ಬಸವಕಲ್ಯಾಣದಲ್ಲಿ ಮೂರು ದಿನ ವಿವಿಧ ಕಾರ್ಯಕ್ರಮ ಕಲ್ಯಾಣ ಪರ್ವ: 1 ಲಕ್ಷ ಜನ ಪಾಲ್ಗೊಳ್ಳುವ ನಿರೀಕ್ಷೆ

ಬೀದರ್:ಅ.27: ಬಸವ ಧರ್ಮ ಪೀಠದ ವತಿಯಿಂದ ಬಸವಕಲ್ಯಾಣದ ಬಸವ ಮಹಾಮನೆ ಆವರಣದಲ್ಲಿ ಅ. 28 ರಿಂದ 30 ರ ವರೆಗೆ 22ನೇ ಕಲ್ಯಾಣ ಪರ್ವ ಹಮ್ಮಿಕೊಳ್ಳಲಾಗಿದೆ ಎಂದು ಕಲ್ಯಾಣ ಪರ್ವ ಉತ್ಸವ ಸಮಿತಿಯ ಅಧ್ಯಕ್ಷ ಸಂಜೀವಕುಮಾರ ಪಾಟೀಲ ಕೌಡಗಾಂವ್ ಹೇಳಿದರು.
ಬಸವ ಧರ್ಮ ಪೀಠಾಧ್ಯಕ್ಷೆ ಮಾತೆ ಡಾ. ಗಂಗಾದೇವಿ ಅವರ ಸಾನಿಧ್ಯದಲ್ಲಿ ಮೂರು ದಿನ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ ವಿವಿಧೆಡೆಯ ಒಂದು ಲಕ್ಷ ಬಸವ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ನಗರದ ಪತ್ರಿಕಾ ಭವನದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
28 ರಂದು ಬೆಳಿಗ್ಗೆ 6ಕ್ಕೆ ಸಾಮೂಹಿಕ ಇಷ್ಟಲಿಂಗಾರ್ಚನೆ, ಬೆಳಿಗ್ಗೆ 10.30ಕ್ಕೆ ಉದ್ಘಾಟನಾ ಸಮಾರಂಭ, ಸಂಜೆ 4ಕ್ಕೆ ಪ್ರಥಮ ಧರ್ಮ ಚಿಂತನ ಗೋಷ್ಠಿ, ರಾತ್ರಿ 8ಕ್ಕೆ ವಚನ ನೃತ್ಯ, ರೂಪಕ ನಡೆಯಲಿದೆ ಎಂದು ಹೇಳಿದರು.
29 ರಂದು ಬೆಳಿಗ್ಗೆ 7.30ಕ್ಕೆ ಶರಣರಿಗೆ ವಂದನೆ, ಶರಣು ಶರಣಾರ್ಥಿ ಕಾರ್ಯಕ್ರಮ, ಬೆಳಿಗ್ಗೆ 10ಕ್ಕೆ ದ್ವಿತೀಯ ಧರ್ಮ ಚಿಂತನ ಗೋಷ್ಠಿ, ಪ್ರಶಸ್ತಿ ಪ್ರದಾನ, ಮಧ್ಯಾಹ್ನ 3.30ಕ್ಕೆ ಮಹಿಳಾ ಗೋಷ್ಠಿ, ಸಂಜೆ 7ಕ್ಕೆ ಪ್ರಥಮ ಶೂನ್ಯ ಪೀಠಾರೋಹಣದ 838ನೇ ಸಂಸ್ಮರಣೆ ಮತ್ತು ದ್ವಿತೀಯ ಶೂನ್ಯ ಪೀಠಾರೋಹಣದ 21ನೇ ವಾರ್ಷಿಕೋತ್ಸವ, ಸಂಜೆ 7.30ಕ್ಕೆ ಅಕ್ಕ ನಾಗಲಾಂಬಿಕಾ ಸಂಸ್ಮರಣೆ ನಿಮಿತ್ತ ಬಸವ ಧರ್ಮದ ವಿಜಯೋತ್ಸವ ಹಾಗೂ ಪೀಠಾರೋಹಣ ಸಮಾರಂಭ ಜರುಗಲಿದೆ ಎಂದು ತಿಳಿಸಿದರು.
