ಬಸವಕಲ್ಯಾಣ ಉಪ ಚುನಾವಣೆ:ಮತದಾನ ಜಾಗೃತಿಗಾಗಿ ಸೈಕಲ್ ಜಾಥಾ

ಬೀದರ ಏ 6: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಸ್ವೀಪ್ ಸಮಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರೂ ಯುವ ಕೇಂದ್ರ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಅಂಗವಾಗಿ ಮತದಾನ ಕುರಿತು ಜಾಗೃತಿ ಮೂಡಿಸಲು ಸ್ವೀಪ್ ಚಟುವಟಿಕೆ ಕಾರ್ಯಕ್ರಮಗಳಡಿ ವಿಶೇಷ ಸೈಕಲ್ ಜಾಥಾ ಕಾರ್ಯಕ್ರಮವು ಬಸವಕಲ್ಯಾಣ ನಗರದಲ್ಲಿ ನಡೆಯಿತು.
ಸೈಕಲ್ ಜಾಥಾ ಉದ್ಘಾಟನೆ ವೇಳೆಯಲ್ಲಿ ಬಸವಕಲ್ಯಾಣ ನಗರಸಭೆ ಪೌರಾಯುಕ್ತರಾದ ಗೌತಮ ಕಾಂಬಳೆ ಅವರು ಸ್ವಯಂ ಸೈಕಲ್ ಚಾಲನೆ ನಡೆಸಿ ಗಮನ ಸೆಳೆದರು.
ಬಸವಕಲ್ಯಾಣ ತಾಲೂಕು ಪಂಚಾಯತ್‍ನ ಕಾರ್ಯನಿರ್ವಾಹಕ ಅಧಿಕಾರಿಗಳಾದ ಬೀರೇಂದ್ರ ಸಿಂಗ್ ಅವರು ಸೈಕಲ್ ಖಾಥಾಕ್ಕೆ ಹಸಿರು ನಿಶಾನೆ ತೋರಿದರು.
ಸೈಕಲ್ ಜಾಥಾವು ನಗರದ ಬಿ.ಇ.ಓ ಕಚೇರಿಯಿಂದ ಆರಂಭಗೊಂಡು ನಗರದ ಪ್ರಮುಖ ರಸ್ತೆಗಳ ಮೂಲಕ ಖಿಲ್ಲಾವರೆಗೆ ಸಂಚರಿಸಿತು.
ರಾಜ್ಯಮಟ್ಟದ ಚುನಾವಣಾ ಮಾಸ್ಟರ್ ಟ್ರೇನರ್ ಡಾ.ಗೌತಮ್ ಅರಳಿ ಅವರು ಮತದಾನದ ಪ್ರತಿಜ್ಞಾವಿಧಿ ಬೋಧಿಸಿ, ಕಾರ್ಯಕ್ರಮದ ಉದ್ದೇಶವನ್ನು ವಿವರಿಸಿದರು.
ಬಸವಕಲ್ಯಾಣ ವಿಧಾನಸಭಾ ಉಪಚುನಾವಣೆಯಲ್ಲಿ ಶೇಕಡಾವಾರು ಮತದಾನದ ಪ್ರಮಾಣ ಹೆಚ್ಚಾಗಬೇಕು ಎನ್ನುವ ಮಹತ್ವದ ಉದ್ದೇಶದಿಂದ ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವಿಪ್ ಸಮಿತಿಯಿಂದ ಬಸವಕಲ್ಯಾಣ ತಾಲೂಕಿನಾದ್ಯಂತ ಮತದಾನ ಜಾಗೃತಿ ಕಾರ್ಯಕ್ರಮಗಳು ನಿರಂತರ ನಡೆಯುತ್ತಿವೆ ಎಂದು ತಿಳಿಸಿದರು.
ಸೈಕಲ್ ಜಾಥಾದಲ್ಲಿ 100ಕ್ಕಿಂತ ಹೆಚ್ಚು ಸೈಕಲ್ ಪಟುಗಳು ಹಾಗೂ ಇನ್ನೀತರ 30 ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ತಾಲೂಕು ದೈಹಿಕ ಶಿಕ್ಷಣ ಪರೀಕ್ಷಕರಾದ ರವಿದಾಸ ರಾಠೋಡ್ ಹಾಗೂ ಎನ್.ವೈ.ಕೆ ಅಧಿಕಾರಿಗಳು ಸೇರಿದಂತೆ ಇನ್ನಿತರರು ಕಾರ್ಯಕ್ರಮದಲ್ಲಿ ಇದ್ದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಆರ್.ಜಿ.ನಾಡಗೀರ್ ಅವರು ಸ್ವಾಗತಿಸಿದರು. ಅನಂತ ವಿ ಬಂಡಿ ನಿರೂಪಿಸಿದರು.