(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜು.17: ಹನ್ನೆರಡನೇ ಶತಮಾನದ ವಚನ ಸಾಹಿತ್ಯ ನುಡಿದಂತೆ ನಡೆದವರ ಸಾಹಿತ್ಯವಾಗಿತ್ತು, ಧರ್ಮ, ಲಿಂಗ ಮತ್ತು ಜಾತ್ಯಾತೀತವಾದುದು ಎಂದು ಕಾಂಗ್ರೆಸ್ ಮುಖಂಡ ಬಿ.ವೆಂಕಟೇಶ್ ಪ್ರಸಾದ್ ಹೇಳಿದರು.
ಅವರು ನಗರದ ರಾಘವ ಕಲಾಮಂದಿರದಲ್ಲಿ ನಿನ್ನೆ ಸಂಜೆ ಕಸಾಪ ಮತ್ತು ಇತಿಹಾಸ ಅಕಾಡೆಮಿ ಜಿಲ್ಲಾ ಘಟಕಗಳು ಜಂಟಿಯಾಗಿ ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸ ಮತ್ತು “ಜಗಜ್ಯೋತಿ ಬಸವೇಶ್ವರ” ನಾಟಕ ಪ್ರದರ್ಶನ ಉದ್ಘಾಟನೆ ಮಾಡಿ ಮಾತನಾಡುತ್ತಿದ್ದರು. ಕಾಯಕವೇ ಕೈಲಾಸ ಎಂಬುದರ ಮೂಲಕ ಮಾನವನ ಬದುಕಿನ ಅರ್ಥವನ್ನು ತಿಳಿಸಿಕೊಟ್ಟರು. ಬಸವಣ್ಣನವರ ಆದರ್ಶದ ಬದುಕಿನಂತೆ ನಾವೆಲ್ಲ ಬದುಕಬೇಕೆಂದು ಹೇಳಿ ಬಸವಣ್ಣನವರ ವಚನಗಳನ್ನು ವಾಚಿಸಿದರು.
ಹಂಪಿ ಕನ್ನಡ ವಿವಿ ಪ್ರಾಧ್ಯಾಪಕ ಡಾ.ಕೆ.ರವೀಂದ್ರನಾಥ ಅವರು ಕನ್ನಡ ಸಾಹಿತ್ಯದಲ್ಲಿ ವಚನ ಸಾಹಿತ್ಯದ ಮಹತ್ವ ಕುರಿತು ಉಪನ್ಯಾಸ ನೀಡಿ, ವಚನಗಳನ್ನು ವಾಚಿಸಬೇಕು, ಬಸವ ತತ್ವದ ನಿಷ್ಠೆ ಮುಖ್ಯ.
ಬಸವಣ್ಣ ನಾಡಿನ ಸಮ ಸಮಾಜದ ಹರಿಕಾರ ಎಂದರು.
ನ್ಯಾಯಾಧೀಶರಾಗಿದ್ದ ಬಳ್ಳಾರಿಯ ಟಿಹೆಚ್ಎಂ ಸಾದಾಶಿವಯ್ಯ ಅವರನ್ನು ಸ್ಮರಿಸಿ, ಅವರು ಶರಣರ ವಚನಗಳನ್ನು ಆಂಗ್ಲಭಾಷೆಗೆ ತರ್ಜುಮೆ ಮಾಡಿ ವಚನಗಳ ಮಹತ್ವವನ್ನು ಇತರ ಭಾಷಿಕರಿಗೆ ಪರಿಚಯಿಸಿದರು.
ಪೂರ್ವ ಕರ್ನಾಟಕದಲ್ಲಿ ಐತಿಹಾಸಿಕ ಪ್ರಜ್ಞೆಯಿಂದ ಕೂಡಿದ್ದ ಸದಾಶಿವಯ್ಯನವರು ಹಂಡೆ ಅರಸರ ಬಗ್ಗೆ ಮಾಡಿರುವ ದಾಖಲೆ ಮಹತ್ವದ್ದು. ವೀರಶೈವಿಜಂ ಎಂಬ ಕೃತಿಯನ್ನು ಅವರು ಬರೆದಿದ್ದರು ಎಂದು ತಿಳಿಸಿದರು.
ವಚನ ಸಾಹಿತ್ಯ ವಿಶ್ವ ಸಾಹಿತ್ಯಕ್ಕೆ ನೀಡಿದ ಮಹತ್ವದ ಕೊಡುಗೆಯಾಗಿದೆ. 12 ನೇ ಶತಮಾನದಲ್ಲಿ ಇಂದಿನ ಸಂವಿಧಾನದ ರೀತಿಯಲ್ಲಿ ಸಮಸಮಾಜದ ಮಹತ್ವ ಸಾರಿ ಅನುಭವ ಮಂಟಪದ ಮೂಲಕ ಎಲ್ಲ ಜಾತಿ, ವರ್ಗ, ಲಿಂಗ ಸಮಾನತೆ ಪ್ರದರ್ಶಿಸಿದ್ದರು.
