ಬಸವಕಲ್ಯಾಣ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವು: ಸಚಿವ ಪ್ರಭು ಚವ್ಹಾಣ್

ಬೀದರ, ಏ.16: ಬಸವಕಲ್ಯಾಣ ವಿಧಾನಸಭೆ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಶರಣು ಸಲಗರ್ ಅವರು ಐತಿಹಾಸಿಕ ಗೆಲುವು ದಾಖಲಿಸಲಿದ್ದಾರೆ ಎಂದು ಪಶು ಸಂಗೋಪನೆ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಚವ್ಹಾಣ್ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪಕ್ಷದ ವರಿಷ್ಠರು ಉಪ ಚುನಾವಣೆಗೆ ಅಭ್ಯರ್ಥಿಯನ್ನು ಘೋಷಿಸಿದ ತಕ್ಷಣ ಬಸವಕಲ್ಯಾಣಕ್ಕೆ ತೆರಳಿ, ವಾಸ್ತವ್ಯ ಮಾಡಿದ್ದೇನೆ. ನಗರ ಮತ್ತು ಗ್ರಾಮಗಳ ಪ್ರತಿ ಗಲ್ಲಿಗೂ ಭೇಟಿ ನೀಡಿ ಪ್ರಚಾರ ನಡೆಸಿದ್ದೇನೆ. ಅಲ್ಲಿನ ಜನತೆಯ ಅಂತರಂಗವನ್ನು ಅರಿತ್ತಿದ್ದೇನೆ. ಬಸವಕಲ್ಯಾಣದ ತುಂಬೆಲ್ಲಾ ಬಿಜೆಪಿಯ ಅಲೆ ಎದ್ದು ಕಾಣಿಸುತ್ತಿದೆ. ಉಪ ಮುಖ್ಯಮಂತ್ರಿಗಳಾದ ಲಕ್ಷ್ಮಣ ಸವದಿ, ಗೃಹ ಸಚಿವರಾದ ಬಸವರಾಜ ಬೊಮ್ಮಾಯಿ ಹಾಗೂ ವಸತಿ ಸಚಿವರಾದ ವಿ.ಸೋಮಣ್ಣ ಅವರು ಶ್ರಮ ವಹಿಸಿದ್ದಾರೆ. ಮುಖ್ಯಮಂತ್ರಿಗಳು ಭೇಟಿ ನೀಡಿದ್ದಾಗಿನಿಂದ ಪಕ್ಷದ ವರ್ಚಸ್ಸು ಇನ್ನಷ್ಟು ವೃದ್ಧಿಸಿದೆ ಎಂದು ಹೇಳಿದ್ದಾರೆ.

ಬಸವಕಲ್ಯಾಣದಲ್ಲಿ ತಾವು ಭೇಟಿ ನೀಡಿದ ಕಡೆಗಳಲ್ಲಿ ಜನತೆಯಿಂದ ಉತ್ತಮ ಸ್ಪಂದನೆ ಸಿಕ್ಕಿದೆ. ಜನ ಪ್ರೀತಿಯಿಂದ ಸ್ವಾಗತ ಮಾಡಿದ್ದಾರೆ. ಬಿಜೆಪಿ ಅಭ್ಯರ್ಥಿ ಶರಣು ಸಲಗರ್ ಅವರ ಬಗ್ಗೆ ಒಲವು ತೋರಿಸುತ್ತಿದ್ದಾರೆ. ಹಾಗಾಗಿ ಬಸವಕಲ್ಯಾಣ ವಿಧಾನಸಭೆ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ದಾಖಲೆ ಮತಗಳ ಅಂತರದಿಂದ ಜಯ ಗಳಿಸಲಿದ್ದಾರೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.