30 ರಂದು ಬೆಳಿಗ್ಗೆ 9ಕ್ಕೆ ಬಸವಕಲ್ಯಾಣದ ಕೋಟೆ ಆವರಣದಿಂದ ಬಸವ ಮಹಾಮನೆ ವರೆಗೆ ಬಸವಣ್ಣನವರ ಭಾವಚಿತ್ರ ಹಾಗೂ ಆನೆ ಮೇಲೆ ಹೂವಿನಿಂದ ಅಲಂಕೃತ ಅಂಬಾರಿಯಲ್ಲಿ ವಚನ ಸಾಹಿತ್ಯದ ಭವ್ಯ ಮೆರವಣಿಗೆ ನಡೆಯಲಿದೆ. ಶರಣರ ವೇಷಧಾರಿಗಳು, ಕುದುರೆ, ಒಂಟೆ, ಛತ್ರಿ, ಚಾಮರ, ಕೋಲಾಟ, ಝಾಂಜ್ ಮೇಳ, ಡೊಳ್ಳು ಕುಣಿತ, ವಚನ ಭಜನೆ ಮೊದಲಾದ ಕಲಾ ತಂಡಗಳು ಮೆರವಣಿಗೆಯ ವೈಭವ ಹೆಚ್ಚಿಸಲಿವೆ. ಮಧ್ಯಾಹ್ನ 1ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಅಕ್ಟೋಬರ್ 28 ರಂದು ಬೆಳಿಗ್ಗೆ 10.30ಕ್ಕೆ ನಡೆಯುವ ಸಮಾರಂಭದಲ್ಲಿ ಬಸವ ಜ್ಯೋತಿ ಬೆಳಗಿಸಿ ಕಲ್ಯಾಣ ಪರ್ವಕ್ಕೆ ಚಾಲನೆ ನೀಡುವರು. ಬಸವಕಲ್ಯಾಣ ಶಾಸಕ ಶರಣು ಸಲಗರ ಬಸವ ಪೂಜೆ ನೆರವೇರಿಸುವರು. ಮಾತೆ ಡಾ. ಗಂಗಾದೇವಿ, ಅನುಭವ ಮಂಟಪದ ಅಧ್ಯಕ್ಷ ಡಾ. ಬಸವಲಿಂಗ ಪಟ್ಟದ್ದೇವರು, ಡಾ. ಗುರುಬಸವ ಸ್ವಾಮೀಜಿ, ಗುರುಬಸವ ಪಟ್ಟದ್ದೇವರು, ಶಿವಾನಂದ ಸ್ವಾಮೀಜಿ ಸಾನಿಧ್ಯ ವಹಿಸುವರು. ಜಗದ್ಗುರು ಬಸವಕುಮಾರ ಸ್ವಾಮೀಜಿ ಪ್ರಾರ್ಥನೆ ನಡೆಸಿಕೊಡುವರು ಎಂದು ತಿಳಿಸಿದರು.
ಬಸವೇಶ್ವರ ದೇವಸ್ಥಾನ ಪಂಚಕಮಿಟಿ ಅಧ್ಯಕ್ಷ ಬಸವರಾಜ ಕೊರಕೆ ಧ್ವಜಾರೋಹಣ ಮಾಡುವರು. ರಾಷ್ಟ್ರೀಯ ಬಸವ ದಳದ ಜಿಲ್ಲಾ ಘಟಕದ ಅಧ್ಯಕ್ಷ ಸೋಮಶೇಖರ ಪಾಟೀಲ ಗಾದಗಿ ಸಮ್ಮುಖ ವಹಿಸುವರು. ಸಂಜೀವಕುಮಾರ ಪಾಟೀಲ ಕೌಡಗಾಂವ್ ಅಧ್ಯಕ್ಷತೆ ವಹಿಸುವರು. ಪೌರಾಡಳಿತ ಸಚಿವ ರಹೀಂಖಾನ್, ಜನಪ್ರತಿನಿಧಿಗಳು, ಮಠಾಧೀಶರು, ಸಾಹಿತಿಗಳು ಹಾಗೂ ಗಣ್ಯರು ಪಾಲ್ಗೊಳ್ಳುವರು ಎಂದು ಹೇಳಿದರು.
