ಬಸವಕಲ್ಯಾಣ ಉಪಚುನಾವಣೆ : ದಿ.ನಾರಾಯಣರಾವ್ ಪತ್ನಿಗೆ ಟಿಕೆಟ್‌ ನೀಡುವಂತೆ ಕೋಲಿ ಮುಖಂಡರ ಆಗ್ರಹ

ಕಲಬುರಗಿ :ಜ.10: ಬೀದರ್ ಜಿಲ್ಲೆಯ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ ಪಕ್ಷದಲ್ಲಿ ಆಕಾಂಕ್ಷಿಗಳು ಲಾಬಿ ಆರಂಭಿಸಿದ್ದಾರೆ. ಘೋಷಣೆಗೂ ಮುನ್ನವೇ ಟಿಕೆಟ್ ಫೈಟ್ ಜೋರಾಗಿದೆ.
ಕಾಂಗ್ರೆಸ್ ಶಾಸಕರಾಗಿದ್ದ ಬಿ. ನಾರಾಯಣರಾವ್ ಅವರ ಅಕಾಲಿಕ ನಿಧನ ನಂತರ, ಉಪಚುನಾವಣೆ ಮೇಲೆ ಟಿಕೆಟ್ ಆಕಾಂಕ್ಷಿಗಳು ಕಣ್ಣಿಟ್ಟಿದ್ದಾರೆ. ಮಾಜಿ ಸಿಎಂ ದಿ. ಧರಂಸಿಂಗ್ ಪುತ್ರ ವಿಜಯಸಿಂಗ್ ಹೆಸರು ಆಕಾಂಕ್ಷಿಗಳ ಪಟ್ಟಿಯಲ್ಲಿ ಮುನ್ನಲೆಗೆ ಬಂದಿದೆ.

ಕೋಲಿ ಸಮಾಜದ ಮುಖಂಡರೂ ಸಹ ತಮ್ಮ ಸಮುದಾಯಕ್ಕೆ ಟಿಕೆಟ್‌ ನೀಡುವಂತೆ ಒತ್ತಾಯಿಸುತ್ತಿದ್ದಾರೆ. ಅದರಲ್ಲಿಯೂ ದಿವಂಗತ ಬಿ. ನಾರಾಯಣ ಅವರ ಪತ್ನಿ ಮಲ್ಲಮ್ಮ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡುವಂತೆ ಕೋಲಿ ಕಬ್ಬಲಿಗ ಸಮಾಜದ ಮುಖಂಡರು ಕೈ ನಾಯಕರಿಗೆ ಆಗ್ರಹಿಸಿದ್ದಾರೆ.

ಜೀವನದುದ್ದಕ್ಕೂ ಕಾಂಗ್ರೆಸ್ ತತ್ವ, ಸಿದ್ಧಾಂತಕ್ಕೆ ಬದ್ಧವಾಗಿ ದಿವಂಗತ ಬಿ.ನಾರಾಯಣರಾವ್ ಅವರು ದುಡಿದಿದ್ದಾರೆ. ಹೀಗಾಗಿ, ಅವರ ಕುಟುಂಬಸ್ಥರಿಗೆ ಕಾಂಗ್ರೆಸ್ ಟಿಕೆಟ್ ನೀಡಬೇಕು‌. ಒಂದು ವೇಳೆ ಬಿ. ನಾರಾಯಣರಾವ್ ಅವರ ಕುಟುಂಬಕ್ಕೆ ಟಿಕೆಟ್ ಕೈ ತಪ್ಪಿದ್ರೆ, ಕಲ್ಯಾಣ ಕರ್ನಾಟಕ ಸೇರಿ ರಾಜ್ಯದಲ್ಲಿ ಕೋಲಿ ಕಬ್ಬಲಿಗ ಸಮಾಜದ ಪ್ರತಿರೋಧವನ್ನು ಕಾಂಗ್ರೆಸ್ ಪಕ್ಷ ಎದುರಿಸಬೇಕಾಗುತ್ತದೆ ಎಂದು ಸಮುದಾಯದ ನಾಯಕರು ಎಚ್ಚರಿಸಿದ್ದಾರೆ.

ಕೈ ಹಿರಿಯ ನಾಯಕರ ಬಳಿ ತೆರಳಲಿರುವ ಮುಖಂಡರು : ದಿ. ನಾರಾಯಣರಾವ್ ಅವರ ಪತ್ನಿ ಮಲ್ಲಮ ಅವರಿಗೆ ಬಸವಕಲ್ಯಾಣ ಉಪಚುನಾವಣೆಯಲ್ಲಿ ಟಿಕೆಟ್ ನೀಡುವಂತೆ ಬೆಂಗಳೂರಿಗೆ ಕೋಲಿ ಸಮಾಜದ ಮುಖಂಡರ ನಿಯೋಗ ತೆರಳಲಿರುವುದಾಗಿ ಮುಖಂಡ ಶಿವಶರಣಪ್ಪ ಖೋಬಾಳ ತಿಳಿಸಿದ್ದಾರೆ.