ಬಸವಣ್ಣನಿಂದ ಕಾಯಕ ದಾಸೋಹ ತತ್ವವನ್ನು ಅನುಷ್ಠಾನ

ವಿಜಯಪುರ.ಮೇ೨೨- ಇಂದಿಗೆ ಅವಶ್ಯಕವಾಗಿರುವ ಹಾಗೂ ಘೋಷಣೆಗಳಾಗಿರುವ ಉದ್ಯೋಗ ಹಾಗೂ ಹಸಿವು ಮುಕ್ತ ಭಾರತವನ್ನು ೧೨ನೆಯ ಶತಮಾನದಲ್ಲಿಯೇ ಅಂದಿನ ಪ್ರಧಾನ ಮಂತ್ರಿಗಳಾದ ಬಸವಣ್ಣನವರು ಎಲ್ಲರಿಗೂ ಕಾಯಕ ನೀಡುವ ಮೂಲಕ ಹಾಗೂ ಅದರಿಂದ ಬರುವ ಉತ್ಪಾದನೆಯಿಂದ ದಾಸೋಹ ವ್ಯವಸ್ಥೆಯನ್ನು ರೂಢಿಸಿದ್ದರೆಂದು ಶ್ರೀ ಕೃಷ್ಣ ಯತೀಂದ್ರ ಸತ್ಸಂಗ ಸೇವಾ ಟ್ರಸ್ಟ್ ಅಧ್ಯಕ್ಷರಾದ ಜೆಎಸ್ ರಾಮಚಂದ್ರಪ್ಪ ತಿಳಿಸಿದರು.
ಇಲ್ಲಿನ ಶ್ರೀ ಚನ್ನಕೇಶವ ಸ್ವಾಮಿ ದೇವಾಲಯದ ಆವರಣದಲ್ಲಿ ಶ್ರೀ ಕೃಷ್ಣ ಯತೀಂದ್ರ ಸತ್ಸಂಗ ಸೇವಾ ಟ್ರಸ್ಟ್ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ಶ್ರೀ ಕೈವಾರ ಯೋಗೀನಾರಾಯಣ ಯತೀಂದ್ರರ ಹಾಗೂ ಕನಕ ಪುರಂದರ ಗೀತಾ ತತ್ವ ಅಮೃತ ರಸದಾರೆಯ ೨೨೭ ಕಾರ್ಯಕ್ರಮ ಹಾಗೂ ಶ್ರೀ ಕೃಷ್ಣ ಮಾಸಿಕ ದ್ವಾದಶಿ ವಿಚಾರಧಾರೆ ಗೋಷ್ಠಿಯ ೧೭೮ನೆಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಭಗವಂತನ ಚಿಂತನೆ ಯಾವ ಪುಣ್ಯ ಸ್ಥಳದಲ್ಲಿರುತ್ತದೆಯೋ ಅಲ್ಲಿ ಭಗವಂತನ ಪ್ರೇರಣೆ ಇರುತ್ತದೆ ಇಂತಹ ಸತ್ಸಂಗದಲ್ಲಿ ಭಾಗವಹಿಸಿ ನಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕೆಂದು ಎಂದು ಧಾರ್ಮಿಕ ಚಿಂತಕರಾದ ಶಿವಕುಮಾರ್ ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಶ್ರೀ ಪತಂಜಲಿ ಯೋಗ ಶಿಕ್ಷಣ ಶಿಕ್ಷಕರಾದ ಮಂಜುನಾಥ್, ಬೇಸಿಸ್ ವಿದ್ಯಾಸಂಸ್ಥೆ ಮಾಜಿ ಅಧ್ಯಕ್ಷರಾದ ಎಸ್.ವಿ.ರವಿಚಂದ್ರ, ಶ್ರೀನಿವಾಸ್,ಯಶಸ್ವಿನಿ, ದೀಪಕ್ ಚಂದ್ರ, ರಮೇಶ್ ಸ್ವಾಮಿ ಉಪಸ್ಥಿತರಿದ್ದರು. ಈ ಸಂಧರ್ಭದಲ್ಲಿ ಹಲವಾರು ಧಾರ್ಮಿಕ ಚಿಂತಕರುಗಳನ್ನು ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಪ್ರತಿ ಮಾಸದಲ್ಲೂ ಐದು-ಐದು ಮಂದಿಗೆ ಸೀರೆ- ಕುಪ್ಪಸ,ವೃದ್ದರಿಗೆ ರಗ್ಗುಗಳು, ಹರಿಸಿನ ಕುಂಕುಮ ಬಳೆಗಳನ್ನು, ಭಗವದ್ಗೀತೆ ಪುಸ್ತಕ ಗಳು ಸೇವಾಕರ್ತರುಗಳ ಸಹಾಯ ಹಸ್ತ ದಿಂದ ವಿತರಣೆ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ವಾದ್ಯಗೋಷ್ಠಿಯನ್ನು ಕೀಬೋರ್ಡ್ ಎಂ.ವಿ.ನಾಯ್ಡು, ತಬಲ ಎಂ.ಅನಿಲ್ ಕುಮಾರ್ ಮತ್ತು ಕೀರ್ತನಗಾರರಾಗಿ ರಾಧಾಮಣಿ ನರಸಿಂಹಪ್ಪ ಜಾನಪದ ಗಾಯಕರು, ಹಾಗೂ ಗಂಗಭವಾನಿ ಕಲಾ ಬಳಗ ಮೇಲೂರಿನ ರಾಮಾಂಜಿನಪ್ಪ ಸುಶ್ರಾವ್ಯವಾಗಿ ಹಾಡಿದರು.
ಈ ಕಾರ್ಯಕ್ರಮದ ಸೇವಾಕರ್ತರು ಮೇಲೂರು ಭಕ್ತ ವೃಂದದವರಾಗಿದ್ದು, ಕಾರ್ಯಕ್ರಮವನ್ನು ಸಂಚಾಲಕರಾದ ವಿ.ಎನ್.ವೆಂಕಟೇಶ್ ಮತ್ತು ಪದಾಧಿಕಾರಿಗಳು ಅಚ್ಚುಕಟ್ಟಾಗಿ ನಡೆಸಿಕೊಟ್ಟರು.