ಬಸವಣ್ಣನವರ ಪಂಚಲೋಹದ ಮೂರ್ತಿ ಅನಾವರಣ

ಕಲಬುರಗಿ:ಮೇ.8: ನಗರದ ಜೇವರ್ಗಿ ಕಾಲೋನಿಯ ಮಾಕಾ ಲೇಔಟ್‍ನಲ್ಲಿ ಮೇ 10ರಂದು ಬೆಳಿಗ್ಗೆ 9 ಗಂಟೆಗೆ ಶರಣ, ಶರಣೆಯರ ಸಮ್ಮುಖದಲ್ಲಿ ವಿಶ್ವಗುರು ಬಸವಣ್ಣನವರ ಪಂಚಲೋಹದ ಮೂರ್ತಿ ಅನಾವರಣಗೊಳ್ಳಲಿದೆ ಎಂದು ಮಾಕಾ ಲೇಔಟ್‍ನ ಜಗಜ್ಯೋತಿ ಬಸವೇಶ್ವರ್ ಸೇವಾ ಸಮಿತಿಯ ಅಯ್ಯಣ್ಣ ನಂದಿ, ಶಿವಕುಮಾರ್ ಧರ್ಮಗೊಂಡ್, ಪರಮೇಶ್ವರ್ ಶೆಟಗಾರ್ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸಂಯುಕ್ತ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವ ಜಯಂತಿಯ ಪ್ರಯುಕ್ತ ಮೂರ್ತಿ ಅನಾವರಣ ಹಾಗೂ ಪ್ರವಚನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ನಿರಂಜನದೇವರು 11 ದಿನಗಳ ಕಾಲ ಅಂದರೆ ಮೇ 10ರಿಂದ ಮೇ 20ರವರೆಗೆ ಬೆಳಿಗ್ಗೆ 5-30ರಂದ 6-30ರವರೆಗೆ ಹಿಮಾಯಲ ಧ್ಯಾನ ಮತ್ತು ಯೋಗ ಶಿಬಿರವನ್ನು ಉಚಿತವಾಗಿ ನಡೆಸಿಕೊಡುವರು. ಸಂಜೆ 6-30ರಿಂದ 7-30ರವರೆಗೆ ಪ್ರತಿ ದಿನ ಸಾಮೂಹಿಕ ಭಜನೆ ಮತ್ತು ಆಧ್ಯಾತ್ಮಿಕ ಪ್ರವಚನ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಳ್ಳಬೇಕು ಎಂದು ಅವರು ಕೋರಿದರು.
ಹನ್ನೆರಡನೆಯ ಶತಮಾನದ ಮಹಾ ಮಾನವತಾವಾದಿ, ಮಹಾನ್ ದಾರ್ಶನಿಕ, ಸಾಂಸ್ಕøತಿಕ ನಾಯಕ ವಿಶ್ವಗುರು ಬಸವಣ್ಣನವರು ಮತ್ತು ಬಸವಾದಿ ಶರಣರ ಬದುಕು ಇಡೀ ವಿಶ್ವಕ್ಕೆ ಆದರ್ಶದಾಯಕವಾಗಿದೆ. ಶರಣರ ಸಂಸ್ಕøತಿಯು, ಸಕಲ ಜನಾಂಗಕ್ಕೂ ಸಂಜೀವಿನಿಯಾಗಿದೆ. ಜಾತಿ, ಮತ, ಪಂಥ ಲಿಂಗಬೇಧವೆನ್ನದೇ ಎಲ್ಲ ಸಮುದಾಯಗಳ ಏಳಿಗೆಗೆ ಕ್ರಾಂತಿಕಾರದ ಚಳುವಳಿಯನ್ನು ಮಾಡಿದ್ದು ಇಡೀ ವಿಶ್ವಕ್ಕೆ ಮಾದರಿಯಾಗಿದೆ. ಶರಣ ಸಂಸ್ಕøತಿಯ ತತ್ವವು ಮಾನವ ಬಂಧುತ್ವವನ್ನು ಸೃಷ್ಟಿಸುವಲ್ಲಿ ಮಹತ್ವವೆನಿಸಿವೆ ಎಂದು ಅವರು ಹೇಳಿದರು.
ಮಾನವನ ಜೀವನ ಮುಕ್ತಿಗೆ ಭಕ್ತಿ ಮಾರ್ಗ, ಜ್ಞಾನ ಮಾರ್ಗಗಳು ಅತ್ಯಂತ ಮಹತ್ವದ ಪಾತ್ರ ವಹಿಸುತ್ತವೆಂದು ಶರಣರು ತಮ್ಮ ವಚನಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದರು. ಆದ್ದರಿಂದಲೇ ಪ್ರಸ್ತುತ ದಿನಗಳಲ್ಲಿಯೂ ಸಹ ಬಸವಾದಿ ಶರಣರ ವಚನಗಳು ನಮ್ಮೆಲ್ಲರಿಗೂ ದಾರಿ ದೀಪವಾಗಿವೆ ಎಂದು ಅವರು ತಿಳಿಸಿದರು.