ಬಸವಣ್ಣನವರ ಕರ್ಮ ಭೂಮಿಯಲ್ಲಿ ಬಿಜೆಪಿ ಗೆಲವು ತಡೆಯಲು ಯಾರಿಂದಲು ಸಾಧ್ಯವಿಲ್ಲ: ಲಕ್ಷ್ಮಣ ಸವದಿ

ಬಸವಕಲ್ಯಾಣ:ನ.21: ಮುಂಬರುವ ಕೆಲವೇ ದಿನಗಳಲ್ಲಿ ನಡೆಯಲಿರುವ ಕ್ಷೇತ್ರದ ಉಪ ಚುನಾವಣೆಯಲ್ಲಿ ಈ ಬಾರಿ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸುವುದು ನಿಶ್ಚಿತವಾಗಿದೆ. ಬಿಜೆಪಿ ಗೆಲವು ತಡೆಯಲು ಯಾರಿಂದಲು ಸಾಧ್ಯವಿಲ್ಲ. ಕನಕಪೂರದ ಬಂಡೆ ಬರಲಿ ಅಥವಾ ಮತ್ತಾರೇ ಬಂದರು ಅವರ ಆಟ ನಡೆಯಲ್ಲ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.
ನಗರದ ಶ್ರೀ ಬಸವೇಶ್ವರ ವೃತ್ತದಲ್ಲಿರುವ ಬಿಕೆಡಿಬಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಸ್ಥಳೀಯ ಬಿಜೆಪಿ ಪಕ್ಷದ ವತಿಯಿಂದ ಆಯೋಜಿಸಿದ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಅವರಲ್ಲಿ ಬಂಡೆ ಇದ್ದರೆ ನಮ್ಮಲ್ಲಿ ಹತೋಡಿ ಇದೆ ಎಂದು ಹೇಳುವ ಮೂಲಕ ಕಾಂಗ್ರೆಸ್ ಕುರಿತು ವ್ಯಂಗವಾಡಿದರು.
ಬಿಜೆಪಿಗೆ ಹಿಂದಿನಿಂದಲು ಭದ್ರಕೋಟೆಯಂತಿರುವ ಬೀದರ್ ಜಿಲ್ಲೆಯ ಬಸವಕಲ್ಯಾಣ ಕ್ಷೇತ್ರದ ಉಪ ಚುನಾವಣೆಯಲ್ಲಿ ಸೂರ್ಯ, ಚಂದ್ರ ಹುಟ್ಟುವದು ಎಷ್ಟು ಸತ್ಯವೋ ಸತ್ಯವೂ ನಮ್ಮ ಪಕ್ಷ ಗೆಲ್ಲುವುದು ಕೂಡ ಅಷ್ಟೇ ಸತ್ಯ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಳೆದ ಕೆಲ ದಿನಗಳ ಹಿಂದೆ ಆರ್‍ಆರ್ ನಗರ ಮತ್ತು ಶಿರಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು ಅಭೂತಪೂರ್ವ ಜಯ ಸಾಧಿಸಿದ್ದಾರೆ. ಇದು ಕಾಂಗ್ರೆಸ್ ಪಕ್ಷದವರಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷ ಬಂದರೂ ಸಹ ಅವರ ಯಾವುದೇ ಆಟ ನಡೆಯಲ್ಲ, ಚುನಾವಣೆಯಲ್ಲಿ ನಾನು ಕೂಡಾ 25ದಿನಗಳ ಕಾಲ ಮನೆ ಮಾಡಿ ಇಲ್ಲೇ ಇರುತ್ತೇನೆ. ಕಾಂಗ್ರೆಸ್‍ನವರು ಯಾವ ಆಟ ಮಾಡ್ತಾರೆ ನೋಡೋಣ ಎಂದು ಸವಾಲು ಎಸೆದರು.
ಉಪ ಚುನಾವಣೆಗೆ ಸ್ಪರ್ಧಿಸಲು ಬಿಜೆಪಿಯಲ್ಲಿ ಸುಮಾರು 12ಕ್ಕೂ ಅಧಿಕ ಸಂಖ್ಯೆಯಲ್ಲಿ ಟಿಕೆಟ್ ಆಕಾಂಕ್ಷಿಗಳಿದ್ದಾರೆ. ಆದರೆ ಪಕ್ಷದ ವರಿಷ್ಠರು ಸೂಕ್ತ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತಾರೆ. ಅವರ ಪರವಾಗಿ ಕೆಲಸ ಮಾಡಬೇಕು, ಟಿಕೆಟ್ ಆಕಾಂಕ್ಷಿಗಳು ಯಾರ ಮೇಲೂ ಸಹ ಒತ್ತಡ ಹಾಕಬಾರದು. ಇಲ್ಲಿ ಯಾರೂ ಯಾರಿಗೂ ಬೆಂಬಲಿಸಲ್ಲ. ಪಕ್ಷದ ಟಿಕೆಟ್ ಯಾರಿಗೆ ಸಿಕ್ಕರು ಬಿಜೆಪಿ ಪಕ್ಷದ ಮುಖಂಡರು, ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಿದ್ದೇ ಆದಲ್ಲಿ ಬಸವಣ್ಣನವರ ಕರ್ಮ ಭೂಮಿಯಲ್ಲಿ ಜಯ ಸಾಧಿಸಿ ಬಾವುಟ ಹಾರಿಸುವದು ಸುಲಭ ಎಂದರು.
