
ಬಸವಕಲ್ಯಾಣ: ಮಾ.11:ಇಲ್ಲಿನ ಗೋರಟಾದ ಹುತಾತ್ಮ ಸ್ಮಾರಕದ ಸ್ಥಳದಲ್ಲಿ ಪ್ರತಿಷ್ಠಾಪಿಸಲು ಉದ್ದೇಶಿಸಿರುವ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಪ್ರತಿಮೆಯನ್ನು ಶುಕ್ರವಾರ ನಗರದಲ್ಲಿ ಮೆರವಣಿಗೆ ಮಾಡಲಾಯಿತು.
ಬೆಳಗಾವಿಯಿಂದ ತಯಾರಿಸಿರುವ 20 ಅಡಿ ಎತ್ತರದ ಕಂಚಿನ ಮೂರ್ತಿ ಇದಾಗಿದೆ.
ಸಂಜೆ ಇಲ್ಲಿನ ಸಸ್ತಾಪುರ ಬಂಗ್ಲಾಕ್ಕೆ ತೆರೆದ ವಾಹನದಲ್ಲಿ ಮೂರ್ತಿ ಬಂದಾಗ ಶಾಸಕ ಶರಣು ಸಲಗರ ಪುಷ್ಪಮಾಲೆ ಅರ್ಪಿಸಿ ಸ್ವಾಗತಿಸಿದರು.
ನಂತರ ಅವರು ಮಾತನಾಡಿ, ` ಹೈದರಾಬಾದ್ ವಿಮೋಚನಾ ಚಳವಳಿಯ ಭಾಗವಾಗಿ ಗೋರಟಾದಲ್ಲಿ ಹುತಾತ್ಮರಾದ 200 ಕ್ಕೂ ಹೆಚ್ಚು ಜನರ ಸ್ಮರಣಾರ್ಥ ಈವರೆಗೆ ಅಲ್ಲಿ ಸ್ಮಾರಕ ಇದ್ದಿರಲಿಲ್ಲ. 8 ವರ್ಷಗಳ ಹಿಂದೆ ಸ್ಮಾರಕ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ್ದರೂ ಕೆಲಸ ಕುಂಟುತ್ತ ಸಾಗಿತ್ತು’ ಎಂದು ಹೇಳಿದರು.
‘ಗ್ರಾಮಸ್ಥರ ಬೇಡಿಕೆಗೆ ಅನುಗುಣ ವಾಗಿ ಈಚೆಗೆ ಕಾಮಗಾರಿ ತೀವ್ರಗೊಳಿಸಿ ಆವರಣ ಗೋಡೆ ನಿರ್ಮಾಣ, ಉದ್ಯಾನ ಇತ್ಯಾದಿ ? 2 ಕೋಟಿ ವೆಚ್ಚದ ಕಾಮಗಾರಿ ಕೈಗೊಳ್ಳಲಾಗಿದೆ. ದೀಪಸ್ತಂಭ, ಧ್ವಜಸ್ತಂಭ ಹಾಗೂ ಮೂರ್ತಿ ನಿರ್ಮಾಣದ ಕಟ್ಟೆ ಆಗಲೇ ನಿರ್ಮಾಣವಾಗಿದೆ. ಬೆಳಗಾವಿಯಲ್ಲಿ ಮೂರ್ತಿಯೂ ಸಿದ್ಧಗೊಂಡಿತ್ತು. ಈಗ ಅದನ್ನು ಇಲ್ಲಿಗೆ ತರಿಸಲಾಗಿದ್ದು ಶೀಘ್ರ ಪ್ರತಿಷ್ಠಾಪನಾ ಕಾರ್ಯ ನೆರೆವೇರಿಸಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರನ್ನು ಆಹ್ವಾನಿಸಬೇಕು ಎಂಬುದು ಗ್ರಾಮಸ್ಥರ ಬಯಕೆಯಾಗಿದೆ. ಈ ಬಗ್ಗೆ ಶೀಘ್ರ ನಿರ್ಣಯಿಸಲಾಗುವುದು’ ಎಂದರು.
ಮುಖಂಡರಾದ ಈಶ್ವರಸಿಂಗ್ ಠಾಕೂರ ಮಾತನಾಡಿದರು. ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ರಾಜಕುಮಾರ ಶಿರಗಾಪುರ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ ಮಂಠಾಳಕರ್, ತಾಲ್ಲೂಕು ಘಟಕದ ಅಧ್ಯಕ್ಷ ಅಶೋಕ ವಕಾರೆ, ಅರುಣ ಬಿನ್ನಾಡಿ, ಸೂರ್ಯಕಾಂತ ಧೋನಿ, ವಿಜಯ ಪಾಟೀಲ, ಅರಹಂತ ಸಾವಳೆ, ಸೂರ್ಯಕಾಂತ ಚಿಲ್ಲಾಬಟ್ಟೆ, ಜ್ಞಾನೇಶ್ವರ ಮುಳೆ, ಸಿದ್ದು ಬಿರಾದಾರ, ಸೋಮನಾಥ ಪಾಟೀಲ, ಸಂಜೀವ ಸುಗೂರೆ, ಮಹೇಶ್ವರ ಸ್ವಾಮಿ, ಶಿವಾ ಕಲ್ಲೋಜಿ, ಶ್ರೀನಿವಾಸ ತೆಲಂಗ, ರಾಜೀವ ಭೋಸ್ಲೆ ಉಪಸ್ಥಿತರಿದ್ದರು.