ಬಸವಕಲ್ಯಾಣ: ಮತದಾನದ ಅರಿವಿಗಾಗಿ ಕ್ಯಾಂಡಲ್ ಮಾರ್ಚ

ಬೀದರ ಏ. 04: 47-ಬಸವಕಲ್ಯಾಣ ವಿಧಾನಸಭಾ ಉಪ ಚುನಾವಣೆ-2021ರ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮತ್ತು ಸ್ವೀಪ್ ಸಮಿತಿಯಿಂದ ವಿವಿಧ ಇಲಾಖೆಗಳ ಆಶ್ರಯದೊಂದಿಗೆ ಮತದಾನ ಜಾಗೃತಿ ಕಾರ್ಯಕ್ರಮಗಳು ಬಸವಕಲ್ಯಾಣ ತಾಲೂಕಿನಾದ್ಯಂತ ನಡೆಯುತ್ತಿವೆ.
“ಮತದಾನ ನಮ್ಮ ಸಂವಿಧಾನಬದ್ಧ ಹಕ್ಕು ಎಲ್ಲರೂ ತಪ್ಪದೇ ಮತದಾನ ಮಾಡಿ”. “ನನ್ನ ಮತ ಮಾರಾಟಕ್ಕಿಲ್ಲ ನಾನು ತಪ್ಪದೇ ಮತದಾನ ಮಾಡುವೆ” ಎನ್ನುವ ಬ್ಯಾನರಡಿ ಇತ್ತೀಚೆಗೆ ಬಸವಕಲ್ಯಾಣ ನಗರದಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ ನಡೆಯಿತು.
ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಕಾಲೇಜು ಮತ್ತು ಹಾಸ್ಟೇಲ್ ವಿದ್ಯಾರ್ಥಿಗಳು ಕ್ಯಾಂಡಲ್ ಮಾರ್ಚನಲ್ಲಿ ಭಾಗಿಯಾಗಿ ಬಸವಕಲ್ಯಾಣ ನಗರದ ಗಾಂಧಿ ಚೌಕದಿಂದ ಅಂಬೇಡ್ಕರ್ ಸರ್ಕಲ್‍ವರೆಗೆ ಸಂಚರಿಸಿ, ಸಾರ್ವಜನಿಕರಲ್ಲಿ ಮತದಾನದ ಅರಿವು ಮೂಡಿಸಿದರು.
ಮತದಾರರು ತಪ್ಪದೇ ಮತ ಚಲಾವಣೆ ಮಾಡಬೇಕು. ಯಾವುದೇ ಆಮೀಷಕ್ಕೆ ಒಳಗಾಗಬಾರದು. ಮತಚಲಾಯಿಸಲು ವಿಕಲಚೇತನರಿಗೆ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಇದೆ ವೇಳೆಯಲ್ಲಿ ತಿಳಿಸಲಾಯಿತು.
ಈ ಸಂದರ್ಭದಲ್ಲಿ ಚುನಾವಣಾಧಿಕಾರಿಗಳಾದ ಭುವನೇಶ ಪಾಟೀಲ್, ಬೀದರ ಸಹಾಯಕ ಆಯುಕ್ತರಾದ ಗರೀಮಾ ಪನ್ವಾರ, ತಹಸೀಲ್ದಾರರಾದ ನಾಗಯ್ಯ ಹಿರೇಮಠ, ರಾಜ್ಯ ಮಟ್ಟದ ಚುನಾವಣಾ ಮಾಸ್ಟರ್ ಟ್ರೇನರ್ ಡಾ.ಗೌತಮ್ ಅರಳಿ, ತಾಲೂಕು ಪಂಚಾಯಿತಿ ಇಓ ಬಿರೇಂದ್ರಸಿಂಗ್, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ವಿಜಯಲಕ್ಷ್ಮೀ, ಸಹಾಯಕ ನಿರ್ದೇಶಕರಾದ ನಿಂಗರಾಜ್ ಅರಸ್, ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.