ಟಿಕೆಟ್ ವಿಷಯದಲ್ಲಿ ಆಕಾಂಕ್ಷಿಗಳಿಂದ ಪಕ್ಷದಲ್ಲಿ ಗುಂಪುಗಾರಿಕೆ ಮಾಡುವುದು ಸಹಿಸಲಾಗದು, ಎಲ್ಲರೂ ಸೇರಿಕೊಂಡು ಒಂದೇ ವಾಹನದಲ್ಲಿ ಕ್ಷೇತ್ರದಲ್ಲಿ ಒಂದು ಸುತ್ತು ಪ್ರಚಾರ ಮಾಡುವ ಮೂಲಕ ಟಿಕೆಟ್ ಯಾರಿಗೆ ಸಿಕ್ಕರು ನಾವೇಲ್ಲ ಸೇರಿ ಪಕ್ಷದ ಅಭ್ಯರ್ಥಿ ಪರ ಕೆಲಸ ಮಾಡಿ ಗೆಲ್ಲಿಸಲು ಪ್ರಯತ್ನಿಸುತ್ತೆವೆ ಎಂದು ಜನರಲ್ಲಿ ಭರವಸೆ ಮೂಡಿಸಬೇಕು ಎಂದು ಸಲಹೆ ನೀಡಿದರು.
ಪಕ್ಷಕ್ಕೆ ಪ್ರಾಮಾಣಿಕತೆಯಿಂದ ದುಡಿದರೆ ಪಕ್ಷ ಎಂದೂ ಕೈಬಿಡಲ್ಲ. ಸೂಕ್ತ ಸಂದರ್ಭದಲ್ಲಿ ಸೂಕ್ತ ಸ್ಥಾನ ಮಾನ ನೀಡುತ್ತದೆ. ಇದಕ್ಕೆ ನಾನೇ ಉದಾಹರಣೆ ಎಂದ ಅವರು, ಯಾರೂ ಕೂಡಾ ಪಕ್ಷಕ್ಕೆ ದ್ರೋಹ ಮಾಡಬಾರದು. ಪಕ್ಷದ ಒಬ್ಬ ಸಾಮಾನ್ಯ ಕಾರ್ಯಕರ್ತನಾದ ಅಶೋಕ ಗಸ್ತಿ ಅವರಿಗೆ ರಾಜ್ಯ ಸಭೆಗೆ ಕಳುಹಿಸಿದೆ. ಆದರೆ ಕಾಂಗ್ರೆಸ್ ಹಾಗೂ ಜೆಡಿಎಸ್‍ನಿಂದ ಎಂಥವರನ್ನು ರಾಜ್ಯ ಸಭೆಗೆ ಆಯ್ಕೆ ಮಾಡಲಾಗಿದೆ ಎಂಬುದು ಎಲ್ಲರಿಗೂ ತಿಳಿದ ವಿಷಯವಾಗಿದೆ. ಪಕ್ಷದ ಸಾಮಾನ್ಯ ಕಾರ್ಯಕರ್ತನಿಗೆ ಉನ್ನತ ಸ್ಥಾನ ಕಲ್ಪಿಸಿಕೊಡುವದು ಬಿಜೆಪಿಯಲ್ಲಿ ಮಾತ್ರ ಎಂದು ತಿಳಿಸಿದರು.


ಚಪ್ಪಾಳೆಗೆ ಗರಂ ಆದ ಡಿಸಿಎಂ
ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ವೇದಿಕೆಯಲ್ಲಿ ಮಾತನಾಡುವ ವೇಳೆ ಆರಂಭದಲ್ಲಿ ಸ್ಥಳೀಯ ಮುಖಂಡರ ಹೆಸರುಗಳನ್ನು ಪ್ರಸ್ತಾಪಿಸುತ್ತ, ಶರಣು ಸಲಗರ್ ಅವರ ಹೆಸರು ಪ್ರಸ್ತಾಪಿಸುತಿದ್ದಂತೆ ಕೆಲ ಕಾರ್ಯಕರ್ತರು ಚಪ್ಪಾಳೆ ತಟ್ಟಿದ್ದಕ್ಕೆ ತಕ್ಷಣ ಗರಂ ಆದ ಡಿಸಿಎಂ ಸವದಿ, ಚಪ್ಪಾಳೆ ತಟ್ಟುವಂತೆ ನಿಮಗೆ ಹೇಳಿದ್ದು ಯಾರು ? ಎಂದು ಪ್ರಶ್ನಿಸಿ, ಇದು ಶಿಸ್ತಿನ ಪಕ್ಷ, ಇಲ್ಲಿ ಇದೇಲ್ಲ ನಡೆಯಲ್ಲ. ಇದರಿಂದ ನಿಮ್ಮ ಭವಿಷ್ಯವನ್ನು ನೀವೇ ಹಾಳು ಮಾಡಿಕೊಳ್ಳುತ್ತಿರಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.