ಬಸವಣ್ಣನ ವಚನಗಳಿಂದ ವ್ಯಕ್ತಿತ್ವ ವಿಕಸನ : ಡಾ.ಗಣಪತಿ

ಜೇವರ್ಗಿ : ಜು.2:12ನೇ ಶತಮಾನದಲ್ಲಿ ಶರಣರು ನಿಜವಾದ ವ್ಯಕ್ತಿತ್ವ ವಿಸಸನವನ್ನು ತಮ್ಮ ವಚನದ ಮೂಲಕ ತೋರಿಸಿದ್ದಾರೆ. ಬಸವಣ್ಣನವರ ಕಳಬೇಡ, ಕೊಲಬೇಡ ಎಂಬ ಏಳು ಅನುಶಾಸನಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ವ್ಯಕ್ತಿತ್ವ ವಿಕಸನ ಸಾಧ್ಯ ಎಂದು ಕಲಬುರಗಿ ಕೇಂದ್ರೀಯ ವಿಶ್ವವಿಧ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ಗಣಪತಿ ಸಿನ್ನೂರ ಹೇಳಿದರು.

ತಾಲೂಕಿನ ಸೊನ್ನ ಗ್ರಾಮದ ಶ್ರೀಶಿವಾನಂದ ಶಿವಯೋಗಿ ಜನಕಲ್ಯಾಣ ಸಂಸ್ಥೆಯ ಶ್ರೀಗುರಪ್ಪ ಶರಣರು ವಸ್ತಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಬಸವಕೇಂದ್ರ ತಾಲೂಕು ಘಟಕದ ವತಿಯಿಂದ ಆಯೋಜಿಸಲಾಗಿದ್ದ ಶರಣಸಂಗಮ ಕಾರ್ಯಕ್ರಮದಲ್ಲಿ ಅವರು ಅನುಭಾವ ನೀಡುತ್ತಾ, ಬಸವಣ್ಣನವರ ವಚನದಲ್ಲಿ ಸಾವಿರ ಸಜ್ಜನರ ಸಂಗ ಲೇಸು ಎನ್ನುವಂತಹ ವಿಚಾರ, ಮುಕ್ತಾಯಕ್ಕನ ವಚನದಲ್ಲಿ ತನ್ನ ತಾನು ಅರಿವುದೇ ಜೀವನ ಎಂಬಂತಹ ಶರಣರ ವಚನಗಳಲ್ಲಿ ಸಾರ್ವತ್ರಿಕ ಮೌಲ್ಯಗಳಿದ್ದು, ವ್ಯಕ್ತಿಯ ಸಮಗ್ರ ವ್ಯಕ್ತಿತ್ವ ವಿಕಸನವಾಗಲು ನಿರಂತರವಾಗಿ ಶರಣರ ವಚನಗಳನ್ನು ಅಧ್ಯಯನ ಮಾಡಬೇಕು ಎಂದು ಹೇಳಿದರು.

ಸಾನಿಧ್ಯ ವಹಿಸಿದ್ದ ಸೊನ್ನ ಶ್ರೀಸಿದ್ಧಲಿಂಗೇಶ್ವರ ವಿರಕ್ತ ಮಠದ ಪೀಠಾಧಿಪತಿ ಡಾ.ಶಿವಾನಂದ ಸ್ವಾಮೀಜಿ ಮಾತನಾಡಿ, ಬಸವಾದಿ ಶರಣರು ಈ ಭಾಗದಲ್ಲಿ ಅನೇಕ ವಚನಗಳನ್ನು ರಚಿಸಿದ್ದು, ವಚನಗಳು ಹೆಚ್ಚಿನ ಪ್ರಮಾಣದಲ್ಲಿ ಬೆಳಕಿಗೆ ಬರುತ್ತಿವೆ. ವಿದ್ಯಾರ್ಥಿಗಳು ನಿತ್ಯ ಬಸವಾದಿ ಶರಣರ ಒಂದು ವಚನ ಓದುವ ಮೂಲಕ ಅದರ ಅರ್ಥ ತಿಳಿದುಕೊಂಡು ಬದುಕಿದರೇ ಜೀವನ ಸಾರ್ಥಕವಾಗಲಿದೆ ಎಂದು ಹೇಳಿದರು.

ಕಾಲೇಜಿನ ಪ್ರಾಚಾರ್ಯ ಸದಾನಂದ ಪಾಟೀಲ ಅದ್ಯಕ್ಷತೆ ವಹಿಸಿದ್ದರು. ಬಸವಕೇಂದ್ರದ ತಾಲೂಕು ಘಟಕದ ಅದ್ಯಕ್ಷ ಶರಣಬಸವ ಕಲ್ಲಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಸವಕೇಂದ್ರದ ಗೌರವಾಧ್ಯಕ್ಷ ಶಿವಣಗೌಡ ಪಾಟೀಲ ಹಂಗರಗಿ, ಬಿ.ಎನ್.ಪಾಟೀಲ ಹರನೂರ, ಮಲ್ಕಣಗೌಡ ಹೆಗ್ಗಿನಾಳ, ಉಪನ್ಯಾಸಕ ನಿಜಲಿಂಗ ದೊಡ್ಮನಿ, ಈರಣ್ಣ ಭೂತಪೂರ, ನಿಂಗಣ್ಣ ಹಳಿಮನಿ, ರಾಮಣ್ಣ ತೊನ್ಸಳ್ಳಿಕರ್, ಬಾವಾ ಪಟೇಲ, ನೀಲಕಂಠ ಕೊಂಡಗೂಳಿ, ಅಲಿ ಕೆ.ಮುಲ್ಲಾ, ಬಿ.ಎಸ್.ಪಾಟೀಲ, ಕೆ.ಲಕ್ಷ್ಮೀ, ಸಾಯಿಸ್ತಾಬಾನು, ಶಿಲ್ಪಾ ಕುಲಕರ್ಣಿ ಸೇರಿದಂತೆ ನೂರಾರು ಜನ ವಿದ್ಯಾರ್ಥಿಗಳು ಭಾಗವಹಿಸಿದ್ದರು.