ಬಸವಣ್ಣನವರ ಸೋದರಳಿಯ ಷಟ್ ಸ್ಥಲ ಜ್ಞಾನಿ ಚೆನ್ನಬಸವಣ್ಣ

ಭಾಲ್ಕಿ:ನ.5:ಬಸವಾದಿ ಪ್ರಮಥರು ಹನ್ನೆರಡನೆಯ ಶತಮಾನದಲ್ಲಿ ಆರಂಭಿಸಿದ ಕಲ್ಯಾಣ ಕ್ರಾಂತಿಯ ಸಮಯದಲ್ಲಿ ಮುಂದಾಳತ್ವವನ್ನು ವಹಿಸಿ ಅದನ್ನು ಕೊನೆವರೆಗೂ ಕಾಪಾಡಿಕೊಂಡು ನಡೆಸಿದ ಕೀರ್ತಿ ಚನ್ನಬಸವಣ್ಣರಿಗೆ ಸಲ್ಲುತ್ತದೆ. ಚಿಕ್ಕ ವಯಸ್ಸಿನಲ್ಲಿಯೇ ಅಪಾರವಾದ ಜ್ಞಾನವನ್ನು ಪಡೆದು, ಲೋಕದ ಲೌಕಿಕ ಅಲೌಕಿಕ ಶಕ್ತಿಗಳ ಬಗ್ಗೆ ಅರಿವನ್ನು ಪಡೆದು, ಆಚಾರದಲ್ಲಿ ಅನುಭಾವ ಪಡೆದು, ಪ್ರಸಾದದಲ್ಲಿ ಪರಿಣಾಮವನ್ನು ಪಡೆದು, ಸರ್ವ ಸಂಸಾರ ವಿರಹಿತನಾಗಿ, ಸರ್ವಾಂಗಲಿಂಗಿ ಎನಿಸಿ, ಅಕ್ಕಮಹಾದೇವಿ, ಬಸವಣ್ಣ, ಅಲ್ಲಮಪ್ರಭು ಮೊದಲಾದ ಶರಣರು ಗಳಿಂದ ಪ್ರಶಂಸೆ ಮನ್ನಣೆ ಪಡೆದು ಶಿವಯೋಗ ಸಾಮ್ರಾಟನಾಗಿ ಒಡಲುಗೊಂಡು, ಒಡಲುವಿಡಿಯದೆ, ನಿಜದೊಡಲು ಬೆರೆಸಿದ ಯುಗಪುರುಷ ಶರಣ ಚನ್ನಬಸವಣ್ಣ.
ಬಸವಣ್ಣನವರು ಬಂದ ಕಾರ್ಯಕ್ಕೆ ಚನ್ನಬಸವಣ್ಣ ನವರು ಬಂದವರು, ಇವರೀರ್ವರ ಕಾರ್ಯಕ್ಕೆ ಅಲ್ಲಮಪ್ರಭು ದೇವರು ಬಂದರು. ಎಂದು ಬಸವಣ್ಣನವರು ಹೇಳಿಕೊಂಡಿದ್ದಾರೆ.
ಜನನ ಮತ್ತು ಬಾಲ್ಯ ಜೀವನ
ಚನ್ನಬಸವಣ್ಣನವರು 1144 ರಲ್ಲಿ ಜನಿಸಿದರು. ಬಸವಣ್ಣನವರ ಸಹೋದರಿ ಅಕ್ಕ ನಾಗಮ್ಮನವರ ಮಗನಾಗಿರುವದರಿಂದ ಬಸವಣ್ಣನವರ ಸೋದರಳಿಯ. ಇವರ ತಂದೆ ಶಿವದೇವ.( ಇವರಿಗೆ ಶಿವರಾಯ ಮತ್ತು ಶಿವಸ್ವಾಮಿ ಎಂತಲೂ ಕರೆಯಲಾಗುತ್ತದೆ)
ವಂಶಾವಳಿ
ಇಂಗಳೇಶ್ವರ ಕುಲಕರ್ಣಿಯವರ ಮನೆತನದ ವಂಶಾವಳಿಯ ಪ್ರಕಾರ ಶಿವರಾಯಪ್ಪ ಅವರ ಮಗ ವಾಸುದೇವ,
ವಾಸುದೇವರ
ಮೂರು ಮಕ್ಕಳು ಬಲದೇವ, ನೀಲಕಂಠ ಹಾಗೂ ಶಿವರಾಯ.
