ಬಸವಣ್ಣ ನವರ ಪತ್ನಿ ಶರಣೆ ನೀಲಾಂಬಿಕೆ ಜಯಂತಿ

(ಸಂಜೆವಾಣಿ ವಾರ್ತೆ)
ಭಾಲ್ಕಿ :ನ.19:ಕಲ್ಯಾಣ ಚಾಲುಕ್ಯರ ಮಾಂಡಲಿಕ ರಾಜನಾಗಿದ್ದ ಪೆರ್ಮಾಡಿಯ ಆಸ್ಥಾನದಲ್ಲಿ ಬಲದೇವರಸ ಮತ್ತುಸಿದ್ದರಸರು ಮಂತ್ರಿಗಳಾಗಿದ್ದರು. ರಾಜ ಪೆರ್ಮಾಡಿಯ ಪತ್ನಿಗೆ ಬಿಜ್ಜಳ ಎಂಬ ಪುತ್ರರತ್ನ ಜನಿಸಿದ್ದ. ಮುಂದೆ ಮೂರು ವರ್ಷಗಳಲ್ಲಿ ಬಲದೇವ ಮಂತ್ರಿಗೆ ಗಂಗಾಂಬಿಕೆ ಎಂಬ ಮಗಳು ಜನಿಸಿದಳು. ಸಿದ್ಧರಸ ದಂಡನಾಯಕರಿಗೆ ನೀಲಾಂಬಿಕೆ ಎಂಬ ಮಗಳು ಜನಿಸಿದಳು. ಇದೇ ಕಾಲಕ್ಕೆ ಪೆರ್ಮಾಡಿಯ ರಾಜನಿಗೆ ಕರ್ಣದೇವ ಎಂಬ ಇನ್ನೊಬ್ಬ ಪುತ್ರ ಜನಿಸಿದಾಗ ಹೆರಿಗೆಯ ನಂತರ ಪೆರ್ಮಾಡಿ ರಾಜನ ಪತ್ನಿಯು ನಿಧನಳಾಗಲು ಮಗು ಕರ್ಣದೇವ ಸಿದ್ಧರಸಮಂತ್ರಿಯ ಪತ್ನಿ ಪದ್ಮಗಂಧಿಯುತನ್ನ ಮಗಳು ನೀಲಲೋಚನೆ ಯೊಂದಿಗೆ ಕರ್ಣದೇವನಿಗೂ ಎದೆಹಾಲು ಕುಡಿಸುತ್ತಾ ಜೋಪಾನವಾಗಿ ಬೆಳೆಸಿದಳು. ಹೀಗಾಗಿ ಬಿಜ್ಜಳನಿಗೆ ಕರ್ಣದೇವ ತಮ್ಮನಾದ ನೀಲಾಂಬಿಕೆ ಆತನ ತಂಗಿಯಂತೆ ಬೆಳೆದಳು. ಬಿಜ್ಜಳನು ಪೆರ್ಮಾಡಿಯ ನಂತರ ಮಂಗಳವಾಡಿಯ ರಾಜನಾದನು. ನೀಲಾಂಬಿಕೆ ಯು ಅರಮನೆಯಲ್ಲಿ ಅಣ್ಣ ಬಿಜ್ಜಳನ ಪ್ರೀತಿಯ ತಂಗಿಯಾಗಿ ಬೆಳೆದಳು. ಬಲದೇವರಸ ಮಂತ್ರಿಯ ಮನೆಯಲ್ಲಿ ಗಂಗಾಂಬಿಕೆಯು ಶಸ್ತ್ರವಿದ್ಯೆ ಕಲಿಯುತ್ತಾ ವೀರ ಕುವರಿಯಾಗಿ ಬೆಳೆದರೆ, ಬಿಜ್ಜಳನ ಅರಮನೆಯಲ್ಲಿ ನೀಲಾಂಬಿಕೆಯು ಸಂಗೀತ ಶಾಸ್ತ್ರ , ಚಿತ್ರಕಲೆ ಕಲಿಯುತ್ತ ಕಲಾನಿಪುಣೆಯಾಗಿ ಬೆಳೆದಳು. ಕಪ್ಪಡಿಸಂಗಮದಿಂದ ಮಂಗಳವಾಡಿಗೆ ಬಸವಣ್ಣನವರ ಆಗಮನ ವಾಗುತ್ತದೆ. ಬಸವಣ್ಣನವರಿಗೆ ಬಿಜ್ಜಳನಲ್ಲಿ ಕರಣಿಕ ಕಾಯಕ ದೊರೆಯುತ್ತದೆ. ಗಂಗಾಂಬಿಕೆ ಯನ್ನು ಬಸವಣ್ಣನವರಿಗೆ ಕೊಟ್ಟು ಮದುವೆ ಮಾಡಲಾಗಿತ್ತು. ಬಿಜ್ಜಳನು