ಬಸವಣ್ಣವರ ಬೆನ್ನೆಲುಬಾಗಿ ನಿಂತು ಸೇವೆಗೈದವರು ಶಿವಶರಣ ಹಡಪದ ಅಪ್ಪಣ್ಣನವರು: ದಯಾನಂದ ಹಡಪದ

(ಸಂಜೆವಾಣಿ ವಾರ್ತೆ)
ವಿಜಯಪುರ :ಜು.5: ವಿಜಯಪುರ ತಾಲೂಕಾ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ವತಿಯಿಂದ ಶಿವಶರಣ ಹಡಪದ ಅಪ್ಪಣ್ಣನವರ 889ನೇ ಜಯಂತಿಯನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ.06 ರಲ್ಲಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ದಯಾನಂದ ಸಿ.ಹಡಪದ ಮಾತನಾಡಿ, 12ನೇ ಶತಮಾನದಲ್ಲಿ ಬಸವಣ್ಣನವರ ಸಾಮಾಜಿಕ ಕ್ರಾಂತಿಯಾಗದೆ ಹೋಗಿದ್ದರೆ ಇಂದು ಸರ್ವ ಸಮುದಾಯವು ಒಟ್ಟಾಗಿ ಇರುತ್ತಿರಲಿಲ್ಲ. ಈ ಕ್ರಾಂತಿಗೆ ಶರಣ ಹಡಪದ ಅಪ್ಪಣ್ಣ ಸೇರಿದಂತೆ ಬಸವಾದಿ ಶರಣರ ಕೊಡುಗೆ ಅಪಾರವಾಗಿದೆ. ಶಿವಶರಣ ಹಡಪದ ಅಪ್ಪಣ್ಣನವರು ಬಸವಣ್ಣನವರಿಗೆ ಎಷ್ಟು ಆಪ್ತರಾಗಿದ್ದರೆ ಎಂದರೆ ಬಸವಣ್ಣನವರು ಹಡಪದ ಅಪ್ಪಣ್ಣನವರನ್ನು “ಅಪ್ಪಣ್ಣ” ಎಂದು ಕರೆಯುತ್ತಿದ್ದರು ಅದೇ ರೀತಿ ಬಸವಣ್ಣವರ ಬೆನ್ನೆಲುಬಾಗಿ ನಿಂತು ಸೇವೆಗೈದವರಲ್ಲಿ ಶಿವಶರಣ ಹಡಪದ ಅಪ್ಪಣ್ಣನವರು ಒಬ್ಬರಾಗಿದ್ದಾರೆ. ರಾಜ್ಯದಲ್ಲಿ 28 ಲಕ್ಷ ಜನಸಂಖ್ಯೆ ಹೊಂದಿರುವ ಹಡಪದ ಸಮುದಾಯ ಸಂಘಟಿತವಾಗಬೇಕಿದೆ. ಶಿವಶರಣರ ತತ್ವ ಸಿದ್ದಾಂತವನ್ನು ಇಂದಿನ ಮಕ್ಕಳಿಗೆ ಹೇಳಿಕೊಡಬೇಕಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾನಗರ ಪಾಲಿಕೆ ಸದಸ್ಯರಾದ ಕುಮಾರ ಗಡಗಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಮಹಿಳಾ ಸಂಘದ ಅಧ್ಯಕ್ಷರಾದ ಭಾರತಿ ಮ. ಹಡಪದ, ಶಿಕ್ಷಕರಾದ ಶ್ರೀಮತಿ ಎಸ್.ಬಿ.ಮಾಲಿಪಾಟೀಲ, ಸಹ ಶಿಕ್ಷಕರಾದ ಬಸವರಾಜ ಗಿರಿನಿವಾಸ, ಮುಖ್ಯ ಅತಿಥಿಗಳಾಗಿ ಸಂಘದ ಉಪಾಧ್ಯಕ್ಷರಾದ ಮಹಾರಾಜ ಹಡಪದ, ಕಾರ್ಯದರ್ಶಿ ರಾಜಶೇಖರ ಯಂಕಂಚಿ, ಸದಸ್ಯರಾದ ಬಸವರಾಜ ಹಲಸಂಗಿ, ದರೆಪ್ಪ ಹಡಪದ, ಶಿವಪುತ್ರ ಹಡಪದ ಹಾಗೂ ಶಾಲಾ ಸಿಬ್ಬಂದಿ ಮಕ್ಕಳು ಉಪಸ್ಥಿತರಿದ್ದರು.