ಬಸವಕಲ್ಯಾಣದಲ್ಲಿ ಮಾ. 4ರಂದು ಲಿಂಗಾಯತ ಮಹಾ ಅಧಿವೇಶನ

ಕಲಬುರಗಿ :ಮಾ.01: ನೆರೆಯ ಬೀದರ್ ಜಿಲ್ಲೆಯ ಬಸವಕಲ್ಯಾಣದ ಥೇರ್ ಮೈದಾನದಲ್ಲಿ ಮಾರ್ಚ್ 4ರಿಂದ ಮೊದಲ ರಾಷ್ಟ್ರೀಯ ಲಿಂಗಾಯತ ಅಧಿವೇಶನವನ್ನು ಆಯೋಜಿಸಲಾಗಿದೆ. ಕಾರ್ಯಕ್ರಮದ ಸಿದ್ಧತೆಗಳು ಭರದಿಂದ ಸಾಗಿವೆ ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಅಧ್ಯಕ್ಷ ಡಾ. ಶಿವಾನಂದ್ ಜಾಮದಾರ್ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾರ್ಚ್ 4ರಂದು ಬೆಳಿಗ್ಗೆ 11 ಗಂಟೆಗೆ ಉದ್ಘಾಟನೆ ಜರುಗಲಿದೆ. ಕರ್ನಾಟಕ ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ಅವರು ಉದ್ಘಾಟಿಸುವರು. ಸಾಹಿತಿ ಗೋ.ರು. ಚನ್ನಬಸಪ್ಪ ಅವರು ಅಧ್ಯಕ್ಷತೆ ವಹಿಸುವರು. ಬಸವ ಸಮಿತಿ ಅಧ್ಯಕ್ಷ ಅರವಿಂದ್ ಜತ್ತಿ ಸೇರಿ ಸುಮಾರು 40 ಮಠಾಧೀಶರು ಭಾಗವಹಿಸುವರು ಎಂದರು.
ವೀರಣ್ಣ ರಾಜೂರು ಮತ್ತು ಮುಕ್ತಾ ಕಾಗಲ್ ಅವರು ಸಂಪಾದಿಸಿರುವ ಜಗದಗಲ ಸ್ಮರಣಿಕೆಯನ್ನು ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಗುವುದು. ಲಿಂಗಾಯತ ಸಮುದಾಯದ ವಿವಿಧ ಉಪ ಪಂಗಡಗಳನ್ನು ಒಗ್ಗೂಡಿಸುವ ಕುರಿತು ಮೊದಲ ಅಧಿವೇಶನ ಜರುಗಲಿದೆ ಎಂದು ಅವರು ಹೇಳಿದರು.
ಎರಡನೇ ಅಧಿವೇಶನದಲ್ಲಿ ಸಂಜೆ 4-45ಕ್ಕೆ ಮೀಸಲಾತಿ ಮತ್ತು ಲಿಂಗಾಯತರು, ಲಿಂಗಾಯತರ ಸ್ವತಂತ್ರ ಧರ್ಮ ಹೋರಾಟ ಮತ್ತು ಜನಗಣತಿ ಮತ್ತು ಲಿಂಗಾಯತರು ಕುರಿತು ಉಪನ್ಯಾಸ ಜರುಗಲಿದೆ. ಈ ವಿಷಯಗಳ ಕುರಿತು ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ್, ಕೆಂಪೇಗೌಡ, ಹಿರಿಯ ನ್ಯಾಯವಾದಿ ಸಿ.ಎಸ್. ದ್ವಾರಕನಾಥ್, ಬಸವರಾಜ್ ರೊಟ್ಟಿ ಅವರು ವಿಚಾರ ಮಂಡಿಸುವರು. ಅನುಭವ ಮಂಟಪ ಅನುಷ್ಠಾನ ಸಮಿತಿ ಅಧ್ಯಕ್ಷ ಬಸವರಾಜ್ ಪಾಟೀಲ್ ಸೇಡಂ ಅವರು ನೂತನ ಅನುಭವ ಮಂಟಪದ ಪ್ರತಿಕೃತಿ ನಿರ್ಮಿಸಿ ಮಾತನಾಡುವರು ಎಂದು ಅವರು ತಿಳಿಸಿದರು.
ಮಾರ್ಚ್ 5ರಂದು ಎರಡು ಅಧಿವೇಶನಗಳು ನಡೆಯಲಿವೆ. ಅಂದು ಮಧ್ಯಾಹ್ನ 3 ಗಂಟೆಗೆ ಸಮಾರೋಪ ಸಮಾರಂಭ ಜರುಗಲಿದೆ. ಗದಗಿನ ತೋಂಟದ ಸಿದ್ಧರಾಮ್ ಮಹಾಸ್ವಾಮೀಜಿ ಸಮಾರೋಪ ಭಾಷಣ ಮಾಡುವರು ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಪ್ರಭುಲಿಂಗ್ ಮಹಾಗಾಂವಕರ್, ಆರ್.ಜಿ. ಶೆಟಗಾರ್, ರವೀಂದ್ರ ಶಾಬಾದಿ, ಜಿ.ಬಿ. ಪಾಟೀಲ್, ಬಸವರಾಜ್ ರೊಟ್ಟಿ, ಮಹಾದೇವಪ್ಪ ಮುಂತಾದವರು ಉಪಸ್ಥಿತರಿದ್ದರು.