ಬಸವಣ್ಣನವರ ವಿಚಾರಧಾರೆಗಳು ಸರ್ವಕಾಲಕ್ಕೂ ಪ್ರಸ್ತುತ

ಸಂಜೆವಾಣಿ ವಾರ್ತೆ

ಚಿತ್ರದುರ್ಗ.ಮೇ.೮ : ಬಸವ ಜಯಂತಿ ಆಚರಣೆಯ ಪ್ರವರ್ತಕರು ಅಂದರೆ ಅಂದಿನ ದಾವಣಗೆರೆ ವಿರಕ್ತ ಮಠದ ಪೀಠಾಧಿಪತಿಗಳಾಗಿದ್ದ ಮೃತ್ಯುಂಜಯ ಅಪ್ಪಗಳು ಹಾಗೂ ಅವರೊಂದಿಗೆ ಹೆಗಲಾಗಿದ್ದ ಹರ್ಡೇಕರ್ ಮಂಜಪ್ಪ ಅವರು. ಬಸವಣ್ಣನವರ ಸಾಧನೆಯ ವಿವಿಧ ಆಯಾಮಗಳ ಬಗ್ಗೆ ಗಮನಹರಿಸಿ ಅಂದು ಜಯಂತಿ ಆಚರಣೆ ಆರಂಭಿಸದೇ ಹೋಗಿದ್ದರೆ ಎಷ್ಟೋ ಜನರಿಗೆ ಇಂದು ಬಸವಣ್ಣನವರು ಅರ್ಥವಾಗಿರುತ್ತಿರಲಿಲ್ಲ, ಅವರ ವಿಚಾರಗಳೇ ತಿಳಿಯುತ್ತಿರಲಿಲ್ಲ. ಇದಕ್ಕೆ ಮತ್ತಷ್ಟು ಹೆಗಲೆಣೆಯಾಗಿ ವಚನ ಸಾಹಿತ್ಯ ಜನಮಾನಸಕ್ಕೆ ತಲುಪುವಂತಾಗಲು ತಮ್ಮ ಮನೆ ಮಠ ಕಳೆದುಕೊಂಡು ಕೆಲಸ ಮಾಡಿದವರು ವಚನ ಪಿತಾಮಹ ಎಂದು ಹೆಸರಾಗಿದ್ದ ಫ.ಗು.ಹಳಕಟ್ಟಿ ಅವರು ಎಂದು ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್.ಜೆ.ಎಂ. ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯರಾದ ಡಾ. ಬಸವಕುಮಾರ ಸ್ವಾಮೀಜಿ ಅವರು ಇತಿಹಾಸದ ಎಳೆಯನ್ನು ಬಿಚ್ಚಿಟ್ಟರು.ಶ್ರೀಗಳವರು ಬಸವ ಜಯಂತಿ ಆಚರಣೆ ಪ್ರಯುಕ್ತ ಶ್ರೀಮಠದ ಅನುಭವ ಮಂಟಪದಲ್ಲಿ ಕರೆಯಲಾಗಿದ್ದ ಎಸ್.ಜೆ.ಎಂ. ವಿದ್ಯಾಪೀಠದ ನೌಕರರ ಸಮಲೋಚನಾ ಸಭೆಯ ಸಾನಿಧ್ಯ ವಹಿಸಿ ಮಾತನಾಡುತ್ತಾ, ದುಡಿಯುವ ವರ್ಗವನ್ನು ದೇವರೆಂದು, ಕಾಯಕ ಯಾವುದೇ ಇರಲಿ ಅವರೆಲ್ಲರಿಗೂ ವೃತ್ತಿಗೌರವ ನೀಡಿ, ಅದಕ್ಕೆ ತಕ್ಕ ಮೌಲ್ಯ ದೊರಕಿಸಿಕೊಟ್ಟ ಮಹಾ ಮೇರುಪುರುಷ ಬಸವಣ್ಣನವರು ಎಂದು ಬಣ್ಣಿಸಿದರು.ಬಸವಣ್ಣ ಮತ್ತು ಅವರ ವಿಚಾರಗಳು ಪ್ರತಿ ಮನೆ ಮನ ತಲುಪಬೇಕು. ಆ ನಿಟ್ಟಿನಲ್ಲಿ ಮೊದಲು ನಮ್ಮ ವಿದ್ಯಾಪೀಠದ ನೌಕರ ಬಾಂಧವರಿಗೆ ಗೊತ್ತಾಗಬೇಕೆಂಬ ಉz್ದೆÃಶದಿಂದ ನಿಮ್ಮನ್ನು ಇಲ್ಲಿ ಸೇರಿಸಲಾಗಿದೆ. ಚಿತ್ರದುರ್ಗ ಶ್ರೀಮುರುಘಾಮಠದ ಖಾಸಮಠ ದಾವಣಗೆರೆ ವಿರಕ್ತಮಠ, ಅಲ್ಲಿ ಮೊಟ್ಟಮೊದಲು ಬಸವ ಜಯಂತಿ ಆಚರಿಸಿದ ಕೀರ್ತಿ ನಮ್ಮ ಮುರುಘಾಮಠಕ್ಕೆ ಸಲ್ಲುತ್ತದೆ. ಆದ್ದರಿಂದ ಬಸವ ಜಯಂತಿ ನಮ್ಮ ಸಂಸ್ಥಾನದ ಹಬ್ಬ. ಆದ್ದರಿಂದ ನೀವೆಲ್ಲರೂ ಮೂರು ದಿನಗಳ ಕಾಲ ನಡೆಯುವ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಭಾಗವಹಿಸಿ ಎಂದು ಸಲಹೆ ಮಾಡಿದರು.