ಬಸವಕಲ್ಯಾಣ ಉಪ ಚುನಾವಣೆ: ನಿಷೇಧಾಜ್ಞೆ ಜಾರಿ

ಬೀದರ:ಏ.16: ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮುಕ್ತ, ನ್ಯಾಯಸಮ್ಮತ ಹಾಗೂ ಶಾಂತಿಯುತವಾಗಿ ಮತದಾನ ನಡೆಸಲು ಅನುಕೂಲವಾಗುವಂತೆ ಏಪ್ರಿಲ್ 15ರ ಸಂಜೆ 7 ಗಂಟೆಯಿಂದ 18ರ ಸಂಜೆ 7 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ರಾಮಚಂದ್ರನ್ ಆರ್ ಆದೇಶ ಹೊರಡಿಸಿದ್ದಾರೆ.

ಈ ಅವಧಿಯಲ್ಲಿ ರಾಜಕೀಯ ಸಭೆ-ಸಮಾರಂಭ, ಮೆರವಣಿಗೆ ಹಾಗೂ ಐವರಿಗಿಂತ ಹೆಚ್ಚು ಜನ ಗುಂಪು ಸೇರುವುದು ಮತ್ತು ಸಂಚರಿಸುವುದನ್ನು ನಿಷೇಧಿಸಲಾಗಿದೆ. ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ಪರ ಪ್ರಚಾರಕ್ಕಾಗಿ ಮನೆ ಮನೆಗೆ ತೆರಳಿ ಮತಯಾಚನೆ ಮಾಡಲು ಅವಕಾಶ ಇರಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಮತಗಟ್ಟೆಗಳ ಸುತ್ತಲಿನ 200 ಮೀಟರ್ ವ್ಯಾಪ್ತಿಯ ಸ್ಥಳ ನಿರ್ಬಂಧಿತ ಪ್ರದೇಶವಾಗಿದ್ದು, ಈ ಪ್ರದೇಶದಲ್ಲಿ ಖಾಸಗಿ ವಾಹನಗಳ ನಿಲುಗಡೆ, ಧ್ವನಿ ವರ್ಧಕ ಬಳಕೆ ನಿಷೇಧಿಸಲಾಗಿದೆ.ಮತಗಟ್ಟೆಯ 100 ಮಿಟರ್ ವ್ಯಾಪ್ತಿಯಲ್ಲಿ ಪಕ್ಷದ ಪ್ರಚಾರ, ಮತದಾರರ ಓಲೈಕೆ ಮುಂತಾದವುಗಳನ್ನು ಮಾಡುವಂತಿಲ್ಲ ಎಂದು ಹೇಳಿದ್ದಾರೆ.
ಏಪ್ರಿಲ್ 17ರಂದು ನಡೆಯುವ ಜಾತ್ರೆ ಹಾಗೂ ಸಂತೆಗಳನ್ನು ನಿಷೇಧಿಸಲಾಗಿದೆ. ಈ ಆದೇಶವು ಬ್ಯಾಂಕ್ ಎ.ಟಿ.ಎಂ ಭದ್ರತಾ ಸಿಬ್ಬಂದಿ ಹಾಗೂ ಮತ ಎಣಿಕಾ ಕೇಂದ್ರ ಭದ್ರತಾ ವ್ಯವಸ್ಥೆಗಾಗಿ ನಿಯೋಜಿಸಲ್ಪಟ್ಟ ಭದ್ರತಾ ಅನ್ವಯಿಸುವುದಿಲ್ಲ ಎಂದು ತಿಳಿಸಿದ್ದಾರೆ.