ಬಸವಣ್ಣ ಎಂದಿಗೂ ಕನ್ನಡ ನಾಡಿನ ಸಾಂಸ್ಕೃತಿಕ ರಾಯಭಾರಿ

ತುಮಕೂರು, ಏ. ೧- ಕನ್ನಡ ನಾಡಿನ ಸಾಂಸ್ಕೃತಿಕ ರಾಯಭಾರಿ ಆಗಿದ್ದವರು, ಈಗಲೂ ಆಗಿರುವವರು ಜಗಜ್ಯೋತಿ ಬಸವಣ್ಣನವರು ಎಂದು ತುಮಕೂರಿನ ನಿಸರ್ಗಧಾಮದ ಯೋಗತಜ್ಞ, ಆಯುರ್ವೇದ ಕೃತಿಕರ್ತೃ ಜಿ.ವಿ.ವಿ.ಶಾಸ್ತ್ರಿ ಅಭಿಪ್ರಾಯಪಟ್ಟರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ ವತಿಯಿಂದ ಮಾರನಹಳ್ಳಿ ಎಂ.ರೇಣುಕಪ್ಪ ನೀಲಮ್ಮ ದತ್ತಿ ಹಾಗೂ ಮೂಗನಹಳ್ಳಿ ಲಿಂ. ಯಜಮಾನ್ ರೇವಣಸಿದ್ದಪ್ಪ ಮತ್ತು ಪುಟ್ಟತಾಯಮ್ಮ ದತ್ತಿ ಕಾರ್ಯಕ್ರಮ ಎಸ್.ವಿ.ರವೀಂದ್ರನಾಥ ಠಾಗೂರ್ ರವರ ಮನೆ ಗ್ಲೋಬಲ್ ಪೀಸ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.
ಈ ನಾಡು ಕಂಡ ಶ್ರೇಷ್ಠ ಕ್ರಾಂತಿಕಾರಿ ಚಿಂತಕ, ವೈಚಾರಿಕ ಮನೋಭಾವದ ಪ್ರಜಾಪ್ರಭುತ್ವದ ಹರಿಕಾರ ಬಸವಣ್ಣನವರನ್ನು ಅವರ ವಚನಗಳನ್ನು ಇನ್ನೂ ಹೆಚ್ಚು ಹೆಚ್ಚು ಅಧ್ಯಯನದ ಮೂಲಕ ಅರ್ಥಮಾಡಿಕೊಳ್ಳಿ ಎಂದು ಕರೆ ನೀಡಿದರು.
ತುಮಕೂರು ವಿ.ವಿ. ಕನ್ನಡ ಪ್ರಾಧ್ಯಾಪಕ ಡಾ. ವೆಂಕಟರೆಡ್ಡಿ ರಾಮರೆಡ್ಡಿ ಮಾತನಾಡಿ, ಇಂದಿನ ಯುವಪೀಳಿಗೆ ತಾಂತ್ರಿಕತೆಯಲ್ಲೇ ಮುಳುಗಿದ್ದರೂ ಸಾಹಿತ್ಯ ಅಧ್ಯಯನ ಮೈಗೂಡಿಸಿಕೊಳ್ಳುವಂತೆ ಹೇಳಿ ವಚನಗಳ ಅಧ್ಯಯನ ಯುವಕರಿಗೆ ದಾರಿ ದೀಪ ಎಂದರು.
ಜಿಲ್ಲಾ ಕದಳಿ ಮಹಿಳಾ ವೇದಿಕೆಯ ನಿಕಟಪೂರ್ವ ಅಧ್ಯಕ್ಷೆ ಲೋಕೇಶ್ವರಿ ಪ್ರಭು ಮಾತನಾಡಿ, ಆಯ್ದಕ್ಕಿ ಲಕ್ಕಮ್ಮ, ಸತ್ಯಕ್ಕ, ಸೂಳೆ ಸಂಕವ್ವೆ, ಮೋಳಿಗೆಯ ಮಹಾದೇವಿ, ಅಕ್ಕಮಹಾದೇವಿಯವರ ವಚನ ಆಧರಿಸಿ ಉಪನ್ಯಾಸ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಬೆಂಗಳೂರು ಗ್ರಾಮಾಂತರ ಜಿಲ್ಲೆ ಶಸಾಪ ಮಾಜಿ ಅಧ್ಯಕ್ಷ ಹೆಚ್.ಸಿ. ಪರಮಶಿವಯ್ಯ ಮಾತನಾಡಿ, ವಚನಗಳು ಕನ್ನಡ ಸಾಹಿತ್ಯದ ಅಮೃತ ನುಡಿಗಳು. ಎಲ್ಲರೂ ಓದಿ ಪಾವನರಾಗೋಣ ಎಂದರು.
ಜಿಲ್ಲಾ ಶ.ಸಾ.ಪ. ಉಪಾಧ್ಯಕ್ಷ ಹಾಗೂ ವಕೀಲ ಎಸ್.ವಿ.ರವೀಂದ್ರನಾಥ ಠಾಗೂರ್, ಪರಿಷತ್ತಿನ ಧ್ಯೇಯ, ಉದ್ದೇಶ, ಗುರಿಗಳನ್ನು ವಿವರಿಸಿದರು.
ವಿದ್ವಾನ್ ಎಂ.ಜಿ. ಸಿದ್ಧರಾಮಯ್ಯ ಮಾತನಾಡಿ, ಇಡೀ ತುಮಕೂರು ಜಿಲ್ಲೆಯಲ್ಲಿ ಪ್ರಸ್ತುತ ವರ್ಷ ೪೭ ದತ್ತಿಗಳು ಈ ತಿಂಗಳು ಮುಗಿದಿವೆ. ಮುಂದಿನ ವರ್ಷ ೫೨ ದತ್ತಿಗಳಾಗಿವೆ ಎಂದು ತಿಳಿಸಿ ದತ್ತಿದಾನಿಗಳ ಸ್ಮರಣೆ ಮಾಡಿದರು. ದತ್ತಿ ಕಾರ್ಯಕ್ರಮಗಳ ಮೂಲಕ ವಚನ ಸಾಹಿತ್ಯ ಪ್ರಸಾರವೂ ಆಗುತ್ತಿದೆ ಎಂದರು.
ಶಿವಲಿಂಗಯ್ಯ, ಭವಾನಮ್ಮ ಗುರುಮಲ್ಲಪ್ಪ ವಚನ ಗಾಯನ ಮಾಡಿದರು. ಈಚನೂರು ರಾಜಶೇಖರಯ್ಯ ಸ್ವಾಗತಿಸಿದರು. ಬಿ.ರಾಜಶೇಖರಯ್ಯ ವಂದಿಸಿದರು. ಮಿಮಿಕ್ರಿ ಈಶ್ವರಯ್ಯ ಕಾರ್ಯಕ್ರಮ ನಿರೂಪಿಸಿದರು.