
ಸಂಜೆವಾಣಿ ವಾರ್ತೆ
ಹೊಸಪೇಟೆ, ಮಾ.14: ಪ್ರೌಢದೇವರಾಯನ ಕಾಲದಲ್ಲಿ ವಿಜಯನಗರವನ್ನು ವಿಜಯ ಕಲ್ಯಾಣ ಎಂದು ಕರೆಯಲಾಗುತ್ತಿದ್ದು, ಈ ನೆಲದಲ್ಲಿ ಬಸವಣ್ಣನ ಪುತ್ಥಳಿ ಹಾಗೂ ವೃತ್ತ ನಿರ್ಮಾಣಗೊಳ್ಳುತ್ತಿರುವುದು ವಿಜಯನಗರ ಜಿಲ್ಲೆಯ ಹೆಮ್ಮೆ ಎಂದು ಕೊಟ್ಟೂರು ಸ್ವಾಮಿ ಮಠದ ಕೊಟ್ಟೂರು ಬಸವಲಿಂಗ ಮಹಾಸ್ವಾಮಿಜಿ ಬಣ್ಣಿಸಿದರು.
ನಗರದ ಸಿದ್ಧಿಪ್ರಿಯ ಕಲ್ಯಾಣ ಮಂಟಪದ ಮುಂಭಾಗದ ಪ್ರದೇಶದಲ್ಲಿ ಬಸವಣ್ಣ ವೃತ್ತ ಮತ್ತು ಪುತ್ಥಳಿ ನಿರ್ಮಾಣಕ್ಕೆ ಸೋಮವಾರ ಅವರು ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಹೊಸಪೇಟೆಯಲ್ಲಿ ಬಸವಣ್ಣನವರ ವೃತ್ತ, ಪುತ್ಥಳಿ ನಿರ್ಮಾಣಕ್ಕೆ ಸಚಿವ ಆನಂದ್‍ಸಿಂಗ್ ಮುಂದಾಗಿರುವುದು ಶ್ಲಾಘನೀಯವಾಗಿದ್ದು, ಶೀಘ್ರವೇ ಉದ್ಘಾಟನೆ ಕಾರ್ಯ ನೆರವೇರಲಿ ಎಂದು ಹಾರೈಸಿದರು. ಸಮಾಜ ಸೇವಕ, ಸಚಿವರ ಪತ್ರ ಸಿದ್ದಾರ್ಥಸಿಂಗ್ ಮಾತನಾಡಿ, ಬಸವಣ್ಣನವರು ಮಾನವ ಕುಲದ ಉದ್ದಾರಕ್ಕೆ ಶ್ರಮಿಸಿದ್ದು, ವಚನಗಳ ಮೂಲಕ ಇಡೀ ವಿಶ್ವಕ್ಕೆ ಗುರುವಾಗಿದ್ದಾರೆಂದು ತಿಳಿಸಿದರು. ವೀರಶೈವ ಲಿಂಗಾಯತ ಸಮಾಜದ ಹಿರಿಯರ ಸಲಹೆ ಸೂಚನೆಗಳು, ಮಾರ್ಗದರ್ಶನದಿಂದ ಸಚಿವ ಆನಂದ್ ಸಿಂಗ್ ಈ ಮಹತ್ಕಾರ್ಯಕ್ಕೆ ಮುಂದಾಗಿದ್ದಾರೆಂದು ತಿಳಿಸಿದರು. ಸುಮಾರು 20 ಚದರ ಅಡಿಗಳ ಸುತ್ತಳತೆಯಲ್ಲಿ ವೃತ್ತ ನಿರ್ಮಾಣಗೊಳ್ಳಲಿದ್ದು, ಪುತ್ಥಳಿ 25 ಅಡಿ ಎತ್ತರ ಇರಲಿದೆ, ಮೂರು ತಿಂಗಳ ಅವಧಿಯಲ್ಲಿ ನಿರ್ಮಾಣ ಪೂರ್ಣಗೊಳಿಸುವುದಾಗಿ ವಾಸ್ತುಶಿಲ್ಪಿ ತಿಳಿಸಿದ್ದಾರೆಂದರು. ಕಾರ್ಯಕ್ರಮದಲ್ಲಿ ವೀರಶೈವ ಲಿಂಗಾಯತ ಸಮಾಜದ ಪ್ರಮುಖ ಮುಖಂಡರ ಭಾಗವಹಿಸಿದ್ದರು.