ಬಸವಣ್ಣನವರ ಚಿಂತನೆಗಳನ್ನು ಅನುಸರಿಸಿ: ಪ್ರಭು.ಬಿ ಚವ್ಹಾಣ

ಬೀದರ:ಎ.24:ಸಾಮಾಜಿಕ ಸುಧಾರಣೆಗಾಗಿ ವಿಶ್ವಗುರು ಬಸವಣ್ಣನವರ ತತ್ವಾದರ್ಶಗಳು ಮತ್ತು ಚಿಂತನೆಗಳನ್ನು ನಾವೆಲ್ಲರೂ ಅನುಸರಿಸಬೇಕಿದೆ ಎಂದು ಸಚಿವರಾದ ಪ್ರಭು.ಬಿ ಚವ್ಹಾಣ ಅವರು ತಿಳಿಸಿದರು.

ಬಸವ ಜಯಂತಿಯ ನಿಮಿತ್ತ ಏಪ್ರಿಲ್ 23ರಂದು ಔರಾದ(ಬಿ) ಪಟ್ಟಣದ ಭಾರತೀಯ ಜನತಾ ಪಕ್ಷದ ಕಾರ್ಯಾಲಯದಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಹಾಗೂ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.

ಜಗತ್ತಿಗೆ ಸಮಾನತೆಯ ಸಂದೇಶ ಸಾರಿದ ದಾರ್ಶನಿಕರಲ್ಲಿ ಬಸವಣ್ಣನವರು ಅಗ್ರಗಣ್ಯರಾಗಿದ್ದಾರೆ. ಸಮಾಜದ ಏಳಿಗೆಗೆ ಮಾರಕವಾಗಿ ಪರಿಣಮಿಸಿದ್ದ ಅಸಮಾನತೆ, ಲಿಂಗ ತಾರತಮ್ಯ, ಮೂಢನಂಬಿಕೆಯಂತಹ ಸಾಮಾಜಿಕ ಸಮಸ್ಯೆಗಳನ್ನು ಹೊಡೆದೋಡಿಸಿ ಉತ್ತಮ ಸಮಾಜ ನಿರ್ಮಿಸಲು ಹೋರಾಡಿದ್ದರು ಎಂದರು.

12ನೇ ಶತಮಾನದ ವಚನಕಾರರ ಸಂದೇಶಗಳನ್ನು ಮನೆ-ಮನೆಗೆ ತಲುಪಿಸುವ ಕೆಲಸವಾಗಬೇಕಿದೆ. ಪಾಲಕರು ತಮ್ಮ ಮಕ್ಕಳಿಗೆ ಬಸವಾದಿ ಶರಣರ ಜೀವನ ತತ್ವಗಳನ್ನು ತಿಳಿಸಿಕೊಡುವ ಕೆಲಸ ಮಾಡಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಬಿಜೆಪಿ ತಾಲ್ಲೂಕು ಅಧ್ಯಕ್ಷರಾದ ರಾಮಶೆಟ್ಟಿ ಪನ್ನಾಳೆ, ಮುಖಂಡರಾದ ಶ್ರೀನಿವಾಸ ಖೂಬಾ, ಸಚಿನ್ ರಾಠೋಡ್, ಪ್ರತೀಕ ಚವ್ಹಾಣ, ಶಿವರಾಜ ಅಲ್ಮಾಜೆ, ಪ್ರಕಾಶ ಅಲ್ಮಾಜೆ, ಅಶೋಕ ಅಲ್ಮಾಜೆ, ಅಮಿತ ರಾಠೋಡ್, ಸಿದ್ರಾಮಪ್ಪ ನಿಡೋದೆ, ಹಣಮಂತ ಸುರನಾರ, ರಮೇಶ ಗೌಡ, ಬಾಲಾಜಿ ವಾಗಮೋರೆ ಹಾಗೂ ಇತರರು ಉಪಸ್ಥಿತರಿದ್ದರು.