ಬಸವಣ್ಣನವರ ವಚನಗಳು ಸರ್ವಕಾಲಿಕ

ಕೋಲಾರ, ಏ,೨೪- ಸಮಾಜಕ್ಕೆ ಸಮಾನತೆಯ ಸಂದೇಶವನ್ನು ೧೨ನೇ ಶತಮಾದಲ್ಲೇ ಸಾರುವ ಮೂಲಕ ಅಸಮಾನತೆಯ ವಿರುದ್ದ ಧ್ವನಿಯೆತ್ತಿದ ಬಸವಣ್ಣನವರ ವಚನಗಳು ಸರ್ವಕಾಲಿಕ ಸತ್ಯವಾಗಿದ್ದು, ಪ್ರತಿಯೊಬ್ಬರೂ ಓದಿ ಅರ್ಥ ಮಾಡಿಕೊಳ್ಳಬೇಕು ಎಂದು ಎಸ್‌ಡಿಸಿ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಉಷಾ ಗಂಗಾಧರ್ ತಿಳಿಸಿದರು.
ಕೋಲಾರ ಕ್ರೀಡಾ ಸಂಘದ ಬೇಸಿಗೆ ಶಿಬಿರಾರ್ಥಿಗಳು ಬಸವಜಯಂತಿ ಪ್ರಯುಕ್ತ ನಗರದ ಅರಳೇಪೇಟೆ ಬಸವೇಶ್ವರ ದೇವಾಲಯಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಬಸವಣ್ಣನವರ ತತ್ವಾದರ್ಶಗಳ ಕುರಿತು ಉಪನ್ಯಾಸ ನೀಡಿ ಅವರು ಮಾತನಾಡುತ್ತಿದ್ದರು.
ಕಾಯಕವೇ ಕೈಲಾಸ ಎಂಬ ಮೂಲ ಮಂತ್ರದೊಂದಿಗೆ ೧೨ನೇ ಶತಮಾನದಲ್ಲಿಯೇ ಜಗತ್ತಿಗೆ ಸಮಾನತೆಯನ್ನು ಸಾರಿದ ಬಸವಣ್ಣ ವಿಶ್ವಮಾನವರಾಗಿದ್ದಾರೆ. ಈ ಕಾರಣದಿಂದಲೇ ಇಂದು ಜಗಜ್ಯೋತಿ ಬಸವಣ್ಣನವರ ವಿಗ್ರಹ ಲಂಡನ್ನಿನ ಥೇಮ್ಸ್ ನದಿಯ ದಡದಲ್ಲಿ ಸ್ಥಾಪಿಸಲಾಗಿದೆ. ಇನ್ನೂ ಹಲವು ಶತಮಾನಗಳು ಗತಿಸಿದರೂ ಬಸವಣ್ಣನವರ ವಚನಗಳು ಸಾರ್ವಕಾಲಿಕ ಸತ್ಯವಾಗಿರುತ್ತದೆ ಎಂದು ತಿಳಿಸಿದರು. ವಚನಗಳು ತುಂಬಾ ಸರಳವಾಗಿದ್ದು ಎಲ್ಲರಿಗೂ ಅರ್ಥವಾಉತ್ತದೆ. ಆದುದರಿಂದ ಮಕ್ಕಳೂ ಸಹ ಬಸವಣ್ಣನವರ ವಚನಗಳ ಬಗ್ಗೆ ತಿಳಿದುಕೊಂಡು ಪಾಲಿಸಬೇಕು, ವಚನಗಳ ಪ್ರತಿ ಸಾಲಿನಲ್ಲೂ ಬದುಕಿನ ಹಾದಿ ತೋರುವ ಸತ್ವವಿದೆ ಎಂದು ಕರೆ ನೀಡಿದರು.
ತರಬೇತುದಾರರಾದ ಕೃಷ್ಣಮೂರ್ತಿ ಮತ್ತು ಸುರೇಶ್ ಬಾಬು(ಕಮಾಂಡೋ) ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಂಘದ ಸಹಸದಸ್ಯರಾದ ಅಭಿರಾಮ್, ಜಾನ್ ದಿಲೀಪ್, ಲಲಿತ, ಪವಿತ್ರ,, ಭವ್ಯ, ವಿದ್ಯಾ ಮುಂತಾದವರು ಭಾಗವಹಿಸಿದ್ದರು. ಕಾರ್ಯಕ್ರಮದ ನಂತರ ಪೋಷಕರಾದ ರಾಮು ಮಕ್ಕಳಿಗೆ ಲಘು ಉಪಹಾರದ ವ್ಯವಸ್ಥೆ ಮಾಡಿದ್ದರು.