ಬಳ್ಳಾರಿ ವಿಧಾನಸಭಾ ಚುನಾವಣೆ 1989
 ಸಿರಿಗೇರಿ ಪನ್ನರಾಜ್ ವಿರುದ್ದ ಮುಂಡ್ಲೂರು ರಾಮಪ್ಪಗೆ ಗೆಲುವು


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಫೆ.22: ಕಳೆದ 1985 ರ ಚುನಾವಣೆಯಲ್ಲಿಯೇ ಶಾರದಾ ಮಳೆಬೆನ್ನೂರ್ ಅವರ ವಿರುದ್ದ ತ್ರಾಸಿನಿಂದ ಗೆಲುವು ಸಾಧಿಸಿದ್ದ ಮುಂಡ್ಲೂರು ರಾಮಪ್ಪ ಅವರು, 1989 ರ ಚುನಾವಣೆಯಲ್ಲಿಯೂ ಅಂತಹುದೇ ತೀವ್ರ ಸ್ಪರ್ಧೆಯನ್ನು ಸ್ವತಂತ್ರ ಅಭ್ಯರ್ಥಿ ಸಿರಿಗೇರಿ ಪನ್ನರಾಜ್ ಅವರಿಂದ ಎದುರಿಸಬೇಕಾಯ್ತು. ಸೋಲಿನ ಭಯದಿಂದ ಲಿಂಗಾಯತ ಮತಗಳು ಹೆಚ್ಚು ಇದ್ದ ಪಾರ್ವತಿ ನಗರದ ಬೂತ್ ನಲ್ಲಿ ರಿಗ್ಗಿಂಗ್ ಪ್ರಯತ್ನ ಕಾಂಗ್ರೆಸ್ ಬೆಂಬಲಿಗರಿಂದ ನಡೆದಿತ್ತು. ಅದಕ್ಕಾಗಿ ಅಲ್ಲಿ ಆಗ ಮರು ಮತದಾನ ನಡೆದಿತ್ತು. ಆದರೂ ರಾಮಪ್ಪ ಅವರು 4,933 ಮತಗಳ ಅಂತರದಿಂದ ಆಯ್ಕೆಯಾದರು. ಈ ಬಾರಿ ಅವರು ಬಂಗಾರಪ್ಪ ಅವರು ಮುಖ್ಯ ಮಂತ್ರಿಯಾದಾಗ ಅವರ ಸಚಿವ ಸಂಪುಟದಲ್ಲಿ ಇಂಧನ ಖಾತೆ ರಾಜ್ಯ ಸಚಿವರಾಗಿದ್ದರು. ಇದರ ನೆನೆಪಿಗಾಗಿ ನಗರದ ಗಡಗಿ ಚೆನ್ನಪ್ಪ ವೃತ್ತದಲ್ಲಿ ಮೊದಲ ಭಾರಿಗೆ ಟ್ರಾಫಿಕ್ ಲೈಟ್ ಗಳನ್ನು ಅಡಳವಡಿಸಿದ್ದರು. ಅಲ್ಲದೆ ನಗರದ ಸರಳಾದೇವಿ ಕಾಲೇಜು ಕಟ್ಟಡವನ್ನು 25 ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಲು ಶಂಕುಸ್ಥಾಪನೆ ನೆರವೇರಿಸಿದ್ದರು. ರಾಮಪ್ಪ ಅವರ ಬೆಂಬಲಿಗರಾಗಿದ್ದ ನಾರಾ ಸೂರ್ಯನಾರಾಯಣ ರೆಡ್ಡಿ ಅವರು ಬುಡಾ ಅಧ್ಯಕ್ಷರಾಗಿ ನೇಮಕಗೊಂಡಿದ್ದರು. 
