
ಬಸವಕಲ್ಯಾಣ: ಮಾ.10:ಮಾರ್ಚ್ 11 ಮತ್ತು 12 ರಂದು ನಡೆಯುವ ಬಸವ ಉತ್ಸವದ ಅಂಗವಾಗಿ ನಗರದಲ್ಲಿ ಗುರುವಾರ ನಡೆದ ಅಕ್ಕನ ಉತ್ಸವ ಸಂಭ್ರಮದಿಂದ ನೆರವೇರಿತು.
ಬಸವೇಶ್ವರ ದೇವಸ್ಥಾನದಿಂದ ಬಸವೇಶ್ವರ ವೃತ್ತದವರೆಗೆ ಮೆರವಣಿಗೆ ನಡೆಸಿ ಅನುಭವ ಮಂಟಪದ ಸ್ತಬ್ಧ ಚಿತ್ರವನ್ನು ಕೊಂಡೊಯ್ಯಲಾಯಿತು.
ಲಂಬಾಣಿ ಕುಣಿತ, ಡೊಳ್ಳು ಕುಣಿತ, ಕೋಲಾಟ, ಬ್ಯಾಂಡಬಾಜಾ ಹಾಗೂ ಇತರೆ ವಾದ್ಯ ಮೇಳದವರು ಪಾಲ್ಗೊಂಡಿದ್ದರು. ಮಹಿಳೆಯರು ವಾದ್ಯಗಳ ತಾಳಕ್ಕೆ ಕುಣಿದರು. ಫುಗಡಿ ಆಡಿ ಹಿರಿ ಹಿರಿ ಹಿಗ್ಗಿದರು. ಜಯಘೋಷ ಕೂಗಿದರು.
ಮೆರವಣಿಗೆ ವೇದಿಕೆಗೆ ಬಂದಾಗ ಮಹಿಳೆಯರ ವಿವಿಧ ಚಟುವಟಿಕೆಗಳಿಗೆ ಚಾಲನೆ ನೀಡಲಾಯಿತು. ಜಿಲ್ಲಾ ಪಂಚಾಯಿತಿ ಸಿಇಒ ಶಿಲ್ಪಾ ಎಂ. ದೀಪ ಬೆಳಗಿಸಿದರು. ನಗರಸಭೆ ಅಧ್ಯಕ್ಷೆ ಶಹಾಜಹಾನಾ ತನ್ವೀರ್, ಅಕ್ಕ ಅನ್ನಪೂರ್ಣ, ಅಕ್ಕ ಗಂಗಾಂಬಿಕಾ, ತಹಶೀಲ್ದಾರ್ ಪಲ್ಲವಿ ಬೆಳಕಿರೆ, ಸಾವಿತ್ರಿ ಸಲಗರ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಲತಾ ಹಾರಕೂಡೆ, ನಗರಸಭೆ ಸದಸ್ಯೆ ನಿರ್ಮಲಾ ಶಿವಣಕರ, ಡಾ.ಅಪರ್ಣಾ ಮಹಾನಂದ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಯಶೋದಾ ರಾಠೋಡ, ಸುಮಿತ್ರಾ ದಾವಣಗಾವೆ, ಶ್ರೀದೇವಿ ಕಾಕನಾಳೆ, ಶಿವಲೀಲಾ ಮಠಪತಿ, ಸೋನಾಲಿಕಾ ಹಡಪದ ಮತ್ತಿತರರು ಪಾಲ್ಗೊಂಡಿದ್ದರು.
ನಂತರ ಇಡೀದಿನ ವಚನ ಗಾಯನ, ಜಾನಪದ ಗೀತ ಗಾಯನ, ಕೋಲಾಟ, ರಂಗೋಲಿ, ವಚನ ನೃತ್ಯ, ಶರಣೆಯರ ರೂಪಕ ಪ್ರದರ್ಶನ ಮತ್ತಿತರೆ ಚಟುವಟಿಕೆಗಳು ನಡೆದವು.