ಬಸವಣ್ಣನವರ ಪುತ್ಥಳಿ ಭಗ್ನ: ಕಿಡಿಗೇಡಿಗಳ ಬಂಧನಕ್ಕೆ ಆಗ್ರಹ

ಅಫಜಲಪುರ:ನ.14: ವಿಶ್ವಗುರು ಬಸವಣ್ಣನವರು ಒಂದು ಸಮುದಾಯಕ್ಕೆ ಸೀಮಿತವಾಗದೆ ಇಡಿ ಮಾನವ ಕುಲದ ಉದ್ಧಾರಕ್ಕಾಗಿ ಶ್ರಮಿಸಿದ ಜಾತಿ ರಹಿತ ಮಹಾನಾಯಕರಾಗಿದ್ದರು. ಅವರ ಮೌಲ್ಯಗಳು ವಿಶ್ವಕ್ಕೆ ಮಾದರಿಯಾಗಿದ್ದು, ಅಂತಹ ಮಹಾನಾಯಕರ ಮೂರ್ತಿಗೆ ಕಿಡಿಗೇಡಿಗಳು ಭಗ್ನಗೊಳಿಸಿದ್ದು, ಖಂಡನೀಯ ಎಂದು ಜೆ.ಎಂ ಕೊರಬು ಫೌಂಡೇಷನ್ ಅಧ್ಯಕ್ಷ ಜೆ.ಎಂ ಕೊರಬು ಹೇಳಿದರು.

ಅಫಜಲಪುರ ಬಸವೇಶ್ವರ್ ವೃತ್ತದಿಂದ ತಹಸೀಲ ಕಛೇರಿಯವರೆಗೆ ಬೃಹತ ಪ್ರತಿಭಟನೆ ಹಮ್ಮಿಕೊಂಡು ಮಾತನಾಡಿದ ಅವರು, ಬುದ್ಧ, ಬಸವ, ಅಂಬೇಡ್ಕರ್ ಸೇರಿದಂತೆ ಎಲ್ಲ ಮಹಾ ಪುರುಷರಿಗೆ ಅವಮಾನ ಮಾಡುತ್ತಿರುವುದು ಸರಿಯಲ್ಲ. ಈ ಪ್ರತಿಮೆಗಳ ಆವರಣದಲ್ಲಿ ಸಿ.ಸಿ ಕ್ಯಾಮೆರಾ ಅಳವಡಿಸಬೇಕು. ಕೂಡಲೇ ಹೊಸ ಬಸವೇಶ್ವರ ಮೂರ್ತಿ ಸ್ಥಾಪನೆ ಮಾಡಬೇಕು. ಇಂತಹ ಘಟನೆಗಳು ಆಗದಂತೆ ಮುನ್ನೆಚ್ಚರಿಕೆ ಕ್ರಮ ಜರುಗಿಸಬೇಕು ಎಂದು ತಿಳಿಸಿದರು.

ಪ್ರತಿಭಟನೆಯಲ್ಲಿ ಕಲ್ಯಾಣ ಕರ್ನಾಟಕ ಖಾಸಗಿ ಶಿಕ್ಷಣ ಸಂಸ್ಥೆಯವರ ಒಕ್ಕೂಟದ ಜಿಲ್ಲಾಧ್ಯಕ್ಷ ಸುನೀಲ ಉಡಗಿ ಮಾತನಾಡಿ, ಬಸವೇಶ್ವರ ಮೂರ್ತಿಗೆ ಅವಮಾನ ಮಾಡಿರುವುದು ಇಡಿ ಮಾನವ ಕುಲವೇ ತಲೆತಗ್ಗಿಸುವಂತಾಗಿದೆ. ಈ ಕೂಡಲೇ ಆರೋಪಿಗಳನ್ನು ಪತ್ತೆ ಹಚ್ಚಿ ಕಠಿಣ ಶಿಕ್ಷೆಗೆ ಗುರಿಪಡಿಸಿ ಗಡಿಪಾರು ಮಾಡಬೇಕೆಂದು ಆಗ್ರಹ ಪಡಿಸಿದರು. ಪ್ರತಿಭಟನೆಯಲ್ಲಿ ಚಿನ್ಮಯಗಿರಿ ಶ್ರೀಗಳು, ಕೇದಾರ ಶ್ರೀಗಳು, ಫೌಂಡೇಷನ್ ಅಧ್ಯಕ್ಷ ಶಿವಪುತ್ರಪ್ಪ ಜಿಡ್ಡಗಿ, ಸದಾಶಿವ ಮೇತ್ರೆ, ಬೀರಣ್ಣಾ ಕನಕ ಟೇಲರ್, ಮಕ್ಬೂಲ್ ಶೇಖ್, ಬಸವರಾಜ ಚಾಂದಕವಟೆ, ಶಿವಕುಮಾರ ಹಿರೇಮಠ, ಉಮೇಶ ಗುತ್ತೇದಾರ, ಬಸಣ್ಣ ಗುಣಾರಿ, ಹಣಮಂತರಾಯ ಕುಲಕರ್ಣಿ, ಆರ್.ಡಿ ಪೂಜಾರಿ, ಜಿ.ಎಸ್ ಬಾಳಿಕಾಯಿ, ಸಿದ್ದು ದೊಡ್ಡಮನಿ, ಪಂಡಿತ ನಾವಿ, ಕರೆಪ್ಪ ರೇವೂರ ಸೇರಿದಂತೆ ಹಲವಾರು ಜನರು ಭಾಗವಹಿಸಿದ್ದರು.