ಇವರಲ್ಲಿ ಬಲದೇವ, ನೀಲಕಂಠ ಇಂಗಳೇಶ್ವರದಿಂದ ಮಂಗಳವೇಡೆಗೆ ಬಂದರು. ಶಿವರಾಯ ಇಂಗಳೇಶ್ವರ ದಲ್ಲಿಯೇ ಉಳಿದರು. ನಂತರ ಇವರು ಮುಂದೆ ಕೂಡಲಸಂಗಮಕ್ಕೆ ಹೋದರು. ಇವರ ಮಗನೇ ಚೆನ್ನಬಸವಣ್ಣ.
ಚೆನ್ನಬಸವಣ್ಣ ಆಜೀವ ಬ್ರಹ್ಮಚಾರಿ ಆದುದ್ದರಿಂದ ಈ ವಂಶ ಇಲ್ಲಿಗೆ ಮುಕ್ತಾಯಗೊಂಡಿತು.
ಇನ್ನೊಂದು ಮಹತ್ವದ ವಿಚಾರವೆಂದರೆ ಮಾದಲಾಂಬಿಕೆ ವಾಸುದೇವನ ಮಗಳು. ಬಲದೇವ ನೀಲಕಂಠ ಹಾಗೂ ಶಿವರಾಯ (ಸಿದ್ದರಾಯ) ಇವರ ಅಣ್ಣ ತಮ್ಮಂದಿರು.
ಮಾದಲಾಂಬಿಕೆ ಯನ್ನು ಕಶ್ಯಪ ಗೋತ್ರದ ಮಂಡಗೆಯ ಮಾದಿರಾಜನಿಗೆ ಕೊಟ್ಟು ಮದುವೆಮಾಡಲಾಯಿತು. ಬಾಗೇವಾಡಿಯ ಪೂರವರಾಧಿಶ್ವರನಾದ ಈತನ ದೇವರಾಜ ಮುನಿಪ , ಸಂಗನ ಬಸವಣ್ಣ ಹಾಗೂ ಅಕ್ಕನಾಗಮ್ಮ ಈ ನಾಗಮ್ಮರನ್ನು ಮಾದಲಾಂಬಿಕೆಯ ತವರುಮನೆಯ ಶಿವರಾಯರಿಗೆ ಕೊಟ್ಟಿದ್ದರು. ಈ ದಂಪತಿಗಳ ಪುಣ್ಯರತ್ನವೇ ಚೆನ್ನಬಸವಣ್ಣ.
ಅಕ್ಕನಿಗಿಲ್ಲದ ಸಂಪ್ರದಾಯ ಆಚರಣೆ ನನಗೇಕೆ ಎಂದು
ಮುಂಜಿಯ ಬಂಧನದಿಂದ ಬಿಡುಗಡೆಯಾದ ಬಸವಣ್ಣನವರು ತಂದೆತಾಯಿಗಳ ಅಗ್ರಹಾರದ ಜನಗಳ ಮಾತಿಗೆ ಬೇಸತ್ತು ಆ ಸಂಪ್ರದಾಯವನ್ನು ಪ್ರತಿಭಟಿಸಿ ಸಂಗಮಕ್ಕೆ ಬಂದು ಅಕ್ಕ ಮತ್ತು ಮಾವನ ಆಶ್ರಯದಲ್ಲಿ ಇರುತ್ತಾರೆ.
ಕಪ್ಪಡಿ ಸಂಗಮ
ಬಳ್ಳಿಗಾವಿ, ಹೂಲಿ, ಸಾಲೋಟಗಿಗಳಂತೆಯೇ ಕಪ್ಪಡಿ ಸಂಗಮ ಶೈವಧರ್ಮದ ಪ್ರಮುಖ ಕೇಂದ್ರವಾಗಿತ್ತು.
