ಬಸವಣ್ಣ, ರೇಣುಕಾಚಾರ್ಯರ ವಿಚಾರಗಳಲ್ಲಿ ಇದೆ ಸಾಮ್ಯತೆ

ಚಿತ್ರದುರ್ಗ.ಮಾ.5:ಬಸವಣ್ಣ ಹಾಗೂ ರೇಣುಕಾಚಾರ್ಯರು ಹೇಳಿದ ವಿಚಾರಗಳಲ್ಲಿ ಸಾಮ್ಯತೆ ಇದೆ ಎಂದು ಅಪರ ಜಿಲ್ಲಾಧಿಕಾರಿ ಟಿ. ಜವರೇಗೌಡ ಅವರು ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಭಾನುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ನಗರಸಭೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಾಮಾನೋತ್ಸವ ಕಾರ್ಯಕ್ರಮದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
ಬಸವಣ್ಣ ಮತ್ತು ರೇಣುಕಾಚಾರ್ಯರು ಹೇಳಿದ ವಿಚಾರಗಳಲ್ಲಿ ಸಾಮ್ಯತೆ ಹೆಚ್ಚಾಗಿದೆ. ರೇಣುಕಾಚಾರ್ಯರು ದಶ ಸೂತ್ರಗಳಲ್ಲಿ ದಯೆ, ಶಮೆ, ಸತ್ಯ, ಕಳ್ಳತನ ಮಾಡದೇ ಇರುವುದು, ಶಿವ ಪೂಜೆ, ದಾನ ಇತ್ಯಾದಿ ವಿಚಾರಗಳನ್ನು ಸಂಸ್ಕøತ ಭೂಯಿಷ್ಟವಾಗಿ ಹೇಳಿದ್ದಾರೆ. ಆದರೆ ಬಸವಣ್ಣ ಅವರು ಅದೇ ವಿಚಾರಗಳನ್ನು, ತತ್ವ, ಸಿದ್ದಾಂತ ಹಾಗೂ ಆದರ್ಶಗಳನ್ನು ಜನರಿಗೆ ಸರಳವಾಗಿ, ಅರ್ಥವಾಗುವಂತೆ ತಿಳಿಸಿದ್ದಾರೆ. ಬಸವಣ್ಣನವರಿಗೆ ಸಮಾಜ ಸುಧಾರಣೆ ಮಾಡುವಂತಹ ಪ್ರೇರಣೆ ನೀಡಿದವರೇ ರೇಣುಕಾಚಾರ್ಯರು ಎಂದು ಅಭಿಪ್ರಾಯಪಟ್ಟರು.
ಸಮಾಜ ಸುಧಾರಕರು, ಸಂತರು, ದಾರ್ಶನಿಕರು, ಪುಣ್ಯಪುರುಷರು  ತೋರಿಸುವಂತಹ ದಾರಿಯಲ್ಲಿ ನಾವು ನೀವು ಹೋದರೆ, ಮಹನೀಯರ ಆದರ್ಶ ಮತ್ತು ತತ್ವಗಳನ್ನು ಪಾಲನೆ ಮಾಡಿದರೆ ಮಾನವನೂ ಮಹದೇವನಾಗುತ್ತಾನೆ ಎಂಬ ಕಲ್ಪನೆಯನ್ನು ರೇಣುಕಾಚಾರ್ಯರು ತಿಳಿಸಿದ್ದಾರೆ ಎಂದರು.ಮಾಜಿ ಶಾಸಕ ಎಸ್.ಕೆ.ಬಸರಾಜನ್ ಮಾತನಾಡಿ, ಯಾವುದೇ ಒಂದು ಮಹಾತ್ಮರ ಜಯಂತಿ ಆಚರಣೆ ಮಾಡುವ ಉದ್ದೇಶ ಅವರಲ್ಲಿನ ಸಾಮಾಜಿಕ ಕಳಕಳಿ, ಧರ್ಮದ ಬಗ್ಗೆ ನಿಷ್ಠೆ ಅಂತಹ ವಿಚಾರಗಳನ್ನ ನಾವು ಮತ್ತೆ ಮತ್ತೆ ಮೆಲಕು ಹಾಕುವ ಉದ್ದೇಶದಿಂದ ಜಯಂತಿ ಆಚರಣೆ ಮಾಡುತ್ತೇವೆ. ರಾಜ್ಯ ಸರ್ಕಾರವು ಸುಮಾರು 45 ಮಹನೀಯರ ಜಯಂತಿಗಳನ್ನು ಆಚರಣೆ ಮಾಡುವುದರ ಮೂಲಕ ಮಹನೀಯರ ತತ್ವ, ಸಿದ್ದಾಂತಗಳನ್ನು ಜನರಿಗೆ ತಿಳಿಸುವ ಕೆಲಸವಾಗುತ್ತಿದೆ. ಮೊದಲಬಾರಿಗೆ ರೇಣುಕಾಚಾರ್ಯರ ಜಯಂತಿ ಯುಗಮಾನೋತ್ಸವನ್ನು ಸರಳವಾಗಿ ಆಚರಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಅದ್ದೂರಿಯಾಗಿ ಭಕ್ತಿಯಿಂದ ಆಚರಿಸೋಣ ಎಂದು ಹೇಳಿದರು.