ಬಸವಕಲ್ಯಾಣ ಸ್ವಚ್ಛ-ಸುಂದರವನ್ನಾಗಿಸುವ ಗುರಿ: ಸಲಗಾರ

ಬಸವಕಲ್ಯಾಣ:ಮೇ.31: ನಗರವನ್ನು ಸ್ವಚ್ಛ ಹಾಗೂ ಸುಂದರವನ್ನಾಗಿಸುವ ಗುರಿ ಹೊಂದಿದ್ದು ಅದರಂತೆ ನಗರಸಭೆ ಅಧಿಕಾರಿ ಹಾಗೂ ಸಿಬ್ಬಂದಿಯವರು ಮುತುವರ್ಜಿವಹಿಸಿ ಕೆಲಸ ಮಾಡಬೇಕು. ಇದಕ್ಕೆ ಜನರೂ ಸಹಕರಿಸಬೇಕು ಎಂದು ಶಾಸಕ ಶರಣು ಸಲಗರ ಹೇಳಿದರು.
ಭಾನುವಾರ ನಗರದ ಕೈಕಡಿ ಗಲ್ಲಿ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಸಂಚರಿಸಿದ ಶಾಸಕರು ಚರಂಡಿಗಳ ಗುಣಮಟ್ಟ ಹಾಗೂ ಅವುಗಳ ಸ್ಥಿತಿಗತಿಯನ್ನು ಪರಿಶೀಲಿಸಿದರು. ಹಲವು ಕಡೆ ಅಸ್ವಚ್ಛತೆ ಇರುವುದನ್ನು ಕಂಡು ಬೇಸರ ವ್ಯಕ್ತಪಡಿಸಿದ ಅವರು, ಮಳೆಗಾಲ ಆರಂಭಕ್ಕೂ ಮುನ್ನ ನಗರದ ಎಲ್ಲ ಚರಂಡಿಗಳು ಸ್ವಚ್ಛವಾಗಿರಬೇಕು. ಯಾವ ಮನೆಗೂ ಮಳೆ ನೀರು ನುಗದಂತೆ ಮುನ್ನಚ್ಚರಿಕೆ ವಹಿಸಬೇಕು ಎಂದು ತಮ್ಮ ಜೊತೆಯಲ್ಲಿದ್ದ ಅಧಿಕಾರಿಗಳು ಸೂಚಿಸಿದರು.
ಆರೋಗ್ಯ ಸಮಸ್ಯೆಗಳಿಗೆ ಅಸ್ವಚ್ಛತೆಯೂ ಒಂದು ಪ್ರಮುಖ ಕಾರಣ. ಪ್ರತಿಯೊಬ್ಬರು ಸ್ವಚ್ಛಮೇವ ಜಯತೆಯ ಸಂಕಲ್ಪ ಹೊತ್ತು ತಮ್ಮ ತಮ್ಮ ಮನೆಯ ಸುತ್ತಮುತ್ತಲಿನ ವಾತಾವರಣವನ್ನು ಸ್ವಚ್ಛವಾಗಿರಿಸಿಕೊಳ್ಳಬೇಕು. ಉತ್ತಮ ಆರೋಗ್ಯವೇ ನಮ್ಮ ನೀಜವಾದ ಸಂಪತ್ತು ಎಂದರು.
ಈ ವೇಳೆ ಬಿಜೆಪಿ ನಗರಾಧ್ಯಕ್ಷ ಕೃಷ್ಣಾ ಗೋಣೆ, ಹುಲಸೂರ ತಾಪಂ ಅಧ್ಯಕ್ಷ ಸಿದ್ರಾಮ ಕಾಮಣ್ಣ, ಸದಾನಂದ ಪಾಟೀಲ್, ರತಿಕಾಂತ್ ಕೋಹಿನೂರ ಇನ್ನಿತರರಿದ್ದರು.