ಬಸವಕಲ್ಯಾಣ ಉಪ ಚುನಾವಣೆ: ಸಹಕಾರ ಕೋರಿದ ಜಿಲ್ಲಾಧಿಕಾರಿಗಳು

ಬೀದರ:ಎ.3: ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯು ಶಾಂತಿ ಮತ್ತು ಸುವ್ಯವಸ್ಥಿತವಾಗಿ ನಡೆಯಲು ಎಲ್ಲಾ ರೀತಿಯ ಅಗತ್ಯ ಸಹಕಾರ ನೀಡಬೇಕು ಎಂದು ಬೀದರ್ ಜಿಲ್ಲಾಧಿಕಾರಿ ರಾಮಚಂದ್ರನ್.ಆರ್ ಅವರು ತಿಳಿಸಿದರು.

ಬೀದರ್ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಹಾರಾಷ್ಟ್ರದ ಉಸ್ಮಾನಾಬಾದ್, ಲಾತೂರ, ನಾಂದೇಡ ಮತ್ತು ಆಂಧ್ರಪ್ರದೇಶದ ಸಂಗಾರೆಡ್ಡಿ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಇತ್ತೀಚೆಗೆ ವಿಡಿಯೋ ಸಂವಾದ ನಡೆಸಿ ಅವರು ಮಾತನಾಡಿದರು.

ಬಸವಕಲ್ಯಾಣ ಉಪ ಚುನಾವಣೆ ಹಿನ್ನೆಲೆಯಲ್ಲಿ ಗಡಿಭಾಗದಲ್ಲಿ ಚೆಕ್‌ಪೋಸ್ಟ್ ಸ್ಥಾಪಿಸಲಾಗಿದೆ. ಜೊತೆಗೆ ವಿಶೇಷ ತಂಡವನ್ನು ರಚಿಸಿದ್ದು, ವಸ್ತು ಸಾಗಣೆ, ಲೆಕ್ಕ ವಿಲ್ಲದ ಹಣ ಸಾಗಣೆ, ಮದ್ಯ ಸಾಗಣೆ ತಡೆಗೆ ವಿಶೇಷ ನಿಗಾ ವಹಿಸಲು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.ಇದಕ್ಕೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಸ್ಪಂದಿಸಿದ್ದಾರೆ.
ಈಗ ನೀತಿ ಸಂಹಿತೆ ಜಾರಿಯಾಗಿರುವುದರಿಂದ ಆಯುಧಗಳನ್ನು ಕಾನೂನು ಪ್ರಕಾರ ನಿರ್ವಹಣೆ ಮಾಡಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. ಮತದಾನವು ಶಾಂತಿಯುತವಾಗಿ ನಡೆಯಬೇಕು. ಮತದಾನ ಕೇಂದ್ರದ ಸುತ್ತಲೂ ಅಪರಿಚಿತ ವ್ಯಕ್ತಿಗಳು ಸುಳಿಯದಂತೆ ಕಟ್ಟೆಚ್ಚರ ವಹಿಸಬೇಕು ಎಂದರು.

ಮತಕ್ಷೇತ್ರದ ಮತದಾರರನ್ನು ಹೊರತುಪಡಿಸಿ ಮತದಾನ ದಿನದ 72 ಗಂಟೆಗಳ ಮೊದಲು ಅಪರಿಚಿತ ವ್ಯಕ್ತಿಗಳು ಮತಗಟ್ಟೆಗಳಲ್ಲಿ ಸುತ್ತಾಡದಂತೆ ನಿಷೇಧ ಕ್ರಮ ವಹಿಸಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ರುದ್ರೇಶ ಘಾಳಿ, ಪ್ರೊಬೇಷ್ನರಿ ಕೆಎಎಸ್ ಅಧಿಕಾರಿ ವೆಂಕಟಲಕ್ಷ್ಮೀ, ಅಶ್ವಿನ್ ಅವರು ಉಪಸ್ಥಿತರಿದ್ದರು.