ಬಸವಕಲ್ಯಾಣದಲ್ಲಿ 15 ದಿನ ವಾಸ್ತವ್ಯ, ಪ್ರತಿ ಹಳ್ಳಿಗೂ ಭೇಟಿ : ಎಚ್ಡಿಕೆ

ಬಸವ ಕಲ್ಯಾಣ:ಮಾ.26: ಬಸವ ಕಲ್ಯಾಣ ವಿಧಾನಸಭಾ ಕ್ಷೇತ್ರದಲ್ಲಿ 15 ದಿನಗಳ ಕಾಲ ವಾಸ್ತವ್ಯ ಹೂಡಿ ಪ್ರತಿ ಹಳ್ಳಿಗೂ ಭೇಟಿ ನೀಡಿ ಜೆಡಿಎಸ್ ಅಭ್ಯರ್ಥಿಗಳ ಪರ ಮತಯಾಚನೆ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಜೆಡಿಎಸ್ ಅಭ್ಯರ್ಥಿ ಯಾಗಿರುವ ಸೈಯದ್ ಯಸರಬ್ ಆಲಿ ಖಾದ್ರಿ ಅವರು ನಾಮಪತ್ರ ಸಲ್ಲಿಸಿದ ನಂತರ ಕುಮಾರಸ್ವಾಮಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಕ್ಷೇತ್ರದ ಎಲ್ಲಾ ಸಮುದಾಯಗಳ ಆಶೀರ್ವಾದ ಪಡೆಯಲು ಪ್ರಯತ್ನಿಸಲಾಗುವುದು. ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್‍ನ ರೈತ ವಿರೋಧಿ ನಿಲುವುಗಳ ವಿರುದ್ಧ ಹೋರಾಟ ಮಾಡ ಲಾಗುವುದು, ಬಿಜೆಪಿ ನೀಡುವ ಭರವಸೆಗಳಿಗೆ ಯಾರು ಮರುಳಾಗಬಾರದು. ಅಭಿವೃದ್ಧಿ ಹಾಗೂ ದತ್ತು ತೆಗೆದುಕೊ ಳ್ಳುವುದಾಗಿ ಮತ ಕೇಳುತ್ತಾರೆ. ಚುನಾವಣೆ ನಂತರ ಮರೆಯುತ್ತಾರೆ. ಹಿಂದೆ ಉಪಚುನಾವಣೆ ಸಂದರ್ಭದಲ್ಲಿ ಕೊಟ್ಟ ಮಾತನ್ನು ಕಡೆಗಣಿಸಿದ್ದಾರೆ. ಉದಾಹರಣೆಗೆ ಶಿರಾ ಕ್ಷೇತ್ರದ ಮದಗ ಕೆರೆಗೆ ನೀರು ತುಂಬಿಸುವ ಭರವಸೆ ನೀಡಿದ್ದರು. ನಂತರ ಕೆರೆ ಬತ್ತಿ ಹೋಗಿದ್ದರೂ ನೀರು ತುಂಬಿಸಲಿಲ್ಲ ಎಂದು ದೂರಿದರು. ಎರಡು ರಾಷ್ಟ್ರೀಯ ಪಕ್ಷಗಳಿಗೆ ಜನ ಪಾಠ ಕಲಿಸಲಿದ್ದಾರೆ. ಸಿಡಿ ವಿಚಾರವನ್ನು ಕಾಂಗ್ರೆಸ್-ಬಿಜೆಪಿ ವಿವೇಚನೆಗೆ ಬಿಡಲಾಗಿದೆ. ನಾಡಿನ ಜನರ ಸಂಕಷ್ಟದ ಬಗ್ಗೆ ನಾವು ಗಮನ ಹರಿಸುತ್ತೇವೆ ಎಂದು ಕುಮಾರಸ್ವಾಮಿ ತಿಳಿಸಿದರು.