ಬಸವಣ್ಣ ಜಗತ್ತಿನ ಶ್ರೇಷ್ಠ ದಾರ್ಶನಿಕ : ಡಾ. ಶಿಂಧೆ

ಔರಾದ್ :ಎ.24: ಬಸವಣ್ಣ ಜಗತ್ತಿನ ಶ್ರೇಷ್ಠ ದಾರ್ಶನಿಕ. ಸಮಾಜದಲ್ಲಿನ ಎಲ್ಲ ಅಸಮಾನತೆಗಳನ್ನು ತೊಡೆದು ಹಾಕಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಡಾ. ಭೀಮಸೇನರಾವ ಶಿಂಧೆ ಹೇಳಿದರು. ಪಟ್ಟಣದಲ್ಲಿ ವಿಶ್ವಗುರು ಬಸವಣ್ಣನವರ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮನುಷ್ಯ ಸಮಾಜ ಜೀವಿಯಾಗಲು ಬಸವ ಧರ್ಮದಂತೆ ಎಲ್ಲರನ್ನು ಸಮಾನತೆಯಿಂದ ನಮ್ಮವರೆಂದು ತಿಳಿಯಬೇಕು. 12ನೇ ಶತಮಾನದಲ್ಲಿ ಬಸವಣ್ಣನವರು ಎಲ್ಲ ವರ್ಗದವರನ್ನು ಸಮಾನತೆಯಿಂದ ಕಂಡು ಎಲ್ಲರನ್ನು ಮೇಲಕ್ಕೆ ಬರುವಂತೆ ಮಾಡಿದರು ಎಂದರು.

ಜಗಜ್ಯೋತಿ ಬಸವಣ್ಣನವರ ಭಾವಚಿತ್ರವಿಟ್ಟು ದೀಪ ಹಚ್ಚಿ, ಹೂವು ಹಾಕಿ ನಮಿಸುವುದರಿಂದ ಮನುಷ್ಯನ ಜೀವನ ಸಾರ್ಥಕತೆ ಆಗುವುದಿಲ್ಲ. ಬದಲಾಗಿ ಅವರ ವಚನ, ತತ್ವ ಸಿದ್ಧಾಂತಗಳನ್ನು ಎಲ್ಲರೂ ಓದಿ ಅರ್ಥ ಮಾಡಿಕೊಂಡು, ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಮಾತ್ರ ಅವರಿಗೆ ನಾವು ಗೌರವ ಕೊಟ್ಟಂತಾಗುತ್ತದೆ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜಕುಮಾರ ಹಲಬರ್ಗೆ, ಅಮರ ಜಾಧವ್, ನೇಹರು ಪಾಟೀಲ್, ಆನಂದ ಚವ್ಹಾಣ, ಬಸವರಾಜ ದೇಶಮುಖ, ಚನ್ನಪ್ಪ ಉಪ್ಪೆ, ಬಿ. ಪ್ರಹ್ಲಾದ್ ಸೇರಿದಂತೆ ಅನೇಕರಿದ್ದರು.