ಮಾತೆ ವಿಜಯಾಂಬಿಕಾ, ರಾಷ್ಟ್ರೀಯ ಬಸವ ದಳದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರಕುಮಾರ ಗಂದಗೆ, ಜಿಲ್ಲಾ ಘಟಕದ ಅಧ್ಯಕ್ಷ ಸೋಮಶೇಖರ ಪಾಟೀಲ ಗಾದಗಿ, ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಕಂಟೆಪ್ಪ ಗಂದಿಗುಡಿ, ಮೆರವಣಿಗೆ ಸಮಿತಿ ಅಧ್ಯಕ್ಷ ಸಿದ್ದು ಶೆಟಕಾರ್, ಜಿಲ್ಲಾ ಲಿಂಗಾಯತ ಸಮಾಜದ ಅಧ್ಯಕ್ಷ ಕುಶಾಲರಾವ್ ಪಾಟೀಲ ಖಾಜಾಪುರ, ಬಸವ ದಳದ ರಾಜ್ಯ ಸಂಘಟನಾ ಕಾರ್ಯದರ್ಶಿ ರವಿ ಪಾಪಡೆ, ಬೀದರ್ ದಕ್ಷಿಣ ಉಸ್ತುವಾರಿ ಮಹಾಲಿಂಗ ಸ್ವಾಮಿ ಚಟ್ನಳ್ಳಿ, ಜಿಲ್ಲಾ ಯುವ ಘಟಕದ ಜಿಲ್ಲಾ ಅಧ್ಯಕ್ಷ ಗಣೇಶ ಬಿರಾದಾರ ಮೊದಲಾದವರು ಇದ್ದರು.


ಸಿದ್ಧತೆ ಬಹುತೇಕ ಪೂರ್ಣ
ಅದ್ದೂರಿ ಕಲ್ಯಾಣ ಪರ್ವಕ್ಕೆ ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿವೆ ಎಂದು ಸಂಜೀವಕುಮಾರ ಪಾಟೀಲ ಕೌಡಗಾಂವ್ ತಿಳಿಸಿದರು.
ಈಗಾಗಲೇ ಮಹಾ ಮಂಟಪ, ವೇದಿಕೆ ನಿರ್ಮಾಣ, ಭಕ್ತರ ವಸತಿ, ಆಹಾರ, ಕುಡಿಯುವ ನೀರು ಮೊದಲಾದ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.
ವಿವಿಧೆಡೆಯಿಂದ ಬರುವ ಬಸವ ಭಕ್ತರಿಗೆ ಬಸವ ಮಹಾಮನೆ, ಬಸವಕಲ್ಯಾಣ ಅಭಿವೃದ್ಧಿ ಪ್ರಾಧಿಕಾರ ಹಾಗೂ ವಿಶ್ವ ಬಸವ ಧರ್ಮ ಟ್ರಸ್ಟ್ ವಸತಿ ಗೃಹಗಳಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಮೂರೂ ದಿನ ಬೆಳಿಗ್ಗೆ ಉಪಹಾರ, ಚಹಾ, ಮಧ್ಯಾಹ್ನ ಹಾಗೂ ಸಂಜೆ ಊಟದ ವ್ಯವಸ್ಥೆ ಇರಲಿದೆ ಎಂದು ಹೇಳಿದರು.