ಬಸವಣ್ಣನವರನ್ನು ಸಿದ್ದರಸ ಮಂತ್ರಿಯ ಮರಣದ ನಂತರ ಮಂತ್ರಿಯನ್ನಾಗಿ ನೇಮಿಸಿದನು. ತದನಂತರ ಬಸವಣ್ಣ ಹಾಗೂ ನೀಲಾಂಬಿಕೆಯ ವಿವಾಹವಾಗುತ್ತದೆ. ನೀಲಾಂಬಿಕೆ, ಗಂಗಾಂಬಿಕೆಯರು ಬಸವಣ್ಣನವರ ಧರ್ಮರಥಕ್ಕೆ ಎರಡು ಗಾಲಿಗಳಾಗಿ ಕಾರ್ಯನಿರ್ವಹಿಸುತ್ತಿದ್ದರು. ಅನುಭವ ಮಂಟಪದಲ್ಲಿ ಗಂಗಾಂಬಿಕೆ ಗುರುಪ್ರಾಣಿಯಾಗಿ, ನೀಲಾಂಬಿಕೆ ಲಿಂಗಪ್ರಾಣಿಯಾಗಿ ಬಸವಣ್ಣ ಜಂಗಮಪ್ರಾಣಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.ಗಂಗಾಂಬಿಕೆಗೆ ಸಿದ್ಧರಸ ಎಂಬ ಪುತ್ರನು ಜನಿಸಿ ಬಾಲ್ಯದಲ್ಲಿಯೇ ಲಿಂಗೈಕ್ಯನಾಗುತ್ತಾನೆ. ನೀಲಾಂಬಿಕೆಗೆ ಬಾಲಸಂಗಯ್ಯ ಎಂಬ ಮಗನಿದ್ದನು. ಶೀಲವಂತ-ಲಾವಣ್ಯರ ವಿವಾಹದ ನಂತರ ಕಲ್ಯಾಣ ಕ್ರಾಂತಿಯಾಗಿ ಶರಣರಿಗೆ ಎಳೆಹೊಟ್ಟೆ ಶಿಕ್ಷೆಯಾಗಿ ಬಸವಣ್ಣನವರು ಕೂಡಲಸಂಗಮಕ್ಕೆ ಹೋಗುತ್ತಾರೆ. ರಾಜ ಬಿಜ್ಜಳನ ಹತ್ಯೆಯಾಗುತ್ತದೆ. ಶರಣರಿಗೂ ಬಿಜ್ಜಳನ ಸೈನಿಕರಿಗೂ ಯುದ್ಧವೇ ನಡೆಯುತ್ತದೆ ಶರಣರ ಸಂಕುಲ ತಮ್ಮ ಅನುಕೂಲ ಸ್ಥಳಗಳಿಗೆ ಹೋಗುತ್ತಾರೆ. ಬಸವಣ್ಣನವರು ಹಡಪದ ಅಪ್ಪಣ್ಣನನ್ನು ನೀಲಾಂಬಿಕೆಯವರಿಗೆ ಕರೆತರಲು ಬಸವಕಲ್ಯಾಣಕ್ಕೆ ಕಳುಹಿಸುತ್ತಾರೆ. ಆಗ ನೀಲಾಂಬಿಕೆಯು ನಾನು ಕಲ್ಯಾಣದಲ್ಲಿಯೇ ಬಯಲಾಗುವುದಾಗಿ ಹೇಳಿದರು. ಪರಿಪರಿಯಾಗಿ ವಿನಂತಿಸಿ ನೀಲಮ್ಮ ತಾಯಿಯನ್ನು ಅಪ್ಪಣ್ಣ ಕರೆದುಕೊಂಡು ಕೂಡಲಸಂಗಮಕ್ಕೆ ಹೋಗುವಾಗ ಬೆಳಗಿನ ಜಾವ ಕೃಷ್ಣಾನದಿಯ ದಡಕ್ಕೆ ಪೂಜೆಗೆ ಕುಳಿತು ಕರಲಿಂಗದಲ್ಲಿ ಬಸವರೂಪ ನಿರೂಪವಾಗತೊಡಗಿತ್ತು ಅತ್ತ ಬಸವಣ್ಣ ಇತ್ತ ನೀಲಾಂಬಿಕೆ ಬಯಲಿನಲ್ಲಿ ಮಹಾಬಯಲಾದರು.
ಪ್ರತಿವರ್ಷ ಗೌರಿ ಹುಣ್ಣಿಮೆಯಂದು ನೀಲಾಂಬಿಕೆ ಯವರ ಜಯಂತಿಯನ್ನು ಆಚರಿಸಲಾಗುತ್ತದೆ.