ಹಾಗೆಯೇ ಅದು ಒಂದು ಪ್ರಮುಖ ವಿದ್ಯಾಕೇಂದ್ರ ವಾಗಿತ್ತು. ಅಲ್ಲಿ ಜಾತವೇದ ಮುನಿಗಳು ಗುರುಗಳಾಗಿದ್ದರು. ಅಲ್ಲಿ ಅನೇಕ ಪ್ರಾಚೀನ ಶಾಸ್ತ್ರಗಳನ್ನು ವೇದ, ಆಗಮ, ಉಪನಿಷತ್ತು, ವ್ಯಾಕರಣ, ಸಂಗೀತ ಹೀಗೆ ಮೊದಲಾದ ಶಾಸ್ತ್ರಗಳನ್ನು ಪಾಂಡಿತ್ಯವನ್ನು ಪೂರ್ಣವಾಗಿ ಬೋಧಿಸಲಾಗುತ್ತಿತ್ತು. ಇವರ ಮಾರ್ಗದರ್ಶನದಲ್ಲಿಯೇ ಬಸವಣ್ಣನವರು ಎಲ್ಲಾತರದ ವಿದ್ಯಾಭ್ಯಾಸ ಮಾಡಿದರು.
ಬಸವ ಪರಿಸರದ ಕೂಸಾಗಿ ಅದರ ಘಟಕವಾಗಿ ಅದೇ ಪರಿಸರಕ್ಕೆ ಮುಖ್ಯವಾಗಿ ನಿಲ್ಲುವಂತ ಮಹಾಪುರುಷರು ಚೆನ್ನಬಸವಣ್ಣನವರು. ಬಸವಣ್ಣನವರ ನೆರಳಿನಲ್ಲಿ ಹಿಂಬಾಲಿಸಿ , ಅಕ್ಕನಾಗಮ್ಮರ ಲಾಲನೆ-ಪಾಲನೆಯಲ್ಲಿ , ಗುರುಕುಲ ವಾಸದ ಉದಾತ್ತ ಜೀವನವನ್ನು ಬಸವಣ್ಣನವರನೊಡನೆ ಚಿಕ್ಕವಯಸ್ಸಿನಿಂದಲೇ ಕಲಿತು ಮಹಾಜ್ಞಾನಿಯಾದ ಚನ್ನಬಸವಣ್ಣ. ಬಿತ್ತದೆ ಬೆಳೆಯದೇ, ಬೆಳೆದ ಹೆಬ್ಬಳಸಿನ ರಾಶಿಯ ನೋಡಾ, ಇಂದು ಹುಟ್ಟಿದ ಕೂಸಿಂಗೆ ಇಂದೇ ಜವ್ವನವಾಯಿತಯ್ಯ. ಎಂದು ಬೆರಗಾಗುವಂತೆ ಬೆಳೆದ ಕೂಸು ಚನ್ನಬಸವಣ್ಣ.
ಕಲ್ಯಾಣಕ್ಕೆ ಬಂದ ಚನ್ನಬಸವಣ್ಣ
ಬಸವಣ್ಣ ನವರ ಮದುವೆಯ ನಂತರ ಅಕ್ಕನಾಗಮ್ಮ , ಶಿವರಾಯ, ಹಾಗೂ ಚನ್ನಬಸವಣ್ಣನವರು ಕಲ್ಯಾಣಕ್ಕೆ ಬಂದರು. ಬಸವಣ್ಣ ನವರು ಮಂತ್ರಿಯಾದಾಗ ಬಸವಣ್ಣನವರು ಪ್ರಭಾವಿ ವ್ಯಕ್ತಿಯಾದರು. ಆಗ ಅವರ ಸಾಮೀಪ್ಯದಲ್ಲಿ ಚನ್ನಬಸವಣ್ಣ ನವರು ಲಿಂಗವಂತ ಧರ್ಮದ ಸಂವಿಧಾನ ಕರ್ತರಾಗಿ ಷಟಸ್ಥಲ ಜ್ಞಾನ ಪರಿಪೂರ್ಣ ಮಹಿಮರಾಗಿ ಕಂಗೊಳಿಸತೊಡಗಿದರು. ಮುಂದೆ ಅಲ್ಲಮ ಪ್ರಭುಗಳ ನಂತರ ಅನುಭವ ಮಂಟಪದ ಶೂನ್ಯ ಪೀಠವನ್ನು ಏರಿದರು. ಇವರ ವಚನಗಳ ಅಂಕಿತನಾಮ ಕೂಡಲಚೆನ್ನಸಂಗಯ್ಯ / ಕೂಡಲಚೆನ್ನಸಂಗಮದೇವ. 1174 ವಚನಗಳನ್ನು ರಚಿಸಿರುವ ಚೆನ್ನಬಸವಣ್ಣ, ಕಲ್ಯಾಣಕ್ರಾಂತಿಯ ನಂತರ, ವಚನಗಳ ಸಂಗ್ರಹವನ್ನು ಹೊತ್ತು ಕಲ್ಯಾಣದಿಂದ ಉಳವಿಗೆ ತೆರಳಿದರು. ಚೆನ್ನಬಸವಣ್ಣನವರ ಶ್ರಮದ ಫಲವಾಗಿ, ವಚನಸಂಗ್ರಹ ಇಂದಿಗೂ ಉಳಿದಿದೆ.
