ಬಸವಣ್ಣನವರು ಕಾಯಕ ಜೀವಿಗಳ ನಾಯಕರು: ರಾಮಚಂದ್ರನ್ ಆರ್

ಬೀದರ:ಮೇ.15: ನಾವು ಮಾಡುವ ಯಾವುದೇ ಕೆಲಸವನ್ನು ಪ್ರೀತಿಸಬೇಕು ಎಂದು ತಿಳಿಸಿದ ಬಸವಣ್ಣನವರು ಕಾಯಕ ಜೀವಿಗಳ ನಾಯಕರು ಎಂದು ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಅವರು ಹೇಳಿದರು.
ಜಗಜ್ಯೋತಿ ಬಸವೇಶ್ವರರ ಜಯಂತಿ ನಿಮಿತ್ತ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಹಾತ್ಮ ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಬಳಿಕ ಅವರು ಮಾತನಾಡಿದರು.
ಶ್ರಮದಿಂದ ಬೆವರು ಸುರಿಸಿ ದುಡಿದ ಫಲವನ್ನು ಸ್ವಂತಕ್ಕೆ ಬಳಸಿಕೊಳ್ಳದೇ ಅದನ್ನು ಸಮಾಜದ ಲೇಸಿಗಾಗಿ ಬಳಸಬೇಕು ಎಂಬಂತಹ ದಾನ ಪರಿಕಲ್ಪನೆಯನ್ನು ನೀಡಿದ ಬಸವಣ್ಣನವರು, ಸಮಾಜದ ಸರ್ವತೋಮುಖ ಅಭ್ಯುದಯಕ್ಕೆ ಆಧಾರವಾದ ಕಾಯಕ ಎಲ್ಲದಕ್ಕೂ ಶ್ರೇಷ್ಠ ಎಂದು ಕಾಯಕ ಪರಿಕಲ್ಪನೆಯನ್ನು ಜಗತ್ತಿಗೆ ತಿಳಿಸಿದರು ಎಂದರು.
ಯಾವುದೇ ಜಾತಿ ಬೇಧವಿಲ್ಲ. ನಾವು ಮಾಡುವ ವೃತ್ತಿಯಲ್ಲಿ ಉತ್ತಮ ಮತ್ತು ಕೀಳು ಎಂಬುದಿಲ್ಲ. ಯಾವುದಾದರು ಒಂದು ವೃತ್ತಿಯಿಂದ ಮನುಷ್ಯ ಜೀವನ ನಡೆಸಬೇಕು ಎಂದು ತಿಳಿಸಿದ ಬಸವಣ್ಣನವರ ವಿಚಾರಧಾರೆಯನ್ನು ನಾವು ಎಲ್ಲರೂ ಅರಿತು ನಮ್ಮ ನಮ್ಮ ಕಾಯಕವನ್ನು ಪ್ರಾಮಾಣಿಕತೆಯಿಂದ ಮಾಡುವ ಮೂಲಕ ಬಸವೇಶ್ವರರಿಗೆ ಗೌರವ ಸಲ್ಲಿಸೋಣ ಎಂದು ತಿಳಿಸಿದರು.