ಬಸವಣ್ಣನವರ ಆಪ್ತ ಕಾರ್ಯದರ್ಶಿಯಾಗಿದ್ದ ಹಡಪದ ಅಪ್ಪಣ್ಣನವರು: ಮಹಾಂತೇಶ

ಅಫಜಲಪುರ: ಜು.18:ಹನ್ನೆರಡನೇ ಶತಮಾನದ ಶರಣ ಪರಂಪರೆಯಲ್ಲಿ ಬಹು ದೊಡ್ಡ ಹೆಸರು ಪಡೆದ ಅನುಭವ ಮಂಟಪದಲ್ಲಿ ಭಕ್ತಿ ಭಂಡಾರಿ ಬಸವಣ್ಣನವರ ಆಪ್ತ ಕಾರ್ಯದರ್ಶಿಯಾಗಿದ್ದವರು ಹಡಪದ ಅಪ್ಪಣ್ಣನವರು ಎಂದು ತಾಲೂಕ ಹಡಪದ ಸಮಾಜದ ತಾಲೂಕ ಅಧ್ಯಕ್ಷ ಮಹಾಂತೇಶ ಹಡಪದ ಹೇಳಿದರು.

ಅಫಜಲಪುರ ಪಟ್ಟಣದ ತಹಸೀಲ ಕಚೇರಿಯಲ್ಲಿ ತಾಲೂಕ ಆಡಳಿತ ವತಿಯಿಂದ ಹಮ್ಮಿಕೊಂಡ ಶರಣ ಹಡಪದ ಅಪ್ಪಣ್ಣನವರ 888ನೇ ಜಯಂತೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಪ್ಪಣನರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದರು.

ಹಡಪದ ಅಪ್ಪಣನವರು ಕ್ಷೌರಿಕ ವೃತ್ತಿಯ ಕಾಯಕದಲ್ಲಿ ಕೈಲಾಸ ಕಾಣುತ್ತ ವಚನ ಚಳುವಳಿ ಮತ್ತು ಸಾಮಾಜಿಕ ಕ್ರಾಂತಿಯ ಹರಿಕಾರರಲ್ಲಿ ಒಬ್ಬರಾಗಿ ಮುಂಚೂಣಿಯಲ್ಲಿದ್ದರು ಎಂದರು.

ಕುಲಕಸಬುಗಳ ಆಧಾರದ ಮೇಲೆಯೆ ಜಾತಿಯ ವ್ಯವಸ್ಥೆಯನ್ನು ಮಾಡಿ ಸಮಾಜದಲ್ಲಿ ಮೇಲು ಕೀಲುಗಳೆಂಬ ಕವಲುಗಳನ್ನು ಸೃಷ್ಟಿಸಿದ್ದರು.

ಬಸವಣ್ಣನವರು ಅನುಭವ ಮಂಟಪವೆಂಬ ಸಂಸತ್ತಿನಲ್ಲಿ ಹಡಪದ ಅಪ್ಪಣ್ಣನವರನ್ನು ತಮ್ಮ ಆಪ್ತ ಕಾರ್ಯದರ್ಶಿಯನ್ನಾಗಿ ನೇಮಿಸಿಕೊಂಡು ಸಮಾಜದಲ್ಲಿ ಬಹುದೊಡ್ಡ ಕ್ರಾಂತಿಯನ್ನು ಮಾಡಿದರು ಎಂದರು.
ಕುಮಾರ ಗೌರೀಶ ಹಡಪದ ಅವರು ಮಾತನಾಡಿದರು.

ಈ ಸಂದರ್ಭದಲ್ಲಿ ತಾಲೂಕ ಹಡಪದ ಸಮಾಜದ ಪ್ರ.ಕಾರ್ಯದರ್ಶಿ ಚಿದಾನಂದ ಹಡಪದ, ಮುಖಂಡರಾದ ಮನೋಹರ ಹಡಪದ, ಶಿವು ಹಡಪದ, ಸಿದ್ದರಾಮ ಹಡಪದ, ಜಗದೀಶ ಹಡಪದ, ರುದ್ರಗೌಡ ಹಡಪದ, ಬಸು ಹಡಪದ, ಸೇರಿದಂತೆ ತಹಸೀಲ ಕಚೇರಿ ಅಧಿಕಾರಿ ಬಸವರಾಜ ರೆಡ್ಡಿ ಹಾಗೂ ಸಿಬ್ಬಂದಿಗಳು ಇದ್ದರು.