ಬಸವಣ್ಣನವರು ಮಹಾ ಮಾನವತಾವಾದಿಯಾಗಿದ್ದಾರೆ:ಸಿದ್ಧಲಿಂಗ ಶ್ರೀಗಳು

ಸೈದಾಪುರ:ಮೇ.11:ಸಮಾಜದ ಕಲ್ಯಾಣಕ್ಕಾಗಿ ತಮ್ಮನ್ನು ಅರ್ಪಿಸಿಕೊಂಡ ಬಸವಣ್ಣ ಮತ್ತು ಹೇಮರೆಡ್ಡಿ ಮಲ್ಲಮ್ಮ ಮಹಾ ಮಾನವತವಾದಿಯಾಗಿದ್ದಾರು ಎಂದು ನೇರಡಗುಂಬ ಪಶ್ಚಿಮಾದ್ರಿ ಸಂಸ್ಥಾನ ಮಠದ ಪಂಚಮ ಸಿದ್ಧಲಿಂಗ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.
ಪಟ್ಟಣದಲ್ಲಿ ವಲಯ ವೀರಶೈವ ಸಮಾಜದ ವತಿಯಿಂದ ವಿಶ್ವನಾಥ ಮಂದಿರದಲ್ಲಿ ಹಮ್ಮಿಕೊಂಡ ಬಸವೇಶ್ವರ ಮತ್ತು ಹೇಮರೆಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು. ಅನುಭವ ಮಂಟಪ ರಚಿಸಿ ನಾಡಿಗೆ ಹೊಸ ಕಲ್ಪನೆಯನ್ನು ಕೊಟ್ಟ ಮಹಾತ್ಮರನ್ನು ಪ್ರತಿನಿತ್ಯ ಸ್ಮರಣೆ ಮಾಡಬೇಕು. ಬಸವಣ್ಣವನರ ವಿಚಾರಧಾರೆಗಳು ಜಯಂತಿ ಆಚರಣೆಗೆ ಸೀಮಿತವಾಗದೆ ಧರ್ಮವಂತರು, ನೀತಿವಂತರು, ಆಚರವಂತರು, ಸತ್ಯವಂತರು ನಾವಾಗಬೇಕು ಎಂದು ಕಿವಿ ಮಾತುಗಳನ್ನು ಹೇಳಿದರು.
ಸಿದ್ಧಚೇತನಾಶ್ರಮದ ಸಿದ್ಧಾರೂಢ ಮಠದ ಸೋಮೇಶ್ವರಾನಂದ ಮಹಾಸ್ವಾಮಿಗಳು ಮಾತನಾಡಿ, ಬಸವಣ್ಣನವರು ಆಡಿದ ಮಾತುಗಳು ವಚನಗಳಾದವು. ಸರಳ ರೂಪದ ಅವರ ವಿಚಾರಧಾರೆಗಳು ಪರಮಾತ್ಮನ ಚೈತನ್ಯದೊಂದಿಗೆ ಆತ್ಮ ಕಲ್ಯಾಣವನ್ನು ಕಂಡು ಕೊಳ್ಳುವಂತಿದೆ. ಶರಣರ ಅನುಭವದ ತತ್ವಗಳನ್ನು ನಾವು ಪಾಲಿಸಿಕೊಂಡರೆ ಜನ್ಮ ಸಾರ್ಥಕವಾಗುತ್ತದೆ ಎಂದು ಹೇಳಿದರು.
ವೀರಶೈವ ಸಮಾಜದ ಹಿರಿಯ ಮುಖಂಡರಾದ ಭೀಮರೆಡ್ಡಿ ಪಾಟೀಲ ಶೆಟ್ಟಹಳ್ಳಿ, ಸಿದ್ಧಣ್ಣಗೌಡ ಪಾಟೀಲ ಕಡೇಚೂರು, ಭೀಮಣ್ಣಗೌಡ ಪಾಟೀಲ ಕ್ಯಾತನಾಳ, ನಿರಂಜನರೆಡ್ಡಿ ಪಾಟೀಲ್ ಶೆಟ್ಟಿಹಳ್ಳಿ, ಗ್ರಾ.ಪಂ ಅಧ್ಯಕ್ಷೆ ಮರೆಮ್ಮ ರಡ್ಡೆಪ್ಪ, ಉಪಾಧ್ಯಕ್ಷೆ ಕವಿತಾ ಮಿರಿಯಾಲ, ಮಲ್ಲಣ್ಣಗೌಡ ಸೈದಾಪುರ, ಸದಾಶಿವರೆಡ್ಡಿ ಕಣೇಕಲ್, ವಿಶ್ವನಾಥರೆಡ್ಡಿ ಚಿಗಾನೂರು, ಬಸರೆಡ್ಡಿಗೌಡ ಹೆಗ್ಗಣಗೇರಾ, ವೀರೇಶ ಸಜ್ಜನ ಸೇರಿದಂತೆ ವಿವಿಧ ಗ್ರಾಮಗಳ ಬಸವ ಅಭಿಮಾನಿಗಳು ಭಾಗವಹಿಸಿದ್ದರು.