ಬಸದಿಯಲ್ಲಿ ಮಂಡಲ ಪೂಜೆ , ವಿಶೇಷ ಆರಾಧನೆ

ಉಜಿರೆ, ಎ.೬- ಅಳದಂಗಡಿಯಲ್ಲಿರುವ ಬೆಟ್ಟದ ಬಸದಿ ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿ ಪಂಚಕಲ್ಯಾಣ ಮಹೋತ್ಸವ ಮತ್ತು ನೂತನ ಬಿಂಬ ಪ್ರತಿಷ್ಠೆ ಇತ್ತೀಚೆಗೆ ನಡೆದಿದ್ದು ಅದರ ಪ್ರಯುಕ್ತ ಸೋಮವಾರ ಬಸದಿಯಲ್ಲಿ ಮಂಡಲ ಪೂಜೆ ಮತ್ತು ವಿಶೇಷ ಆರಾಧನೆ ನಡೆಯಿತು. ತೋರಣ ಮುಹೂರ್ತ, ವಿಮಾನ ಶುದ್ಧಿ ಬಳಿಕ ಕಲ್ಯಾಣ ಮಂದಿರ ಆರಾಧನೆ, ಬ್ರಹ್ಮಯಕ್ಷ ಆರಾಧನೆ, ಕ್ಷೇತ್ರಪಾಲ ಮತ್ತು ನಾಗದೇವರಿಗೆ ನವಕಲಶ ಅಭಿಷೇಕ ನಡೆಯಿತು. ಅಪರಾಹ್ನ ಪದ್ಮಾವತಿ ದೇವಿ ಆರಾಧನೆ, ಭಗವಾನ್ ಪಾರ್ಶ್ವನಾಥ ಸ್ವಾಮಿಗೆ ೨೪ ಕಲಶ ಅಭಿಷೇಕ ಮತ್ತು ಮಹಾಪೂಜೆ ನಡೆಯಿತು.
ಬೆಟ್ಟದ ಬಸದಿ ಸಮಿತಿಯ ಗೌರವಾಧ್ಯಕ್ಷ ಚಂದ್ರರಾಜ ಪೂವಣಿ ಪೆರಂದ ಬೈಲು, ಅಧ್ಯಕ್ಷ ಸುಕೇಶ್ ಜೈನ್ ಕಾರ್ಯದರ್ಶಿ ಶೀತಲ್ ಜೈನ್ ಉಪಸ್ಥಿತರಿದ್ದರು. ಬೆಳ್ತಂಗಡಿ ಬಸದಿಯ ಪ್ರಧಾನ ಅರ್ಚಕರಾದ ಜಯರಾಜ ಇಂದ್ರ, ಅಜಿತ್ ಕುಮಾರ ಇಂದ್ರ, ಪುಷ್ಪರಾಜ ಇಂದ್ರ, ಹರ್ಷಿತ್ ಇಂದ್ರ, ಧರಣೇಂದ್ರ ಇಂದ್ರ, ಯುವರಾಜ ಇಂದ್ರ ಮತ್ತು ವಿಜಯ ಇಂದ್ರ ವಿವಿಧ ಪೂಜೆ ಮತ್ತು ಆರಾಧನಾ ವಿಧಿ-ವಿಧಾನಗಳನ್ನು ನೆರವೇರಿಸಿದರು.