ಬಸವಣ್ಣನವರು ಸಮಾಜ ಸುಧಾರಣೆಯ ಹರಿಕಾರ

ಹುಬ್ಬಳ್ಳಿ,ಫೆ18 : ಬಸವಣ್ಣನವರು ತಮ್ಮ ಅನುಭವ ಮಂಟಪದ ಮೂಲಕ ಜಗತ್ತಿನಲ್ಲಿಯೇ ಮೊಟ್ಟಮೊದಲು ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನು ಪ್ರತಿಪಾದಿಸಿದ, ಸಮಾಜ ಸುಧಾರಣೆಯ ಹರಿಕಾರ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹುಬ್ಬಳ್ಳಿ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ.

ಹುಬ್ಬಳ್ಳಿ ಗ್ರಾಮಾಂತರ ಹಾಗೂ ನಗರ ಸಾರಿಗೆ ವಿಭಾಗೀಯ ಕಚೇರಿಗಳಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿಶ್ವಗುರು ಬಸವಣ್ಣ ಸಾಂಸ್ಕೃತಿಕ ನಾಯಕ ಭಾವಚಿತ್ರ ಅನಾವರಣಗೊಳಿಸಿ ಅವರು ಮಾತನಾಡಿದರು.

12ನೇ ಶತಮಾನದಲ್ಲಿ ಬಿಜ್ಜಳ ರಾಜನ ಸಂಸ್ಥಾನದಲ್ಲಿ ಮಂತ್ರಿಯಾಗಿದ್ದ ಬಸವಣ್ಣನವರು ಕೇವಲ ಒಬ್ಬ ವ್ಯಕ್ತಿಯಾಗಿರಲಿಲ್ಲ. ಅಪ್ರತಿಮ ಆಡಳಿತಗಾರ, ದಾಸೋಹ ಹಾಗೂ ಕಾಯಕ ತತ್ವದ ಪ್ರತಿಪಾದಕ, ಸಮಾನತೆಯ ಹರಿಕಾರ, ಜಾತಿ ತಾರತಮ್ಯ- ಹಾಗೂ ಲಿಂಗ ತಾರತಮ್ಯ ನಿವಾರಕ, ಸಮಾನತೆಯ ಸಾಕಾರ, ಹಲವಾರು ತತ್ವ ಸಿದ್ದಾಂತಗಳ ಮೂಲಕ ಸಮಾಜ ಸುಧಾರಕ. ಅನುಭವ ಮಂಟಪದ ಮೂಲಕ ಜಗತ್ತಿನಲ್ಲಿಯೇ ಮೊಟ್ಟಮೊದಲು ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನು ಪ್ರತಿಪಾದಿಸಿದರು. ಸರಳ ಹಾಗೂ ವಸ್ತುನಿಷ್ಟವಾದ ವಚನಗಳ ಮೂಲಕ ಸಂಸ್ಕೃತಿಯ ಸುಧಾರಣೆಗೆ ಅವರ ಕೊಡುಗೆ ಅನನ್ಯ. ಅವರ ಸಂದೇಶಗಳು ಇಂದಿಗೂ ಪ್ರಸ್ತುತವಾಗಿವೆ ಇಂತಹ ಮಾಹಾನ್ ವ್ಯಕ್ತಿಯ ನಾಡಿನಲ್ಲಿ ಇರುವುದು ನಮ್ಮ ಸುದೈವ ಎಂದು ಹೇಳಿದರು.

ವಿಭಾಗಿಯ ತಾಂತ್ರಿಕ ಇಂಜಿನಿಯರ್ ಪ್ರವೀಣ್ ಈಡೂರ್, ಸಹಾಯಕ ಲೆಕ್ಕಾಧಿಕಾರಿ ಸುನಿಲ್ ವಾಡೇಕರ್, ಸಹಾಯಕ ಆಡಳಿತ ಅಧಿಕಾರಿ ಗುರುಪ್ರಸಾದ್, ಕಾರ್ಮಿಕ ಕಲ್ಯಾಣ ಅಧಿಕಾರಿ ರಾಜೇಂದ್ರ, ಹಾಗೂ ಎರಡೂ ವಿಭಾಗಗಳ ಸಿಬ್ಬಂದಿಗಳು ಇದ್ದರು.