಸವಣ್ಣ ಸಾಂಸ್ಕøತಿಕ ನಾಯಕ: ಅಕ್ಕ ಅನ್ನಪೂರ್ಣತಾಯಿ ಸ್ವಾಗತ

ಬೀದರ್:ಜ.20: ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕøತಿಕ ನಾಯಕರೆಂದು ಘೋಷಿಸಿರುವುದನ್ನು ಸ್ವಾಗತಿಸಿರುವ ಇಲ್ಲಿಯ ಬಸವ ಸೇವಾ ಪ್ರತಿಷ್ಠಾನ ಹಾಗೂ ಲಿಂಗಾಯತ ಮಹಾ ಮಠದ ಅಕ್ಕ ಡಾ. ಅನ್ನಪೂರ್ಣತಾಯಿ ಅವರು, ರಾಜ್ಯ ಸರ್ಕಾರವನ್ನು ಅಭಿನಂದಿಸಿದ್ದಾರೆ.
ಇದೊಂದು ಐತಿಹಾಸಿಕ ನಿರ್ಣಯ ಎಂದು ಬಣ್ಣಿಸಿದ್ದಾರೆ.
900 ವರ್ಷಗಳ ಹಿಂದೆಯೇ ಅನುಭವ ಮಂಟಪ ಸ್ಥಾಪನೆ ಮೂಲಕ ಜಗತ್ತಿಗೆ ಪ್ರಜಾಪ್ರಭುತ್ವ ವ್ಯವಸ್ಥೆ ಪರಿಚಯಿಸಿದ ಬಸವಣ್ಣನವರು ಅಸ್ಪøಷ್ಯತೆ ವಿರುದ್ಧ ಕ್ರಾಂತಿಗೈದಿದ್ದರು. ದೀನ, ದಲಿತರು, ಸ್ತ್ರೀಯರು ಮುಂತಾದ ಶೋಷಿತರ ಸಮಾನತೆಗೆ ಧ್ವನಿ ಎತ್ತಿದ ಮೊದಲ ಮಹಾ ಪುರುಷರು ಅವರು ಎಂದು ಹೇಳಿದ್ದಾರೆ.
ದ್ವೇಷ, ಅಸೂಯೆ, ಯುದ್ಧ ಪೀಡಿತವಾದ ವಿಶ್ವಕ್ಕೆ ಬಸವಣ್ಣನವರ ಮಾನವೀಯ ಮೌಲ್ಯಗಳು ಹಿಂದೆಂದಿಗಿಂತಲೂ ಇಂದು ಅವಶ್ಯಕವಾಗಿವೆ. ಈ ದಿಸೆಯಲ್ಲಿ ರಾಜ್ಯ ಸರ್ಕಾರ ದಿಟ್ಟ ಹೆಜ್ಜೆ ಇಟ್ಟು, ಬಸವಾನುಯಾಯಿಗಳು ಹಾಗೂ ಕನ್ನಡಿಗರಲ್ಲಿ ಹರ್ಷದ ಹೊನಲನ್ನೇ ಹರಿಸಿದೆ ಎಂದು ತಿಳಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಮೊದಲು ಬಸವ ಜಯಂತಿ ದಿನವೇ ಪ್ರಮಾಣ ವಚನ ಸ್ವೀಕರಿಸಿದ್ದರು. ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರ ಕಡ್ಡಾಯವಾಗಿ ಹಾಕಬೇಕೆಂದು ಆದೇಶ ಹೊರಡಿಸಿದ್ದರು. ಇದೀಗ ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕøತಿಕ ನಾಯಕರೆಂದು ಘೋಷಿಸುವ ಮೂಲಕ ಬಸವ ತತ್ವದ ಕುರಿತು ಸರ್ಕಾರದ ಬದ್ಧತೆಯನ್ನು ಮೆರೆದಿದ್ದಾರೆ ಎಂದು ತಿಳಿಸಿದ್ದಾರೆ.
ಬಸವಣ್ಣನವರು ಪ್ರತಿಪಾದಿಸಿದ ಕಲ್ಯಾಣ ರಾಜ್ಯ ನಿರ್ಮಾಣದ ಸಂಕಲ್ಪ ಮಾಡಿರುವುದು ಮುಖ್ಯಮಂತ್ರಿ ಅವರ ಜನಪರ ಕಾಳಜಿಯನ್ನು ತೋರಿಸುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.