ಷಟ್ ಸ್ಥಲ ಸಂಪ್ರದಾಯಕ್ಕೆ ನೆಲೆಯನ್ನು ಕಲ್ಪಿಸಿದ ಪ್ರಮುಖ ವಚನಕಾರರು
ವಚನ:
ಧರೆಯಾಕಾಶವಿಲ್ಲದಂದು ಅನಲ, ಪವನ, ಜಲ, ಕೂರ್ಮರಿಲ್ಲದಂದು ; ಚಂದ್ರ ಸೂರ್ಯರೆಂಬುವರು ಕಳೆದೋರದಂದು; ಆತ್ಮಸ್ಥಲ ಅನುಭಾವಕ್ಕೆ ಬಾರದಂದು ; ನಿತ್ಯ ನಿಜಲಿಂಗವ ಬಲ್ಲವರರಯ್ಯ ನೀನಲ್ಲದೆ ? ನಿಮ್ಮ ಒಕ್ಕ ಮಿಕ್ಕ ಶೇಷ ಪ್ರಸಾದದ ಕಾರುಣ್ಯದ ಶಿಶುವಾಗಿ ಒಡಲೊಳಗೆ ಇದ್ದಲ್ಲಿ; ” ವಿಭೂತಿ ಪಟ್ಟವ ಕಟ್ಟಿ ಹಸ್ತಮಸ್ತಕ ಸಂಯೋಗವ ಮಾಡಿ; ಎನ್ನುಳಿಹದರಾರಯ್ಯ ನಿವಲ್ಲದೇ? ಕೂಡಲಸಂಗಮ ದೇವರ ಸಾಕ್ಷಿಯಾಗಿ; ನಾನು ನಿಮ್ಮ ಕರುಣದ ಕಂದನೆಂಬುದು ಮೂರು ಲೋಕ ಬಲ್ಲುದು ಕಾಣಾ ಸಂಗನ ಬಸವಣ್ಣ”.
ಈ ವಚನದ ಮೂಲಕ ಅವರು ಬಸವಣ್ಣರೆ ನನ್ನ ಪರಮ ಗುರುವೆಂದು ಭಾವಿಸಿದ್ದೇನೆ ಎಂದು ತಿಳಿಸಿದರು. ಅಲ್ಲಮ ಪ್ರಭುಗಳು ಕೂಡಾ ಬಸವಣ್ಣರ ಸಂಪ್ರದಾಯದ ಕಂದನೆಂದು ಚನ್ನಬಸವಣ್ಣ ತಿಳಿಸುತ್ತಾರೆ.
