ಬಸವಣ್ಣ ತತ್ವಾದರ್ಶ ಪಾಲಿಸಲು ಕರೆ

ಮಹದೇವಪುರ ಕ್ಷೇತ್ರದ ವರ್ತೂರಿನಲ್ಲಿ ಬಸವ ಜಯಂತಿ ಆಚರಣೆಯಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ಬೆಂಗಳೂರು ಪೂರ್ವ ತಾಲೂಕು ವೀರಶೈವ ಲಿಂಬಾವಳಿ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮಹೇಂದ್ರ ಮೋದಿ ಪುಷ್ಪ ನಮನ ಸಲ್ಲಿಸಿದರು.

ಕೆ.ಆರ್.ಪುರ,ಮೇ.೧೧-ಸಮಾಜದಲ್ಲಿ ಬೇರೂರಿದ ಜಾತಿ ವ್ಯವಸ್ಥೆ ಹಾಗೂ ಅಸಮಾನತೆ ಹೋಗಲಾಡಿಸಿ ಸಮಾನತೆಗಾಗಿ ಹೋರಾಡಿದ ಕಾಯಕಯೋಗಿ ಬಸವಣ್ಣನವರು ಸಮಾಜಕ್ಕೆ ಅನೇಕ ಕೊಡುಗೆಗಳನ್ನು ನೀಡಿದ್ದಾರೆ, ಅವರ ಆದರ್ಶ ತತ್ವ ಸಿದ್ಧಾಂತಗಳನ್ನು ಪ್ರತಿಯೊಬ್ಬರೂ ತಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡು ಅವರು ತೋರಿದ ಮಾರ್ಗದಲ್ಲಿ ನಡೆಯಬೇಕಿದೆ ಎಂದು ಬೆಂಗಳೂರು ಪೂರ್ವ ತಾಲೂಕು ವೀರಶೈವ ಲಿಂಗಾಯತ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮಹೇಂದ್ರ ಮೋದಿ ಅವರು ತಿಳಿಸಿದರು.
ಮಹದೇವಪುರ ಕ್ಷೇತ್ರದ ವರ್ತೂರಿನಲ್ಲಿ ಬಸವ ಜಯಂತಿ ಆಚರಣೆಯಲ್ಲಿ ಅವರು ಮಾತನಾಡಿದರು.
ಬಸವಣ್ಣನವರು ಹಲವು ಸಾಮಾಜಿಕ ಸುಧಾರಣಾ ಕಾರ್ಯಗಳಿಂದಲೇ ಪ್ರಸಿದ್ಧಿಯಾದವರು. ಸಮಾಜದಲ್ಲಿ ಜಾತಿ ವ್ಯವಸ್ಥೆಯಿಂದ ಸಂಪೂರ್ಣವಾಗಿ ಮುಕ್ತವಾಗಿರಬೇಕು. ಸಮಾನತೆ ಇರಬೇಕು ಎಂದು ಬಯಸಿದ್ದರು ಎಂದರು. ಕಾಯಕ ಯೋಗಿ ಬಸವಣ್ಣ ಅವರು ತಮ್ಮ ದೂರದೃಷ್ಟಿ ಚಿಂತನೆ ಯಿಂದ ಅಂದಿನ ಕಾಲದಲ್ಲಿ ಅನುಭವ ಮಂಟಪ ನಿರ್ಮಿಸುವ ಮೂಲಕ ವಿಶ್ವದಲ್ಲೇ ಮೊದಲ ಬಾರಿಗೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಡಿಪಾಯ ಹಾಕಿದ ಅವರು ನಮ್ಮೆಲ್ಲರಿಗೂ ಪ್ರೇರಣೆ ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಅವರ ಜೀವನ, ಆದರ್ಶ ಹಾಗೂ ತತ್ವ ಸಿದ್ಧಾಂತಗಳನ್ನು ಅಳವಡಿಸಿಕೊಂಡು ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಬೇಕು ಎಂದು ತಿಳಿಸಿದರು
ಇವನಾರವ ಇವನಾರವ ಎನ್ನಿಸದೇ ಇವನಮ್ಮವ ಇವನಮ್ಮವ ಎಂದೆನಿಸಯ್ಯ ಎಂದು ಬಸವಣ್ಣನವರು ಹೇಳಿದಂತೆ ಎಲ್ಲರನ್ನೂ ಸಮಾನವಾಗಿ ಕಾಣಬೇಕು. ಮೇಲು ಕೀಳಿನ ವಿರುದ್ಧ ಹೋರಾಡಿದ ಅವರ ತತ್ವಾದರ್ಶಗಳನ್ನು ಪಾಲಿಸಬೇಕು ಎಂದು ಹೇಳಿದರು. ಹನ್ನೆರಡನೇ ಶತಮಾನದ ಬಹುದೊಡ್ಡ ಸಮಾಜ ಸುಧಾರಕರು ಬಸವಣ್ಣನವರು. ಬಸವಣ್ಣನವರ ಸಾರಥ್ಯದಲ್ಲಿ ನಡೆದ ಸುಧಾರಣೆಯ ಪ್ರಯತ್ನ ಒಂದು ಸಾಮಾಜಿಕ ಚಳವಳಿಯಾಗಿ ರೂಪುಗೊಂಡಿತ್ತು. ಇವರ ತತ್ವ, ಆದರ್ಶಗಳು, ಚಿಂತನೆಗಳು ಇಂದಿಗೂ ಪ್ರಸ್ತುತ. ಇದು ಜೀವನ ಪಾಠವೂ ಹೌದು. ವಿಶ್ವಗುರು ಬಸವಣ್ಣನವರು ಹಾಕಿಕೊಟ್ಟ ದಾರಿಯಲ್ಲಿ ಸಾಗಿದರೆ ಜೀವನ ಸುಖಮಯ, ಸಮಾಜವೂ ಸುಂದರ. ‘ಕಾಯಕವೇ ಕೈಲಾಸ’ ಎಂದು ಕಲಿಸಿಕೊಟ್ಟವರು ಬಸವಣ್ಣನವರು ಎಂದರು.
ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರಾದ ಬಿ.ಎಸ್.ಶ್ರೀಧರ್,ವೆಂಕಟೇಶ ರೆಡ್ಡಿ, ಆರ್.ಸಿ.ಬಾಬು, ಕೃಪಾಕರ್, ಕವಿತಾ, ಅನಿತಾ, ಶ್ರೀನಿವಾಸ್, ಬಿ.ವಿ.ಮಂಜುನಾಥ್, ರಾಜೇಶ್ ಇತರರು ಇದ್ದರು.