ಬಸವಣ್ಣನವರು ಎಲ್ಲರನ್ನೂ ಸಮಾನವಾಗಿ ಕಂಡರು: ಪಟ್ಟದ್ದೇವರು

ಬಸವಕಲ್ಯಾಣ: ಫೆ.26:ನಗರದ ರಥ ಮೈದಾನದಲ್ಲಿರುವ ಸಭಾ ಭವನದಲ್ಲಿ ಶ್ರೀ ಬಸವೇಶ್ವರ ದೇವಸ್ಥಾನ ಪಂಚ ಕಮಿಟಿ ಹಾಗೂ ವಿಶ್ವಸ್ಥ ಸಮಿತಿಯಿಂದ 20 ದಿನಗಳ ಕಾಲ ಹಮ್ಮಿಕೊಂಡಿರುವ ಬಸವ ಪುರಾಣ ಪ್ರವಚನಕ್ಕೆ ಶಾಸಕ ಶರಣು ಸಲಗರ ಉದ್ಘಾಟಿಸಿ ಚಾಲನೆ ನೀಡಿದರು. ಭಾಲ್ಕೀಯ ಶ್ರೀ ಗುರುಬಸವ ಪಟ್ಟದ್ದೇವರು ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ 12ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣವರು ಭಕ್ತಿ ಸಾಮಾಜ್ಯ ಕಟ್ಟಿ ಇವನಾರವ ಎನ್ನದೆ ಇವ ನಮ್ಮವ ಎಂದು ಹೇಳಿ ಜಾತಿ ಭೇದ ಮಾಡದೆ ಎಲ್ಲರನ್ನೂ ಸಮಾನವಾಗಿ ಕಂಡರು. ಆದ್ದರಿಂದ ಅಲ್ಲಮಪ್ರಭು ದೇವರು ಬಸವಣ್ಣನವರುನ್ನು ಗುರು ಎಂದು ಸಂಬೋಧಿಸಿದರು ಎಂದು ಹೇಳಿದರು. ಬಸವಣ್ಣನವರು ಬಿಜ್ಜಳ ರಾಜನ ಆಸ್ಥಾನದಲ್ಲಿ ಮಹಾಮಂತ್ರಿಯ ಸ್ಥಾನದಲ್ಲಿದ್ದು ಸಾಮಾಜಿಕ ನ್ಯಾಯ ನೀಡಿ ಅಧಿಕಾರ ಸದುಪಯೋಗಪಡಿಸಿಕೊಂಡರು ಎಂದರು.
ಹೂಲಸೂರನ ಡಾ. ಶಿವಾನಂದ ಸ್ವಾಮಿಜಿ ಮಾತನಾಡಿ, ಬಸವ ಪುರಾಣ ಭೀಮಕವಿ ಬರೆದಿದ್ದಾರೆ, ಅದನ್ನು ವಿಸ್ತಾರವಾಗಿ ಇಲ್ಲಿ ಪ್ರಸ್ತುತಪಡಿಸಲಾಗುತ್ತದೆ. ವೈಚಾರಿಕ ಚಿಂತನೆ ಬೇರೆ, ಬಸವ ಪುರಾಣ ಬೇರೆ. ಅದನ್ನು ಹೇಳುವ ಸಿದ್ದಿ ವಿರೂಪಾಕ್ಷ ಸ್ವಾಮಿಜಿಯವರಿಗೆ ಮಾತ್ರ ಸಾಧಿಸಿದೆ ಎಂದರು.
ಪೂಜ್ಯ ಶ್ರೀ ಕುಮಾರ ವಿರುಪಾಕ್ಷ ಮಹಾಸ್ವಾಮೀಜಿ, ಶ್ರೀ ಬಸವೇಶ್ವರ ದೇವಸ್ಥಾನ ವಿಶ್ವಸ್ಥ ಸಮಿತಿಯ ಅಧ್ಯಕ್ಷ ಶಶಿಕಾಂತ ದುರ್ಗೆ, ಶ್ರೀ ಬಸವೇಶ್ವರ ದೇವಸ್ಥಾನ ಪಂಚ ಕಮಿಟಿಯ ಅಧ್ಯಕ್ಷ ಬಸವರಾಜ ಕೋರಕೆ, ಪಂಚ ಕಮಿಟಿಯ ಕಾರ್ಯದರ್ಶಿ ಶ್ರೀಕಾಂತ ಬಡದಾಳೆ, ಸಹ ಕಾರ್ಯದರ್ಶಿ ವಿವೇಕಾನಂದ ಹೊದಲೂರೆ, ನಿರ್ದೇಶಕರಾದ ಅಶೋಕ ನಾಗರಾಳೆ, ರೇವಣಪ್ಪಾ ರಾಯವಾಡೆ, ವಿಶ್ವಸ್ಥ ಸಮಿತಿಯ ಉಪಾಧ್ಯಕ್ಷ ಡಾ. ಜಿ.ಎಸ್ ಭೂರಳೆ ಉಪಸ್ಥಿತರಿದ್ದರು. ವಿವೇಕ ಹೊದಲೂರೆ ಸ್ವಾಗತಿಸಿದರೆ, ಡಾ. ಬಸವರಾಜ ಖಂಡಾಳೆ ನಿರೂಪಿಸಿ, ವಂದಿಸಿದರು.