ಬಸವಣ್ಣನವರ ವಿಚಾರಧಾರೆಗಳು ಆದರ್ಶಪ್ರಾಯವಾಗಿವೆ

ಸೈದಾಪುರ:ಎ.24:ಬಸವಣ್ಣನವರ ತತ್ವ, ಆದರ್ಶ, ಮಾತುಗಳನ್ನು ಪಾಲಿಸಿ ಜೀವನ ನಡೆಸಿದರೆ ಬದುಕು ನಂದನವನವಾಗುತ್ತದೆ. ಅವರ ವಿಚಾರಧಾರೆಗಳು ಸರ್ವಕಾಲಕ್ಕೂ ಸತ್ಯವಾಗಿದ್ದೂ ಎಲ್ಲರಿಗೂ ಆದರ್ಶಪ್ರಾಯವಾಗಿವೆ ಎಂದು ಕಡೇಚೂರು ಗ್ರಾಮದ ಗುರುಮೂರ್ತಿ ಶಿವಾಚಾರ್ಯರು ಅಭಿಪ್ರಾಯಪಟ್ಟರು.

 ಪಟ್ಟಣದಲ್ಲಿ ವಲಯ ವೀರಶೈವ ಸಮಾಜದ ವತಿಯಿಂದ ಹಮ್ಮಿಕೊಂಡ ಬಸವೇಶ್ವರ ಜಯಂತಿ ಕಾರ್ಯಕ್ರಮದಲ್ಲಿ  ಭಾಗವಹಿಸಿ ಮಾತನಾಡಿದರು. ಅನುಭವ ಮಂಟಪ ರಚಿಸಿ ನಾಡಿಗೆ ಹೊಸ ಕಲ್ಪನೆಯನ್ನು ಕೊಟ್ಟ ಮಹಾತ್ಮರನ್ನು ಪ್ರತಿನಿತ್ಯ ಸ್ಮರಣೆ ಮಾಡಬೇಕು ಎಂದು ಕಿವಿ ಮಾತುಗಳನ್ನು ಹೇಳಿದರು.

ಸಿದ್ಧಚೇತನಾಶ್ರಮದ ಸಿದ್ಧಾರೂಢ ಮಠದ ಸೋಮೇಶ್ವರಾನಂದ ಮಹಾಸ್ವಾಮಿಗಳು ಮಾತನಾಡಿ, ಬಸವಣ್ಣನವರು ಆಡಿದ ಮಾತುಗಳು ವಚನಗಳಾದವು. ಸರಳ ರೂಪದ ಅವರ ವಿಚಾರಧಾರೆಗಳು ಪರಮಾತ್ಮನ ಚೈತನ್ಯದೊಂದಿಗೆ ಆತ್ಮ ಕಲ್ಯಾಣವನ್ನು ಕಂಡು ಕೊಳ್ಳುವಂತಿದೆ. ಶರಣರ ಅನುಭವದ ತತ್ವಗಳನ್ನು ನಾವು ಪಾಲಿಸಿಕೊಂಡರೆ ಜನ್ಮ ಸಾರ್ಥಕವಾಗುತ್ತದೆ ಎಂದು ಹೇಳಿದರು.

ಇದಕ್ಕೂ ಮುಂಚೆ ಜರುಗಿದ ಬಸವೇಶ್ವರ ಭಾವಚಿತ್ರದ ಮೆರವಣಿಗೆಗೆ ಚೇಗುಂಟಾದ ಕೀರಲಿಂಗ ಮಹಾಸ್ವಾಮಿಗಳು ಚಾಲನೆ ನೀಡಿದರು. ಮಹಿಳೆಯರು ಕುಂಬ, ಕಳಸಗಳೊಂದಿಗೆ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ವಲಯ ವೀರಶೈವ ಸಮಾಜದ ಅಧ್ಯಕ್ಷ ಬಸವರಾಜಪ್ಪಗೌಡ ಗೊಂದಡಗಿ, ಕಾರ್ಯದರ್ಶಿ ಬಸವರಾಜಯ್ಯ ಸ್ವಾಮಿ ಬದ್ದೇಪಲ್ಲಿ, ಚಂದ್ರಶೇಖರ ವಾರದ, ಸಾಬಣ್ಣ ಗೂಗಲ, ಅಂಜಪ್ಪ ಸೈದಾಪುರ, ಪಾರುಕ, ಸಾಬಣ್ಣ ಸೈದಾಪುರ, ಸುತ್ತಲಿನ ಮುಖಂಡರು, ಮಹಿಳೆಯರು, ವಿವಿಧ ಗ್ರಾಮಗಳ ಬಸವ ಅಭಿಮಾನಿಗಳು ಸೇರಿದಂತೆ ಇತರರು ಭಾಗವಹಿಸಿದ್ದರು. ಭೀಮಣ್ಣಗೌಡ ಪಾಟೀಲ ಕ್ಯಾತನಾಳ ಸ್ವಾಗತಿಸಿದರು. ಷಣ್ಮೂಖ ನಿರೂಪಿಸಿದರು. ಬಸವರಾಜಯ್ಯ ಸ್ವಾಮಿ ಬದ್ದೇಪಲ್ಲಿ ವಂದಿಸಿದರು.