ಅನಿಮಿಷಂಗೆ ಲಿಂಗವ ಕೊಟ್ಟಾತ ಬಸವಣ್ಣ , ಆ ಲಿಂಗವು ನಂತರದಲ್ಲಿ ಅಲ್ಲಮನಿಗೆ ಸೇರುತ್ತಾದ್ದರಿಂದ ಅವನೂ ಬಸವಣ್ಣ ನವರ ಸಂಪ್ರದಾಯ. ಅಂದರೆ ಧರ್ಮದ ಕಂದನೆಂದೂ ತಾನು ಮತ್ತು ಅಲ್ಲಮರಿಗೆ ಒಂದೇ ಸ್ಥಳ ಕುಳವಾದ ಕಾರಣ, ಬಸವಣ್ಣರ ಮಹಾಮನೆಯ ಪ್ರಸಾದ ಇಬ್ಬರಿಗೂ ಒಂದೇ ಅಲ್ಲವೇ? ಹೀಗಾಗಿ ಗುರು ಒಂದು, ಲಿಂಗ ಒಂದು, ಉಪದೇಶ ಒಂದು ಶರಣ ಬಸವಣ್ಣನ ಗರಡಿಯಲ್ಲಿ ತಮ್ಮಿಬ್ಬರದ್ದೂ ಒಂದೇ ಅಭ್ಯಾಸವಿರುವುದಾಗಿ ಚನ್ನಬಸವಣ್ಣ ನವರು ತಮ್ಮ ವಚನದಲ್ಲಿ ಹೇಳಿದ್ದು ಕಾಣಬಹುದು.
ಅನುಭವ ಮಂಟಪದ ಕಾರ್ಯಶಕ್ತಿಯಾಗಿ
ಅನುಭವ ಮಂಟಪ ಜಗತ್ತಿನ ಮೊಟ್ಟಮೊದಲ ಪ್ರಜಾಪ್ರಭುತ್ವ ಸಂಸತ್ತು. ಸಕಲ ಜೀವರಾಶಿಗಳಲ್ಲಿ ಲೇಸನ್ನೇ ಬಯಸುವ ಶರಣರ ಸಂಗಮಸ್ಥಾನ.
ಕಲ್ಯಾಣದ ಮತ್ತೊಂದು ಹೆಸರೇ
ಅನುಭವ ಮಂಟಪ.
ಕಲ್ಯಾಣವೆಂಬ ಪ್ರಣತೆಯಲ್ಲಿ ಬಸವಣ್ಣ ತೈಲವಾದರೆ ಚನ್ನಬಸವಣ್ಣ ಬತ್ತಿಯಾದ ಪ್ರಭುದೇವರು ಜ್ಯೊತಿಯಾದರು. ಆ ಪರಮಜ್ಯೋತಿಯ ದಿವ್ಯ ಪ್ರಕಾಶದಲ್ಲಿ ತೊಳಗಿ ಬೆಳಗಿತು ಶಿವನ ಪ್ರಕಾಶ. ಆ ಲಿಂಗ ಪ್ರಕಾಶದಲ್ಲಿ ಉಜ್ವಲಗೊಂಡಿತು ಷಟ್ ಸ್ಥಲ ಪ್ರಭೆ.
ಆ ಪ್ರಭೆಯ ಬೆಳಕಿನಲ್ಲಿ ಮಿಂಚಿದರು 770 ಅಮರ ಗಣಂಗಳು ಹಾಗೂ 1ಲಕ್ಷ 96ಸಾವಿರ ಜಂಗಮರು. ಅನುಭವ ಮಂಟಪದ ಅಧ್ಯಕ್ಷರು ಪ್ರಭುದೇವರಾಗಿದ್ದರು.
ಅದು ಅನುಭಾವಿಗಳ ಆಲೋಚನಾ ಶಕ್ತಿ ಕೇಂದ್ರ. ಆ ಪಾವನ ಕ್ಷೇತ್ರದಲ್ಲಿ ದಿನಾಲೂ ಸಾವಿರಾರು ಸಾಧಕರು ಬರುತ್ತಿದ್ದರು. ಅವರನ್ನು ಅತ್ಯಂತ ಸೂಕ್ಷ್ಮ ಮತಿಯಿಂದ ಗುರುತಿಸುತ್ತಿದ್ದರು ಚನ್ನಬಸವಣ್ಣನವರು.
