ಬಸವಣ್ಣ ಕೇವಲ ಪೂಜೆಯ ವಸ್ತುವಾಗಬಾರದು

ಸಾಣೇಹಳ್ಳಿ ಫೆ. 19; ಬಸವಣ್ಣನವರ ಭಾವಚಿತ್ರವನ್ನು ಸರಕಾರಿ ಶಾಲಾ-ಕಾಲೇಜು, ಕಛೇರಿ, ಮನೆಗಳಲ್ಲಿ ಹಾಕಬೇಕು ಎನ್ನುವ ಆಶಯ ಸರಕಾರದ್ದು. ಇದರ ಮೂಲಕ ಮಕ್ಕಳಿಗೆ ಬಸವಣ್ಣನವರ ಪರಿಚಯ ಆಗಬೇಕು. ಬಸವಣ್ಣ ಕೇವಲ ಪೂಜೆಯ ವಸ್ತುವಾಗಬಾರದು. ಬಸವಣ್ಣನವರ ಆಶಯಗಳನ್ನು ನಿಮ್ಮ ಮನೆ ಮನಗಳಲ್ಲಿ ಬಿತ್ತಿಕೊಂಡು ಅವುಗಳನ್ನೇ ಬೆಳೆದರೆ ನಿಮ್ಮ ಬದುಕು ಹಸನಾಗುತ್ತದೆ ಎಂದು ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಹೇಳಿದರು.ಇಲ್ಲಿನ ಶ್ರೀಮಠದಲ್ಲಿ ನಡೆದ ವಿಶ್ವಗುರು ಬಸವಣ್ಣ `ಸಾಂಸ್ಕೃತಿಕ ನಾಯಕ’ ಭಾವಚಿತ್ರ ಬಿಡುಗಡೆ ಸಮಾರಂಭ ಹಾಗೂ ‘ಮಾನವೀಯ ಸಮಾಜ ನಿರ್ಮಾಣದಲ್ಲಿ ವಚನ ಸಾಹಿತ್ಯ’ ಸಂವಾದ ಕಾರ್ಯಕ್ರಮದಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಟನಮನ ಸಲ್ಲಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ವಿಶ್ವದ ಅನೇಕ ಸಂತರಲ್ಲಿ, ಶರಣರಲ್ಲಿ, ಸಾಮಾಜಿಕ ನೇತಾರರಲ್ಲಿ ಪ್ರಥಮ ಸ್ಥಾನ ಲಭ್ಯವಾಗುವಂಥದ್ದು ಬಸವಣ್ಣನವರಿಗೆ. ಕಾರಣ ಬಸವಣ್ಣನವರು ತಳಮೂಲದ ಸಂಸ್ಕೃತಿಯಿಂದ ಸಮಾಜವನ್ನು ಕಟ್ಟುವ ಕಾರ್ಯ ಮಾಡಿದರು. ಅಜ್ಞಾನ,  ಮೂಢನಂಬಿಕೆ, ಮೌಢ್ಯವನ್ನು ಕಿತ್ತುಹಾಕುವ ಕಾರ್ಯದಲ್ಲಿ ಯಶಸ್ವಿಯಾಗಿ ಸಮಸಮಾಜ ಕಟ್ಟುವ ಅವರ ಕನಸು ನನಸಾಯಿತು.ಎಲ್ಲ ಸಂಪತ್ತು ನಮ್ಮಲ್ಲೇ ಇದ್ದಾಗ ಮತ್ತೆ ಬೇರೆ ಕಡೆ ಆ ಸಂಪತ್ತನ್ನು ಹುಡುಕಿಕೊಂಡು ಹೋಗುತ್ತಿರುವುದು ನಾಚಿಕೆಗೇಡಿನ ಸಂಗತಿ. ಈ ಹಿನ್ನಲೆಯಲ್ಲಿ ಇವತ್ತು ಕರ್ನಾಟಕ ಸರಕಾರವಿಶ್ವಗುರು ಬಸವಣ್ಣನವರನ್ನು ‘ಸಾಂಸ್ಕೃತಿಕ ನಾಯಕ’ಎಂದುಘೋಷಣೆ ಮಾಡಿದೆ. ಬಸವಣ್ಣನವರು ಮೇಲ್ವರ್ಗದ ಜನರನ್ನು ತಮ್ಮ ಕನಸನ್ನು ನನಸನ್ನಾಗಿ ಮಾಡಿಕೊಳ್ಳಲಿಕ್ಕೆ ಬಳಸಿಕೊಳ್ಳಲಿಲ್ಲ. ತಳಸಮುದಾಯದ ಜನರನ್ನು ಸಂಘಟಿಸಿ ಅವರಲ್ಲಿ ಆತ್ಮವಿಶ್ವಾಸವನ್ನು ಮೂಡಿಸಿ ತನ್ಮೂಲಕ ಸಮಾಜದಲ್ಲಿ ಅದ್ಭುತವಾದ ಬದಲಾವಣೆ ತಂದರು. ಅಂತಹ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಅಂತ ಹೇಳಿ ಸರಕಾರ ಗೌರವಿಸಿದ್ದು ಇಡೀ ಕನ್ನಡ ನಾಡಿಗೆ, ಭಾರತಕ್ಕೆ ಗೌರವ ತಂದುಕೊಟ್ಟ ಹಾಗೆ ಎಂದರು. ಚಿಂತಕ ಎಸ್ ಜಿ ಸಿದ್ಧರಾಮಯ್ಯ; ಮಾತನಾಡಿ ಮಕ್ಕಳಿಗೆ ಬಸವಣ್ಣನವರ ಸಾಂಸ್ಕೃತಿಕ ವ್ಯಕ್ತಿತ್ವ ಪರಿಚಯಿಸುವ ಹಿನ್ನಲೆಯಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬಸವಣ್ಣನವರ ವಚನ ನುಡಿಯನ್ನು ನಡೆಯನ್ನಾಗಿಸಿಕೊಂಡಾಗ ಮನುಷ್ಯ ಮನುಷ್ಯನಾಗಿ ಬಾಳಲಿಕ್ಕೆ ಸಾಧ್ಯ. ಈ ಸಮಾಜದೊಳಗೆ ಯಾವ ರೀತಿ ಬದುಕಬೇಕೆಂಬುದನ್ನು ವಚನಗಳಲ್ಲಿ ಅಡಕವಾಗಿದೆ. ಆದರೆ ನೊಂದ ಜೀವಿಗಳಿಗೆ ಹೊಸತನ ಕಟ್ಟುವ ನಿಟ್ಟಿನಲ್ಲಿ ಇದ್ದರು ಶರಣರು ಸಮಾಜವನ್ನು ಕಟ್ಟಿದರು. ಹುಟ್ಟಿನ ಮೂಲವನ್ನು ಕಳೆದುಕೊಂಡು ಕೆಳಗಿನ ತಳಮೂಲದ ಜನರನ್ನು ಅಪ್ಪಿ ತಪ್ಪಿಕೊಂಡು ಅವರನ್ನು ಮುನ್ನೆಲೆಗೆ ತಂದು ಸಮಾಜವನ್ನು ಕಟ್ಟಿ ಬೆಳೆಸಿದರು. ಬಸವಣ್ಣನವರು ಬಹುತ್ವದ ಸಂಕೇತ. ಈ ದೇಶದಲ್ಲಿ ಎಲ್ಲ ಧರ್ಮ, ಭಾಷೆಗಳಿವೆ. ಇವೆಲ್ಲವನ್ನು ಒಳಗೊಳ್ಳುವಂಥದ್ದೇ ಬಸವಣ್ಣ. ಬಸವಣ್ಣ ಎಲ್ಲರನ್ನು ಒಳಗೊಂಡು ಎಲ್ಲರೊಳಗೆ ತಾನೊಬ್ಬರ ಎನ್ನುವ ರೀತಿಯಲ್ಲಿ ಬದುಕಿದಂಥವರು. ಬಸವಣ್ಣ ನಮ್ಮ ಕನ್ನಡ ಪ್ರಜ್ಞೆಯ ಪ್ರತೀಕ.೧೨ನೇಯ ಶತಮಾನದಲ್ಲಿ ಬದುಕಿನ ಪರಿಭಾಷೆಯಲ್ಲಿ ಹುಟ್ಟಿಕೊಂಡಿದ್ದು ಲಿಂಗಾಯತ ಧರ್ಮ. ಶರಣರು ಸನಾತನದ ವಿರುದ್ಧವಾಗಿ ಪುರಾತನ ಎಂದು ಹೇಳಿದರು. ಲಿಂಗಾಯತ ಧರ್ಮ ನಿಸರ್ಗಕ್ಕೆ ಪೂರಕವಾಗಿರುವ ಧರ್ಮ.