ಈ ಚುನಾವಣೆಯಲ್ಲಿ ಮತದಾರರ ಸಂಖ್ಯೆ ಕ್ಷೇತ್ರದಲ್ಲಿ ಒಂದುವರೆ ಲಕ್ಷ ದಾಟಿತ್ತು, 1,59,354 ಇತ್ತು. ಇದರ ಪೈಕಿ ಚಲಾವಣೆಯಾದ ಮತಗಳಲ್ಲಿ ರಾಮಪ್ಪ ಅವರು 26,802 ಮತಗಳನ್ನು ಪಡೆಯುತ್ತಾರೆ. ಸ್ವತಂತ್ರ ಅಭ್ಯರ್ಥಿ ಸಿರಿಗೇರಿ ಪನ್ನರಾಜ್ ಅವರು 21,869 ಮತಗಳನ್ನು ಪಡೆಯುತ್ತಾರೆ. ಜನತಾದಳದ ಎಂ.ರವಿಪ್ರಸಾದ್ 10,538 ಮತಗಳ ಬರುತ್ತವೆ. ಇವರ ಸ್ಪರ್ಧೆಯಿಂದಾಗಿ ರಾಮಯ್ಯ ಅವರ ಗೆಲುವು ಸುಲಭವಾಗುತ್ತೆ, ಇಲ್ಲದಿದ್ದರೆ ಪನ್ನರಾಜ್ ಅವರ ಗೆಲುವು ನಿಶ್ಚಿತವಾಗುತ್ತಿತ್ತು. ಜನತಾ ಪಕ್ಷ ಅಬ್ದುಲ್ ಅಜೀಜ್ 2884 ಮತಗಳನ್ನು ಪಡೆದರೆ, ಸಿಪಿಐನ ಶಾರದಾ ಮಳೆಬೆನ್ನೂರ್ 2273 ಮತಗಳನ್ನು ಪಡೆಯುತ್ತಾರೆ. ಇವರಲ್ಲದೆ ಆರು ಜನ ಪಕ್ಷೇತರರು ಕಣದಲ್ಲಿ ಇದ್ದರು ಈ ಚುನಾವಣೆಯಲ್ಲಿ.
ಬಂಗಾರಪ್ಪ ಅವರ ಬೆಂಬಲಿಗರಾಗಿದ್ದ ರಾಮಪ್ಪ ಅವರು ನಂತರ 1994 ರ ವೇಳೆಗೆ ಬಂಗಾರಪ್ಪ ಅವರು ಕೆಸಿಪಿ(ಕರ್ನಾಟಕ ಕಾಂಗ್ರೆಸ್ ಪಕ್ಷ) ಕಟ್ಟಿದ್ದರಿಂದ ಈ ಪಕ್ಷದಿಂದ ಬಳ್ಳಾರಿಯಲ್ಲಿ ಕಣಕ್ಕಿಳಿಯದೆ. ಕುರುಗೋಡಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿರುದ್ದ ಸ್ಪರ್ಧೆ ಮಾಡಿ ಸೋಲನ್ನು ಕಾಣುತ್ತಾರೆ ಮತ್ತು ಈ ಚುನಾವಣೆ ಅವರ ಕೊನೆಯ ಚುನಾವಣೆ ಆಗುತ್ತೆ. ಅವರು ಬಳ್ಳಾರಿಯಿಂದ ಸ್ಪರ್ಧೆ ಮಾಡದಿರಲು ಮತ್ತೊಂದು ಕಾರಣ ಆಗ ಮುಂಡ್ಲೂರು ದಿವಾಕರ ಬಾಬು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು ಎನ್ನಬಹುದು. ರಾಮಪ್ಪ ಅವರ ಪುತ್ರ ಅನೂಫ್ ಕುಮಾರ್ ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಕಾಂಗ್ರೆಸ್ ಪಕ್ಷಕ್ಕೆ ಟಿಕೆಟ್‍ಗಾಗಿ ಅರ್ಜಿ ಸಲ್ಲಿಸಿದ್ದಾರೆ.