ಬಸವಕಲ್ಯಾಣ ಮತ ಎಣಿಕೆ ಕಾರ್ಯಕ್ಕೆ ಪೂರ್ವ ಸಿದ್ದತೆ

ಬೀದರ:ಎ.28: ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯ ಮತ ಎಣಿಕೆ ಕಾರ್ಯ
ಮೇ 2ರಂದು ನಡೆಯಲಿದ್ದು, ಅಗತ್ಯ ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ರಾಮಚಂದ್ರನ್ ಆರ್ ತಿಳಿಸಿದ್ದಾರೆ.

ಪ್ರತಿ ಅಭ್ಯರ್ಥಿಯು ತಮ್ಮ ಹಾಗೂ ತಮ್ಮ ಮತ ಏಣಿಕೆ ಏಜೆಂಟ್ ಆಯ್ಕೆ ಮಾಡುವ ಪ್ರಕ್ರಿಯೆಯನ್ನು ಏಪ್ರೀಲ್ 28ರಂದು ಮಧ್ಯಾಹ್ನ 3 ಗಂಟೆಯೊಳಗಾಗಿ ಮಾಡಿಸಿ, ಸಂಜೆ 5.30ರೊಳಗೆ ಆರ್‍ಒ ಕಚೇರಿಯಲ್ಲಿ ಪಟ್ಟಿ ನೀಡಿ ಅನುಮೋದನೆ ಪಡೆಯಬೇಕು.

ಏಪ್ರೀಲ್ 29 ರಂದು ಸಂಜೆಯೊಳಗೆ ಆಯ್ಕೆಯಾದ ಮತ ಎಣಿಕೆ ಏಜೆಂಟ್‍ಗಳಿಗೆ ಆರ್.ಟಿ.ಪಿ.ಸಿ.ಆರ್. ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡಿಸಿ 1ನೇ ಮೇ ಮಧ್ಯಾಹ್ನ 12 ಗಂಟೆಯ ಒಳಗಾಗಿ ಮತ ಏಣಿಕೆ ಏಜೆಂಟ್‍ಗಳ ಆರ್.ಟಿ.ಪಿ.ಸಿ.ಆರ್. ರಿಪೋರ್ಟನ್ನು ದೃಢೀಕರಿಸಿ ಆರ್‍ಓ ಅವರಿಗೆ ಸಲ್ಲಿಸಬೇಕು.ಒಂದು ವೇಳೆ ರಿಪೋರ್ಟ್ ಪಾಸಿಟಿವ್ ಇದ್ದಲ್ಲಿ ಎಣಿಕೆ ಕೇಂದ್ರದಲ್ಲಿ ಪ್ರವೇಶ ನೀಡುವುದಿಲ್ಲ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ.
ವಿಜಯೋತ್ಸವ, ಮೆರವಣಿಗೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈಗಾಗಲೇ ಮೇ 2ರಂದು ಲಾಕ್‍ಡೌನ್ ಚಾಲ್ತಿಯಲ್ಲಿರುವುದರಿಂದ ಇದರೊಂದಿಗೆ ಮತ ಎಣಿಕೆ ಕೇಂದ್ರದ ಹೊರಗಡೆ ಯಾವುದೇ ಬೆಂಬಲಿಗರು, ಸಾರ್ವಜನಿಕರು ಸೇರುವುದನ್ನು ನಿಷೇಧಿಸಲಾಗಿದೆ ತಿಳಿಸಿದ್ದಾರೆ.

7 ಗಂಟೆಯೊಳಗೆ ಹಾಜರಿರಲು ಸೂಚನೆ: ಮತ ಎಣಿಕೆ ಕೆಂದ್ರಕ್ಕೆ ಎಲ್ಲ ಅಭ್ಯರ್ಥಿ, ಅಭ್ಯರ್ಥಿ ಏಜೆಂಟ್ ಮತ್ತು ಮತ ಏಣಿಕೆ ಏಜೆಂಟ್‍ರು ಬೆಳಿಗ್ಗೆ 7 ಗಂಟೆ ಒಳಗಾಗಿ ಕಡ್ಡಾಯವಾಗಿ ಹಾಜರಾಗಲು ಸೂಚಿಸಲಾಗಿದೆ. ಬೆಳಿಗ್ಗೆ 7.30ರ ನಂತರ ಬರುವವರಿಗೆ ಪ್ರವೇಶ ನಿರಾಕರಿಸಲಾಗುವುದು ಎಂದು ಸೂಚನೆ ನೀಡಲಾಗಿದೆ.

ಮತ ಏಣಿಕೆ ಕೊಠಡಿಯ ಒಳಗಡೆ ಕಡ್ಡಾಯವಾಗಿ ಡಬಲ್ ಮಾಸ್ಕ್‌ಗಳನ್ನು ಧರಿಸಬೇಕು. ಎನ್-95 ಮಾಸ್ಕ ಅನ್ನು ಧರಿಸುವುದು ಕಡ್ಡಾಯ ಎಂದು ತಿಳಿಸಲಾಗಿದೆ. ವಾಹನ ಪಾಸ್ ಗಳನ್ನು ಬಸವಕಲ್ಯಾಣದ ಚುನಾವಣಾ ಅಧಿಕಾರಿಯಿಂದ ಏಪ್ರಿಲ್ 30ರೊಳಗೆ ಒಳಗೆ ಪಡೆದುಕೊಳ್ಳಲು ಸೂಚಿಸಲಾಗಿದೆ.

200 ರ್‍ಯಾಟ್‌ ಕಿಟ್‍ಗಳ ವ್ಯವಸ್ಥೆ: ಈಗಾಗಲೇ ಮತ ಎಣಿಕಾ ಸಿಬ್ಬಂದಿ ನೇಮಕಾತಿ ಮಾಡಲಾಗಿದೆ. ಏಪ್ರೀಲ್ 28ರಂದು ತರಬೇತಿ ಏರ್ಪಡಿಸಲಾಗಿದೆ. ತರಬೇತಿಯಲ್ಲಿ ಎಲ್ಲ ಸಿಬ್ಬಂದಿ ಆರ್.ಟಿ.ಪಿ.ಸಿ.ಆರ್. ತಪಾಸಣೆ ಮಾಡಲಾಗುವುದು. ಮತ ಎಣಿಕಾ ದಿನ ಮತ ಎಣಿಕೆ ಕೇಂದ್ರಕ್ಕೆ ಬರುವ ಎಲ್ಲ ಸಿಬ್ಬಂದಿ ಆರ್.ಟಿ.ಪಿ.ಸಿ.ಆರ್. ತಪಾಸಣೆ ವರದಿ ಬಾರದೆ ಇದ್ದಲ್ಲಿ ಅಂತಹ ಸಿಬ್ಬಂದಿ, ಅಧಿಕಾರಿ, ಏಜೆಂಟ್ ಗಳ ಕೋವಿಡ್-19 ತಪಾಸಣೆಯು ರ್‍ಯಾಟ್‌ ಕಿಟ್‍ಗಳ ಮೂಲಕ ಮಾಡಲು 200 ರ್‍ಯಾಟ್‌ ಕಿಟ್‍ಗಳ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.