ವಚನ :
ಆಕಾಶದಲ್ಲಾಡುವ ಪಟಕ್ಕಾದಡೆಯೂ ಮೂಲಸೂತ್ರವಿರಬೇಕು.
ಕಲಿಯಾದಡೆಯೂ ಕಜ್ಜವಿಲ್ಲದೆ ಆಗದು.
ಭೂಮಿಯಿಲ್ಲದೆ ಬಂಡಿ ನಡೆವುದೆ ?
ಅಂಗಕ್ಕೆ ಲಿಂಗವಿಲ್ಲದೆ ನಿಸ್ಸಂಗವಾಗಬಾರದು.
ಕೂಡಲಚೆನ್ನಸಂಗಮದೇವರಲ್ಲಿ
ಸಂಗವಿಲ್ಲದೆ ನಿಸ್ಸಂಗಿಯೆಂದು ನುಡಿಯಬಹುದೆ ಪ್ರಭುವೆ ?
ಸಿದ್ಧರಾಮೇಶ್ವರರಿಗೆ ಇಷ್ಟಲಿಂಗದ ಮಹತ್ವ ತಿಳಿಸಿದ ಚನ್ನಬಸವಣ್ಣ.
ಸಿದ್ದರಾಮೇಶ್ವರರು ಶರಣ ಸಂಗೋಷ್ಠಿಯಲ್ಲಿ ಭಾಗಿಯಾಗಲು ಬಂದಾಗ ಅವರಿಗೆ ಇಷ್ಟ ಲಿಂಗಧಾರಣೆ ಆಗಿಲ್ಲ ಎಂಬ ಸಂಶಯ ಅನುಭವಮಂಟಪದಲ್ಲಿ ಮೂಡಿತು. ಈ ಸಂಶಯವನ್ನು ಬಸವಣ್ಣನವರು ಸಮರ್ಥಿಸಿದರು.
“ಬೆಳಕು ಬೆಳಕು ಸೇರಿದರೆ ಕತ್ತಲು ಇರುತ್ತದೆ ಯೇ?
ಶರಣರು ಶರಣರು ಲಿಂಗಾನುಭವ ಗೋಷ್ಠಿಯಲ್ಲಿರಲು ಸಂಗದಲ್ಲಿದ್ದವರ ಅಜ್ಞಾನ ಅಳಿದು ನಿಜದ ನೆಲೆ ಗೋಚರ ವಾಗುವುದಿಲ್ಲವೇ? ನಾನು ಶರಣರ ಸನ್ನಿಧಿಯಲ್ಲಿ ಇರುವುದರಿಂದ ಆದ್ದರಿಂದ ನನಗೆ ಲಿಂಗ ಜ್ಞಾನ ಲಭಿಸುವುದಿಲ್ಲವೇ? ಇಷ್ಟಲಿಂಗ ಏಕೆ ಬೇಕು.,? ಎಂದು ಸಿದ್ಧರಾಮೇಶ್ವರರು ಹೇಳುತ್ತಾರೆ. ಆಗ ಚನ್ನಬಸವಣ್ಣ ನವರು ಆಕಾಶದಲ್ಲಿ ಹಾರುವ ಪಟಕ್ಕೆ ಆದರೂ ಮೂಲಸೂತ್ರ ವಿರಬೇಕು ಭೂಮಿ ಇಲ್ಲದೆ ಬಂದ ನಡೆಯಬಹುದೇ ಅಂಗಕ್ಕೆ ಲಿಂಗ ಸಂಗವಿಲ್ಲದೆ ನಿಸ್ಸಂಗ ವಾಗಲಾರದು ಎಂದು ತಾರ್ಕಿಕವಾಗಿ ಹೇಳುವುದರ ಮೂಲಕ ಇಷ್ಟಲಿಂಗದ ಮಹತ್ವವನ್ನು ಸಾರಿ ಹೇಳುತ್ತಾರೆ.
