ಬಸವಕಲ್ಯಾಣ: 19ನೇ ಕಲ್ಯಾಣಪರ್ವ ನಾಳೆಯಿಂದ

ಕಲಬುರಗಿ,ಅ.29-ಬೀದರ್ ಜಿಲ್ಲೆಯ ಬಸವಕಲ್ಯಾಣದ 108 ಅಡಿ ಎತ್ತರದ ಬಸವಣ್ಣನವರ ಪ್ರತಿಮೆ ಆವರಣದಲ್ಲಿ ಅ.30 ಹಾಗೂ 31 ರಂದು 19ನೇ ಕಲ್ಯಾಣಪರ್ವ ಕಾರ್ಯಕ್ರಮವನ್ನು ಕೋವಿಡ್ ನಿಯಮಾನುಸಾರ ಅತ್ಯಂತ ಸರಳವಾಗಿ ಆಚರಿಸಲಾಗುವುದು ಎಂದು ಕೂಡಲ ಸಂಗಮ ಬಸವ ಧರ್ಮ ಪೀಠದ ಪೀಠಾಧ್ಯಕ್ಷೆ ಡಾ.ಮಾತೆ ಗಂಗಾದೇವಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 2002 ರಿಂದ ಅಂದರೆ 18 ವರ್ಷಗಳಿಂದ ಕಲ್ಯಾಣಪರ್ವ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಂಡು ಬರಲಾಗುತ್ತಿದ್ದು, ಈ ವರ್ಷ ಕೊರೊನಾ ಹಿನ್ನೆಲೆಯಲ್ಲಿ ಕಲ್ಯಾಣಪರ್ವ ಕಾರ್ಯಕ್ರಮವನ್ನು ಸರ್ಕಾರದ ನಿಯಮಾವಳಿ ಪ್ರಕಾರ ಸ್ಯಾನಿಟೈಸರ್, ಮಾಸ್ಕ್ ಮತ್ತು ಸಾಮಾಜಿಕ ಅಂತರ ಕಾಯ್ದುಕೊಂಡು ಅತ್ಯಂತ ಸರಳವಾಗಿ ಆಚರಿಸಲು ತೀರ್ಮಾನಿಸಲಾಗಿದೆ ಎಂದರು.
ಅ.30 ರಂದು ಬೆಳಿಗ್ಗೆ 10.30ಕ್ಕೆ ಬಸವಕಲ್ಯಾಣ ಅಲ್ಲಮಪ್ರಭು ಶೂನ್ಯಪೀಠದ ಪೀಠಾಧ್ಯಕ್ಷ ಜಗದ್ಗುರು ಸಿದ್ಧರಾಮೇಶ್ವರ ಸ್ವಾಮೀಜಿ ಅವರ ನೇತೃತ್ವದಲ್ಲಿ, ಮಹಾರಾಷ್ಟ್ರದ ಅಲ್ಲಮಗಿರಿ ಅಲ್ಲಮಪ್ರಭು ಯೋಗಪೀಠದ ಪೀಠಾಧ್ಯಕ್ಷ ಜಗದ್ಗುರು ಬಸವಕುಮಾರ ಸ್ವಾಮೀಜಿ, ಬೀದರ ಬಸವ ಮಂಟಪದ ಸದ್ದುರು ಮಾತೆ ಸತ್ಯಾದೇವಿ, ಬಸವಕಲ್ಯಾಣ ಬಸವ ಮಹಾಮನೆಯ ಸದ್ಗುರು ಬಸವಪ್ರಭು ಸ್ವಾಮೀಜಿ ಅವರ ಸಮ್ಮುಖದಲ್ಲಿ ನಡೆಯುವ ಈ ಕಾರ್ಯಕ್ರಮವನ್ನು ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ ಅವರು ಉದ್ಘಾಟಿಸಲಿದ್ದಾರೆ. ವಿಧಾನ ಪರಿಷತ್ ಸದಸ್ಯ ಅರವಿಂದ ಅರಳಿ, ಬೀದರ ಜಿ.ಪಂ.ಅಧ್ಯಕ್ಷೆ ಗೀತಾ ಪಂಡಿತ್ ಚಿದ್ರಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಕಲ್ಯಾಣಪರ್ವ ಸ್ವಾಗತ ಸಮಿತಿ ಅಧ್ಯಕ್ಷ ಶಿವಶರಣಪ್ಪ ಪಾಟೀಲ ಹಾರೂರಗೇರಿ ಅಧ್ಯಕ್ಷತೆ ವಹಿಸಲಿದ್ದಾರೆ. ಬೆಂಗಳೂರಿನ ಚನ್ನಬಸವೇಶ್ವರ ಜ್ಞಾನಪೀಠದ ಪೀಠಾಧ್ಯಕ್ಷ ಜಗದ್ಗುರು ಬಸವಾನಂದ ಸ್ವಾಮೀಜಿ ಪ್ರಾಸ್ತಾವಿಕವಾಗಿ ಮಾತಾನಾಡುವರು. ಜಗದ್ಗುರು ಮಾತೆ ಜ್ಞಾನೇಶ್ವರಿ ಮತ್ತು ದಾನೇಶ್ವರಿ ಧರ್ಮಗುರು ಪೂಜೆ ನೆರವೇರಿಸುವರು. ರಾಷ್ಟ್ರೀಯ ಬಸವದಳ ಕಲಬುರಗಿ ಜಿಲ್ಲಾ ಗೌರವಾಧ್ಯಕ್ಷ ಅಧ್ಯಕ್ಷ ರೇವಣಪ್ಪ ಹೆಗ್ಗಣೆ ಧ್ವಜಾರೋಹಣ ನೆರವೇರಿಸುವರು ಎಂದು ತಿಳಿಸಿದರು.
ಅ.31 ರಂದು ಬೆಳಿಗ್ಗೆ 10.30ಕ್ಕೆ ಧರ್ಮ ಚಿಂತನ ಗೋಷ್ಠಿ ನಡೆಯುವುದು ಎಂದು ತಿಳಿಸಿದರು. ಶರಣ ಬಂಧುಗಳು ಫೇಸ್ ಬುಕ್ ಲೈವ್ ನಲ್ಲಿ ಎರಡೂ ದಿನಗಳ ಕಾರ್ಯಕ್ರಮ ವೀಕ್ಷಿಸಬಹುದು ಎಂದು ತಿಳಿಸಿದರು. ರಾಷ್ಟ್ರೀಯ ಬಸವದಳದ ಜಿಲ್ಲಾಧ್ಯಕ್ಷ ಆರ್.ಜಿ.ಶೆಟಗಾರ, ಗೌರವಾಧ್ಯಕ್ಷ ರೇವಣಪ್ಪ ಹೆಗ್ಗಣೆ, ಜಗದ್ಗುರು ಮಾತೆ ಜ್ಞಾನೇಶ್ವರಿ, ಓಂಕಾರೇಶ್ವರಿ ಮಾತಾಜಿ, ನಾಗೇಂದ್ರಪ್ಪ ನಿಂಬರ್ಗಿ, ಶಾಂತಪ್ಪ ಪಾಟೀಲ ಅವರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.