ಬಸವಕಲ್ಯಾಣ: ಮತಯಂತ್ರಗಳ ಬಳಕೆ ಅರಿವು ಕಾರ್ಯಕ್ರಮ

ಬೀದರ.ಮಾ.28: ಬಸವಕಲ್ಯಾಣ ವಿಧನಾಸಭಾ ಉಪ ಚುನಾವಣಾ ಕ್ಷೇತ್ರದಲ್ಲಿ ಸೂಕ್ಷ್ಮ, ಅತೀ ಸೂಕ್ಷ್ಮ ಮತ್ತು ಹೆಚ್ಚುವರಿ ಸೇರಿ ಒಟ್ಟು 329 ಮತಗಟ್ಟೆಗಳಲ್ಲಿ ಜಿಲ್ಲಾ ಸ್ವೀಪ್ ಸಮಿತಿಯಿಂದ ಮತದಾನ ಮಹತ್ವ, ಮತಯಂತ್ರಗಳ ಬಳಕೆ ಅರಿವು ಕಾರ್ಯಕ್ರಮಗಳು ನಿರಂತರ ನಡೆಯುತ್ತಿವೆ.

ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷರು ಆಗಿರುವ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಹೀರಾ ನಸೀಮ್ ಅವರ ಸೂಚನೆಯಂತೆ ಸೆಕ್ಟರ್ ಆಫೀಸರ್ಸ ಅವರನ್ನೊಳಗೊಂಡ 26 ತಂಡಗಳು ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಹಳ್ಳಿ ಹಳ್ಳಿಗೆ ಸಂಚರಿಸಿ ಆಯಾ ಮತ ಗಟ್ಟೆಗಳಲ್ಲಿ ಮತದಾನದ ಮಹತ್ವ ಮತ್ತು ಮತಯಂತ್ರಗಳ ಬಗ್ಗೆ ಅರಿವು ಮೂಡಿಸಲಾಗುತ್ತಿದೆ.

ಸಿಇಓ ಮನವಿ: ಬಸವಕಲ್ಯಾಣ ವಿಧಾನಸಭಾ ಉಪ ಚುನಾವಣೆಯಲ್ಲಿ ಶೇಕಡವಾರು ಗರಿಷ್ಟ ಪ್ರಮಾಣದಲ್ಲಿ ಮತದಾನ ದಾಖಲಾಗಬೇಕು. ಬಸವಕಲ್ಯಾಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲ ಗ್ರಾಮಗಳಲ್ಲಿ 18 ವರ್ಷಗಳ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಮತದಾನದ ಮಹತ್ವವನ್ನು ತಿಳಿಸಲು ಮತ್ತು ಇವಿಎಂ-ವಿವಿಪ್ಯಾಟ್ ಮತಯಂತ್ರಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳು ನಡೆಯುತ್ತಿವೆ. 18 ವರ್ಷಗಳ ಮೇಲ್ಪಟ್ಟ ಎಲ್ಲರೂ ತಪ್ಪದೇ ಮತದಾನ ಮಾಡಬೇಕು ಜಿಪಂ ಸಿಇಓ ಜಹೀರಾ ನಸೀಮ್ ಅವರು ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಸೆಕ್ಟರ್ ಆಫಿಸರ್‍ಗೆ ತರಬೇತಿ: ಜಿಲ್ಲಾಧಿಕಾರಿಗಳು ಮತ್ತು ಜಿಪಂ ಸಿಇಓ ಅವರ ಸಮ್ಮುಖದಲ್ಲಿ ಸೆಕ್ಟರ್ ಆಫೀಸರ್ ಗಳಿಗೆ ಹಲವಾರು ಬಾರಿ ತರಬೇತಿ ನೀಡಲಾಗಿದೆ. ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡ ವಿವಿಧ ತಂಡಗಳಿಗು ಕೂಡ ಜಿಲ್ಲಾ ಚುನಾವಣಾ ಮಾಸ್ಟರ್ ಟ್ರೇನರ್ ಗೌತಮ ಅರಳಿ ಅವರಿಂದ ತರಬೇತಿ ಕೊಡಿಸಲಾಗಿದೆ.

ಅರಿವು ಕಾರ್ಯಕ್ರಮ ವಿಸ್ತರಣೆ: ಮತಗಟ್ಟೆಗಳು ಅಲ್ಲದೇ ಕೆ.ಎಸ್.ಆರ್.ಟಿ.ಸಿ ವರ್ಕರ್ಸ, ಪೌರ ಕಾರ್ಮಿಕರು, ಶಾಲಾ ಕಾಲೇಜು ವಿದ್ಯಾರ್ತಿಗಳಿಗೂ ಕೂಡ ಮತದಾನದ ಮಹತ್ವ ಮತ್ತು ಮತ ಯಂತ್ರಗಳ ಬಳಕೆ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳು ನಡೆಯುತ್ತಿವೆ.

ಹುಲಸೂರ ಕಾಲೇಜಿನಲ್ಲಿ: ಸ್ವೀಪ್ ತಂಡದ ನೇತೃತ್ವದಲ್ಲಿ ಮೊನ್ನೆ ಹುಲಸೂರನ ಸರ್ಕಾರಿ ಪದವಿ ಕಾಲೇಜಿನಲ್ಲಿ ಮತದಾನದ ಮಹತ್ವ ಮತ್ತು ಮತಯಂತ್ರಗಳ ಬಳಕೆ ಬಗ್ಗೆ ಇತ್ತೀಚೆಗೆ ಅರಿವು ಕಾರ್ಯಕ್ರಮ ನಡೆಯಿತು. ಹುಲಸೂರ ತಹಸೀಲ್ದಾರ ಶಿವಾನಂದ ಮೇತ್ರೆ ಮತ್ತು ಕಾಲೇಜಿನ ಪ್ರಾಂಶುಪಾಲರು ಮತ್ತು ಇನ್ನೀತರರು ಇದ್ದರು.