ಹೇಗೆ ದೀಪಕ್ಕೂ ದೀಪ್ತಿಗೂ ಭೇದವಿಲ್ಲವೋ ,
ಹೇಗೆ ಹಾಲಿಗೂ ರುಚಿಗೂ ಭೇದವಿಲ್ಲವೋ , ಹಾಗೆ ಇಷ್ಟಲಿಂಗದಿಂದ ಪ್ರಾಣಲಿಂಗ ಪರಿಜ್ಞಾನ ಆದ್ದರಿಂದ ಸಾಕಾರವನ್ನೆ ನಿರಾಕಾರ ವೆಂದು ತಿಳಿದು ಪೂಜಿಸಬೇಕು ಹೀಗಾಗಿ ಅಂಗ ಲಿಂಗ ಸಂಬಂಧ ವಿಲ್ಲದವರ ಸಂಗವನ್ನು ಶರಣರು ಮೆಚ್ಚಲಾರರು ಎಂದು ಹೇಳುತ್ತಾರೆ.
ಕಲ್ಯಾಣ ಕ್ರಾಂತಿ
ಕಲ್ಯಾಣ ಕ್ರಾಂತಿಯ ಸಮಯದಲ್ಲಿ ಅಹಿಂಸಾವಾದಿ ಗಳಾಗಿದ್ದ ಶಿವಶರಣರು ಸಂರಕ್ಷಣೆ ಹಾಗೂ ವಚನಗಳ ರಕ್ಷಣೆಗಾಗಿ ರಾಜ ಸೈನ್ಯವನ್ನು ಎದುರಿಸಲು ಉಳವಿ ಮಾರ್ಗದಲ್ಲಿ ಅಲ್ಲಿ ಯುದ್ಧ ಮಾಡಬೇಕಾಗಿತ್ತು.‌ ಆ ದಾರಿಯಲ್ಲಿ ಗಂಗಾಂಬಿಕೆ ಕಲ್ಯಾಣಮ್ಮ ಡೋಹರಕಕ್ಕಯ್ಯ ಮಡಿವಾಳ ಮಾಚಿದೇವ ಬೊಮ್ಮಯ್ಯನು ಕಳೆದುಕೊಂಡು ಶರಣಸಂಕುಲ ಬಡವಾಯಿತು. ಈ ಮೊದಲೇ ಶರಣರ ಒಂದು ಗುಂಪು ಕದಳಿಯ ಡಗೆ ಮತ್ತೊಂದು ಗುಂಪು ವಿಜಯನಗರದ ಕಡೆಗೆ ಹೋದರೆ ಕೆಲವರು ತರ್ದೇವಾಡ ನಾಡನ್ನು ದಾಟಿಕೊಂಡು ಮಲಪ್ರಭಾ ನದಿಯ ತೀರದಲ್ಲಿ ನಡೆದು ಉಳವಿಯ ದಟ್ಟ ಅರಣ್ಯವನ್ನು ಸೇರಿದರು. ಈ ದಾರಿಯಲ್ಲಿ ಅನೇಕ ಸ್ಥಳಗಳಲ್ಲಿ ಇಂದಿಗೂ ಶಿವಶರಣರ ಸ್ಮಾರಕಗಳು ಇವೆ. ಉಳವಿಯಲ್ಲಿ ಒಂದು ವೀರಭದ್ರೇಶ್ವರ ದೇವಾಲಯವಿರುವುದರಿಂದ ಅದು ಮಡಿವಾಳ ಮಾಚಯ್ಯನವರ ಸ್ಮಾರಕವಾಗಿ ಇರುವಂತಿದೆ. ಕುಡಚಿ ಯಲ್ಲಿ ಮಾಚಿದೇವಯ್ಯ ಹೋರಾಡಿ ಲಿಂಗೈಕ್ಯರಾಗಿದ್ದಾರೆ ಎಂದು ತಿಳಿದುಬರುತ್ತದೆ. ನಂತರ ಚನ್ನಬಸವಣ್ಣನವರು ಉಳವಿ ಯಲ್ಲಿಯೇ ಲಿಂಗೈಕ್ಯರಾದರು ಎಂದು ಗುರುತಿಸಬಹುದಾಗಿದೆ.
ಚೆನ್ನಬಸವಣ್ಣನವರ ಕೃತಿಗಳು.