ಈಗಲೂ ಎಷ್ಟೋ ಮಠಗಳಲ್ಲಿ ಹೋಮ – ಹವನ ನಡೆಯುತ್ತಿರುವುದನ್ನು ನಾಚಿಕೆಗೇಡಿನ ಸಂಗತಿ. ಶರಣರು ವೈದಿಕ ಪಠ್ಯಗಳನ್ನು ವಿರೋಧಿಸುವರು. ಕೇಡಿನ ಮೂಲ ಕುರಿತಂತೆ ಅರಿವಿನ ಎಚ್ಚರದೊಳಗೆ ಮಾತನಾಡುವಂಥವರು. ದಾನದ ವಿರುದ್ಧವಾಗಿ ದಾಸೋಹ ರೂಪ ಕೊಟ್ಟವರು. ಅನೇಕ ವರ್ಗದವರು ನಮ್ಮ ಸಾಂಸ್ಕೃತಿಕ ಗುಲಾಮರನ್ನಾಗಿ ಮಾಡಿಕೊಂಡಿದ್ದಾರೆ. ಅದಕ್ಕೆ ಕಾರಣ ನಮ್ಮಲ್ಲಿನ ಅಜ್ಞಾನ. ಅಜ್ಞಾನವನ್ನು ಹೋಗಲಾಡಿಸುವ ಕೆಲಸ ಮೊದಲು ಆಗಬೇಕು. ವಚನ ಸಾಹಿತ್ಯವನ್ನಿಟ್ಟುಕೊಂಡು ಕಮ್ಮಟಗಳನ್ನು ಏರ್ಪಡಿಸಿ ಬಸವ ವಿಚಾರಗಳನ್ನು ಪ್ರಸಾರ ಮಾಡಬೇಕು. ದಾಸೋಹಕ್ಕೆ ವಿರುದ್ಧವಾದ ಪ್ರಕ್ರಿಯೆ ಬಜೆಟ್. ಮಠಗಳಿಗೆ ಸರಕಾರದಿಂದ ಕೋಟಿ ಕೋಟಿ ಹಣ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದರಿಂದ ಮಠವೂ ಕೂಡ ಅಪವೀತ್ರೀಕರಣವಾಗಿದೆ. ಕಾಯಕನೀತಿ ಪ್ರತಿಯೊಬ್ಬರಲ್ಲಿ ಬರಬೇಕಾಗಿದೆ. ವಚನಗಳು ನಮ್ಮ ಬದುಕಿನ ಭಾಗವಾಗಬೇಕು. ಹಂಗಿನಿಂದ ಬಿಡಿಸಿಕೊಳ್ಳುವ ಮುಖೇನ ನಮ್ಮ ಹಕ್ಕನ್ನು ಚಲಾಸಿಕೊಳ್ಳಬೇಕು. ಶ್ರೇಣೀಕರಣದ ವರ್ಗದೊಳಗೆ ಬಸವಣ್ಣ ನೀಚಾತಿನೀಚ ಎನಿಸಿಕೊಂಡು ಎಲ್ಲರಿಗೂ ಹತ್ತಿರವಾದರು. ನಿಗರ್ಸದ ಪರವಾಗಿರುವ ಉಪನಿಷತ್ತುಗಳನ್ನು ಶರಣರು ವಿರೋಧಿಸಿದವರಲ್ಲ. ನಮ್ಮ ನರಳುವಿಕೆಯಿಂದ ಹೊರಬರೋದಕ್ಕೆ ವಚನ ಸಾಹಿತ್ಯ ದಿವ್ಯವೌಷಧಿಯಾಯಿತು. ಹೆಣ್ತನ ಗಂಡ್ತನ ಎಂಬುದು ಅಂದೊಂದು ಅರಿವು, ಪ್ರಜ್ಞೆಯ ಸಂಕೇತ ಎಂದರು. ವೇದಿಕೆಯ ಮೇಲೆ ಚಿಂತಕ ಶಿವನಕೆರೆ ಬಸವಲಿಂಗಪ್ಪ, ಐ ಜಿ ಚಂದ್ರಶೇಖರಯ್ಯ ಇದ್ದರು. ಶಿವಸಂಚಾರದ ಕಲಾವಿದ ನಾಗರಾಜ್ ಹೆಚ್ ಎಸ್ ಹಾಗೂ ಶರಣ ವಚನಗೀತೆಗಳನ್ನು ಹಾಡಿದರು. ಮುಖ್ಯೋಪಾಧ್ಯಾಯ ಶಿವಕುಮಾರ್ ಬಿ ಎಸ್ ಸ್ವಾಗತಿಸಿದರೆ ಮಲ್ಲಿಕಾರ್ಜುನ್ ನಿರೂಪಿಸಿ ವಂದಿಸಿದರು. ಉಭಯ ಶಾಲೆಗಳ ಮುಖ್ಯೋಪಾಧ್ಯಾಯರು, ಅಧ್ಯಾಪಕರು, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.