ಬಸವಕಲ್ಯಾಣದಲ್ಲಿ ನೂತನ ಅನುಭವ ಮಂಟಪದ:ಕಾರ್ಯ ಭರದಿಂದ ಸಾಗಿದೆ:ಜಿಲ್ಲಾಧಿಕಾರಿ ಗೋವಿಂದರೆಡ್ಡಿ

ಬೀದರ, ಜೂ.21: ಬಸವಕಲ್ಯಾಣದಲ್ಲಿ ನಡೆಯುತ್ತಿರುವ ನೂತನ ಅನುಭವ ಮಂಟಪದ ಕಾರ್ಯ ಭರದಿಂದ ಸಾಗಿದ್ದು ಈಗಾಗಲೇ ಇದರ ಶೇ. 35 ಪ್ರತಿಶತ ಕೆಲಸ ಆಗಿದೆ ಎಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಹೇಳಿದರು.
ಅವರು ಸೋಮವಾರ ಬಸವಕಲ್ಯಾಣದಲ್ಲಿ ನಡೆಯುತ್ತಿರುವ ನೂತನ ಅನುಭವ ಮಂಟಪದ ಸ್ಥಳಕ್ಕೆ ಖುದ್ದಾಗಿ ಭೇಟಿ ನೀಡಿ ಅಲ್ಲಿ ನಡೆಯುತ್ತಿರುವ ಕೆಲಸ ಮತ್ತು ಕಾರ್ಯಗಳನ್ನು ಪರಿಶೀಲನೆ ನಂತರ ಮಾಹಿತಿ ನೀಡಿದರು.
ಅನುಭವ ಮಂಟಪ ಜಿ-3 ಕಟ್ಟಡ ಇದ್ದು ಈಗಾಗಲೇ ಜಿ-2 ಕಟ್ಟಡದ ಕೆಲಸ ಮುಗಿದಿದ್ದು 3 ನೇ ಅಂತಸ್ಥಿನ ಮೇಲ್ಚಾವಣೆ ಇನ್ನು 1 ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಮತ್ತು 3 ನೇ ಅಂತಸ್ಥಿನ ಮೇಲ್ಚಾವಣಿ ಮಧ್ಯಭಾಗದಲ್ಲಿ ನೂರು ಅಡಿ ಎತ್ತರ ಮತ್ತು ಅಗಲ ಅತಿ ಎತ್ತರದ ಗೋಪುರ ಕೆಲಸ ಆರಂಭಗೊಳ್ಳಲಿದೆ ಎಂದರು.
ಈ ಕಟ್ಟಡಕ್ಕೆ ಬೇಕಾಗುವ ಜೆಲ್ಲಿ, ಉಸುಕು, ಸಿಮೆಂಟ್, ಕಬ್ಬಿಣ ಮುಂದಿನ ಮೂರು ತಿಂಗಳ ಕಾಮಗಾರಿಗೆ ಬೇಕಾಗುವಷ್ಟು ಸ್ಥಳದಲ್ಲಿ ಸ್ಟಾಕ್ ಇದೆ. 770 ಅಮರಂಗಣಗಳ ಕಲ್ಲಿನ ಕಂಬಗಳು ನಿಲ್ಲಿಸುವ ಕಾರ್ಯ ನಡೆಯುತ್ತಿದ್ದು ಈಗಾಗಲೇ 300 ಕಂಬಗಳು ಸ್ಥಳದಲಿದ್ದು ಅವುಗಳ ಮೇಲೆ ವಚನಗಳನ್ನು ಕೆತ್ತುವ ಕೆಲಸ ನಡೆಯುತ್ತಿದ್ದು ಮುಂದಿನ 3-4 ತಿಂಗಳಲ್ಲಿ ಈ ಕೆಲಸ ಪೂರ್ಣಗೊಳ್ಳಲಿದೆ ಎಂದು ಹೇಳಿದರು.
ಅನುಭವ ಮಂಟಪದ ಒಟ್ಟು 610 ಕೋಟಿಯಲ್ಲಿ ಈಗಾಗಲೇ ಶೇ. 35 ಪ್ರತಿಶತ ಕೆಲಸ ಮುಗಿದಿದ್ದು ಇನ್ನುಳಿದ ಕೆಲಸ ಕಾರ್ಯಗಳು ನಡೆಯುತ್ತಿವೆ ಸಂಬಂಧಿಸಿದ ಅಧಿಕಾರಿಗಳಿಗೆ ಇದರ ಕೆಲಸ ಕಾರ್ಯಗಳನ್ನು ಅಚ್ಚುಕಟ್ಟಾಗಿ ಕಾಲ ಮಿತಿಯಲ್ಲಿ ನಡೆಸುವಂತೆ ನಿರ್ದೇಶನ ೀಡಿದ್ದೆನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರಧಾನ ವ್ಯವಸ್ಥಾಪಕರಾದ ಸಾಂಗ್ಲಿ, ಬಸವಕಲ್ಯಾಣ ಸಹಾಯಕ ಆಯುಕ್ತರಾದ ರಮೇಶ ಕೋಲಾರ, ಬಸವಕಲ್ಯಾಣ ತಹಶೀಲ್ದಾರ ಶಾಂತಗೌಡ ಹಾಗೂ ಬಿ.ಕೆ.ಡಿ.ಬಿ ಅಧಿಕಾರಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.