ಬಸವಣ್ಣನವರ ಮೂರ್ತಿ ಇದ್ದ ಸ್ಥಳದಲ್ಲಿರಲು ಒತ್ತಾಯಿಸಿ ಸತ್ಯಾಗ್ರಹ

ಭಾಲ್ಕಿ:ಎ.20:ಮಹಾರಾಷ್ಟ್ರದ ಲಾತೂರ ಮಹಾನಗರದಲ್ಲಿರುವ ಬಸವಣ್ಣನವರ ಮೂರ್ತಿಯನ್ನು ಇದ್ದ ಸ್ಥಳದಲ್ಲಿಯೇ ಇರಲು ಒತ್ತಾಯಿಸಿ ಡಾ.ಅರವಿಂದ ಭಾತಂಬ್ರೆ ಅವರು ಕೈಗೊಂಡಿರುವ ಆಮರಣ ಉಪವಾಸ ಸತ್ಯಾಗ್ರಹಕ್ಕೆ ಬಸವಕಲ್ಯಾಣ ಅನುಭವ ಮಂಟಪದ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ಬೆಂಬಲ ಸೂಚಿಸಿದ್ದಾರೆ.

ವಿಶ್ವಗುರು ಬಸವಣ್ಣನವರ ಅಶ್ವಾರೂಢ ಪುತ್ಥಳಿಯನ್ನು ತೆಗೆಯುವ ಪ್ರಯತ್ನ ಮಾಡುತ್ತಿರುವ ಸರ್ಕಾರದ ನಿರ್ಧಾರ ಸರಿಯಲ್ಲ.

ರಾಷ್ಟ್ರೀಯ ಹೆದ್ದಾರಿ ನಿರ್ಮಿಸುವ ನೆಪದಲ್ಲಿ ಬಸವಣ್ಣನವರ ಮೂರ್ತಿಯನ್ನು ತೆಗೆಯುವ ಹುನ್ನಾರ ನಡೆಯುತ್ತಿರುವುದು ಇಡೀ ಲಿಂಗಾಯತ ಸಮಾಜದ ಆಕ್ರೋಶಕ್ಕೆ ಕಾರಣವಾಗುತ್ತಿದೆ.

ಸರ್ಕಾರ ಈ ನಿರ್ಧಾರವನ್ನು ಕೈಬಿಡಬೇಕು. ಇಲ್ಲದಿದ್ದರೆ ಹೋರಾಟವನ್ನು ತೀವ್ರ ಮಾಡಲಾಗುವುದು ಎಂದು ಡಾ.ಬಸವಲಿಂಗ ಪಟ್ಟದ್ದೇವರು ಎಚ್ಚರಿಸಿದರು.

ಕರ್ನಾಟಕದ ಬಸವಪರ ಸಂಘಟನೆಗಳು ಕೂಡ ಈ ಹೋರಾಟಕ್ಕೆ ಬೆಂಬಲ ಸೂಚಿಸಬೇಕು ಎಂದು ಅವರು ತಿಳಿಸಿದರು.

ಸತ್ಯಾಗ್ರಹ ಸಭೆಯಲ್ಲಿ ನೀಲಂಗಾ ವಿರಕ್ತಮಠದ ಸಂಗನಬಸವ ಸ್ವಾಮೀಜಿ, ಔಸಾ ಹಿರೇಮಠದದ ನಿರಂಜನ ಸ್ವಾಮೀಜಿ, ಹೋರಾಟಕ್ಕೆ ಬೆಂಬಲ ಸೂಚಿಸಲು ಮಾಜಿ ಶಾಸಕ ಶಿವಾಜಿರಾವ್ ಪಾಟೀಲ ಕವ್ವೆಕರ್, ವಕೀಲ ಶಿವಾನಂದ ಹೈಬತಪುರೆ, ಸೋನು ಢವಾಲೆ, ಬಾಲಾಜಿ ಪಿಂಪಳೆ, ಚಂದ್ರಕಾಂತ ವೈಜಾಪುರೆ, ನೀಲಂಗಾದ ರೇಷ್ಮೆ, ಶ್ರೀಶೈಲ ಬಿರಾದಾರ, ಓಂಪ್ರಕಾಶ ಝುರಳೆ, ಸುನಿಲ್ ಹೆಗಣೆ, ಲಕ್ಷ್ಮಣ ಮುಕಡೆ ಭಾಗಿಯಾಗಿದ್ದರು.