ಬಸವ ಕಲ್ಯಾಣದ ಕ್ರಾಂತಿ ನಂತರ ವಚನಗಳ ಸಂಗ್ರಹದ ಕೃಷಿ ನಡೆದಿದ್ದು ಹಂಪಿಯ ವಿಜಯನಗರ ಸಾಮ್ರಾಜ್ಯದ ಪ್ರೌಡದೇವರಾಯನ ಕಾಲದಲ್ಲಿ ಅದಕ್ಕಾಗಿ ಹಂಪಿಯನ್ನು ವಿಜಯ ಕಲ್ಯಾಣ ಎಂದು ಕರೆಯಲಾಗುತ್ತಿತ್ತು.
ವಚನಗಳಲ್ಲಿನ ಆಶಯವನ್ನು
ಅಂದಿನ ಕವಿಗಳಾದ ಚಾಮರಸ , ರಾಘವಾಂಕ
ಹರಿಹರ ಮೊದಲಾದವರ ಕೃತಿಗಳಲ್ಲಿ ಕಾಣಬಹುದು ಎಂದರು. ಆತ್ಮ ಶುದ್ದೀಕರಣದಿಂದ ಸಮಾಜ ಶುದ್ದೀಕರಣವನ್ನು ವಚನ ಸಾಹಿತ್ಯ ಮಾಡಿದೆ ಎಂದು ಹೇಳಿದ ಅವರು ಶ್ರವ್ಯ ಮತ್ತು ದೃಶ್ಯದ ಮೂಲಕ ಇಂದಿನ ಕಾರ್ಯಕ್ರಮ ವಿಶೇಷವಾಗಿದೆಂದರು.
ಪ್ರಸ್ತಾವಿಕವಾಗಿ ಮಾತನಾಡಿದ ದತ್ತಿದಾನಿ ಮತ್ತು ಇತಿಹಾಸ ಅಕಾಡೆಮಿಯ ಜಿಲ್ಲಾ ಅಧ್ಯಕ್ಷ ಟಿ.ಹೆಚ್.ಎಂ.ಬಸವರಾಜ್ ಅವರು ನುಡಿದಂತೆ ನಡೆಯಬೇಕು, ಮೂಡನಂಬಿಕೆಯಿಂದ ದೂರವಿರಬೇಕು ಎಂದರು.
ಅಧ್ಯಕ್ಷತೆವಹಿಸಿದ್ದ ಕಸಾಪ ಜಿಲ್ಲಾ ಅಧ್ಯಕ್ಷ ನಿಷ್ಟಿ ರುದ್ರಪ್ಪ ಮಾತನಾಡಿ ದತ್ತಿ ಉಪನ್ಯಾಸಗಳ ಮಹತ್ವದ ಬಗ್ಗೆ ತಿಳಿಸಿದರು. ಸಚಿವ ನಾಗೇಂದ್ರ ಅವರ ಆಪ್ತ ಕಾರ್ಯದರ್ಶಿ ವಿಜಯಕುಮಾರ್, ಗಣ್ಯರಾದ
ಡಾ.ವಿಜಯ ದಂಡಾವತಿ ಮಠ, ಡಾ.ಮೃತ್ಯುಂಜಯ ಹಿರೇಮಠ, ಟಿ.ಹೆಚ್.ಎಂ ಮೃತ್ಯುಂಜಯ, ಸುರೇಶ್, .ಹೆಚ್.ಎಂ. ರಾಜಕುಮಾರ್, ಕೆ.ವಿ.ರವಿಶಂಕರ್, ಡಾ.ಬಸವರಾಜ್ ಗದುಗಿನ, ಎಂ.ಅರುಣಸ್ವಾಮಿ, ಬಿ.ಎಸ್.ಪ್ರಭು ಕುಮಾರ್ ಮೊದಲಾದವರು ವೇದಿಕೆಯಲ್ಲಿದ್ದರು.
ಕಾರ್ಯಕ್ರಮದ ನಂತರ ಧಾರವಾಡದ ಬಸವರಾಜ ಬೆಂಡಿಗೇರಿ ಅವರ ನಿರ್ದೇಶನದಲ್ಲಿ ಶಿರೂರಿನ ವಿಶ್ವಭಾರತಿ ರಮ್ಯ ನಾಟಕ ಸಂಘದಿಂದ “ಜಗಜ್ಯೋತಿ ಬಸವೇಶ್ವರ” ನಾಟಕ ಪ್ರದರ್ಶನ ನಡೆಯಿತು.