ಆಚಾರದಲ್ಲಿ ಅನುಭಾವಿ, ಪ್ರಸಾದದಲ್ಲಿ ಪರಿಣಾಮಿಯಾಗಿದ್ದ ಇವರು ಮಹತ್ವದ ವಚನಕಾರರು. ಅವರು ಷಟಸ್ಥಲ ವಚನಗಳು, ಕರಣಹಸಿಗೆ, ಮಿಶ್ರಾರ್ಪಣ, ಪದಮಂತ್ರ ಗೋಪ್ಯ , ಕಾಲಜ್ಞಾನ , ಘಟಾಚಕ್ರದ ವಚನ, ರಾಜಯೋಗದ ವಚನ, ರುದ್ರ ಭಾರತ ಸೃಷ್ಟಿ ಎಂಬ ಕೃತಿಗಳನ್ನು ರಚಿಸಿದ್ದಾರೆ ತೊಂಬತ್ತಾರು ಸಕೀಲಗಳು ಎಂಬ ಗ್ರಂಥವನ್ನು ಬರೆದಿರುವರು ಎಂದು ತಿಳಿದು ಬರುತ್ತದೆ.
ಲಿಂಗೈಕ್ಯ :
ಚನ್ನಬಸವಣ್ಣನವರು ಉಳವಿಯಲ್ಲಿ ಶಿವಯೋಗ ಸಮಾಧಿಯಲ್ಲಿ ಲೀನರಾಗಿದ್ದರೆಂಬುದನ್ನು ಗುರುತಿಸಬಹುದಾಗಿದೆ.
ಕಾಲ ಜ್ಞಾನದ ಮಿತಿಯಂತೆ ಕೇವಲ 24 ವರ್ಷ ಬಾಳಿದ್ದ ಚನ್ನಬಸವಣ್ಣನವರು ಮಹಾದಾರ್ಶನಿಕರು. ಕವಿ ವಿಮರ್ಶಕ ಅಪ್ಪಟ ಸಿದ್ಧಾಂತವಾದಿ. ಪ್ರಭುದೇವರ ದೃಷ್ಟಿಯಲ್ಲಿ ಬಯಲು ಬಣ್ಣಕ್ಕೆ ತಂದು ನೆಳಲ ಶೃಂಗಾರದ ಮಾಡಿದವರು ಗುರುವಾದ ಬಸವಣ್ಣನಿಗೆ ಗುರುವಾಗಿ ಪರಮಾಧ್ಯರಾದರು ‘ಮಾಚಿದೇವನಿಗೆ ಮಾಯಕ್ಕೆ ಹೊರಗಾದ ನಿರ್ಮಾಯಿ’ ಎನಿಸಿದವರು. ವಿಶ್ವ ಸಾಹಿತ್ಯಕ್ಕೆ ವಿಶಿಷ್ಟವಾದ ವಚನಗಳನ್ನು ನೀಡಿದ್ದಾರೆ. ಚನ್ನಬಸವಣ್ಣ ನವರು ವಯಸ್ಸಿನಲ್ಲಿ ಚಿಕ್ಕವರಾಗಿದ್ದರೂ ಎಲ್ಲರಿಗೂ ದೊಡ್ಡವರಾಗಿ ಬಾಳಿ ಹೋದುದ್ದನ್ನು ಇಲ್ಲಿ ಅರಿಯಬಹುದಾಗಿದೆ. ಇಂಥ ಮಹಾನ್ ಚೇತನ ಕೇವಲ 24ವರ್ಷ ಬಾಳಿದ್ದರು ಎಂಬುದು ನಮ್ಮ ದುರಾದೃಷ್ಟವೆನ್ನಬಹುದು.
ಪ್ರತಿ ವರ್ಷ ದೀಪಾವಳಿಯ ಪಾಡ್ಯದಂದು ಚನ್ನಬಸವಣ್ಣ ನವರ ಜಯಂತಿಯನ್ನು ಆಚರಿಸಲಾಗುತ್ತದೆ.

*ಲೇಖಕರು🖋️: ಶಾಂತಯ್ಯಾ ಕೆ.ಸ್ವಾಮಿ ಉಚ್ಚ ತಾ. ಭಾಲ್ಕಿ ಜಿ. ಬೀದರ