(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜೂನ್. 16: ರೈಲ್ವೆ ಪ್ರಯಾಣಿಕರಿಗೆ ನಗರದ ರೈಲ್ವೆ ನಿಲ್ದಾಣದಲ್ಲಿ ಮೂಲಭೂತ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲು, ಅನುಕೂಲಗಳನ್ನು ಕಲ್ಪಿಸಲು, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯು ತನ್ನದೇ ಆದ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಾ ಬಂದಿದೆ.
ನೈರುತ್ಯ ರೈಲ್ವೆ ವಲಯ ವ್ಯಾಪ್ತಿಯ ಬಳ್ಳಾರಿ, ತೋರಣಗಲ್ಲು ರೈಲ್ವೆ ನಿಲ್ದಾಣದಿಂದ ರೈಲ್ವೆಗೆ ದೊಡ್ಡ ಮೊತ್ತದ ಆದಾಯ ಸಂದಾಯವಾಗುತ್ತಿದ್ದರೂ ಈ ಭಾಗದ ರೈಲ್ವೆ ಅಭಿವೃದ್ಧಿ ನಿರೀಕ್ಷಿತ ಪ್ರಮಾಣದಲ್ಲಿ ಆಗಿಲ್ಲ.
ಸಂಸದ ವೈ. ದೇವೇಂದ್ರಪ್ಪ, ರಾಜ್ಯಸಭಾ ಸದಸ್ಯ ಡಾ. ಸಯ್ಯದ್ ನಾಸಿರ್ ಹುಸೇನ್, ಕೆ.ಎಂ. ಮಹೇಶ್ವರಸ್ವಾಮಿ ನೇತೃತ್ವದ ರೈಲ್ವೆ ಕ್ರಿಯಾ ಸಮಿತಿ ಸೇರಿ ವಿವಿಧ ಸಂಘ – ಸಂಸ್ಥೆಗಳ ಸಹಕಾರದಲ್ಲಿ ರೈಲ್ವೆ ಅಧಿಕಾರಿಗಳು ಮತ್ತು ರೈಲ್ವೆ ಸಚಿವರ ಜೊತೆ ನಿರಂತರ ಸಂಪರ್ಕ ಸಾಧಿಸಿರುವ ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯು ಬಳ್ಳಾರಿ ರೈಲ್ವೆ ನಿಲ್ದಾಣದ ಎರೆಡು ಪ್ಲಾಟ್‌ಫಾರಂಗಳಲ್ಲಿ 2 ಲಿಫ್ಟ್ಗಳನ್ನು ಮತ್ತು ಎಕ್ಸಲೇಟರ್‌ಗಳನ್ನು ಅಳವಡಿಸಲು ಶ್ರಮಿಸಿದೆ.
ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಮನವಿಯ ಮೇರೆಗೆ ಜಿಂದಾಲ್ ಸಂಸ್ಥೆಯು ರೈಲ್ವೆಗೆ 2 ಬ್ಯಾಟರಿ ಕಾರ್‌ಗಳನ್ನು ದೇಣಿಗೆಯಾಗಿ ನೀಡಿದೆ, ಮತ್ತಷ್ಟು ಬ್ಯಾಟರಿ ಕಾರ್‌ಗಳ ಸಂಖ್ಯೆಯನ್ನು ಹೆಚ್ಚಿಸಲು ವಿವಿಧ ಕೈಗಾರಿಕೆಗಳನ್ನು ಸಂಪರ್ಕ ಮಾಡಿ, ದೇಣಿಗೆ ಪಡೆಯಲು ಪ್ರಯತ್ನಿಸುತ್ತಿದ್ದೇವೆ ಎಂದು
ಲಿಫ್ಟ್ ಜನಸೇವೆಗೆ ಸಮರ್ಪಣೆಗೊಂಡಿದ್ದು, ಎಕ್ಸಲೇಟರ್ ಶೀಘ್ರದಲ್ಲೇ ಸೇವೆಗೆ ಸಜ್ಜಾಗಲಿದೆ ಎಂದು ಬಳ್ಳಾರಿ ರೈಲ್ವೆ ನಿಲ್ದಾಣ ಅಭಿವೃದ್ಧಿ ಸಮಿತಿಯ ಸದಸ್ಯ ಟಿ. ಶ್ರೀನಿವಾಸರಾವ್ ಅವರು ಹೇಳಿದ್ದಾರೆ.
ಇಷ್ಟೇ ಅಲ್ಲದೇ, ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಮತ್ತು ವಿವಿಧ ಸಂಘಟನೆಗಳು ಸಲ್ಲಿಸಿದ ಮನವಿಗೆ ಸ್ಪಂದಿಸಿರುವ ರೈಲ್ವೆ ಸಚಿವರು,ಅಧಿಕಾರಿಗಳು ಹಂಪಿ ಎಕ್ಸ್ಪ್ರೆಸ್ ರೈಲಿಗೆ ಹೆಚ್ಚುವರಿಯಾಗಿ 2 ಎಸಿ ಬೋಗಿಗಳು, ಅಮರಾವತಿ ರೈಲ್ವೆಗೆ 1 ಎಸಿ ಬೋಗಿ, 1 ಸಾಮಾನ್ಯ ಬೋಗಿ, 2 ಸ್ಲೀಪರ್ ಕೋಚನ್ನು ಹೆಚ್ಚುವರಿಯಾಗಿ ಅಳವಡಿಸಿದ್ದಾರೆ.ಹೆಚ್ಚುವರಿ ಬೋಗಿಗಳನ್ನು ಅಳವಡಿಸಿರುವ ಕಾರಣ ಪ್ರಯಾಣಿಕರಿಗೆ ಸಾಕಷ್ಟು ಅನುಕೂಲವಾಗಿದೆ.
ಎಚ್‌ಆರ್‌ಜಿ ಸರ್ಕಲ್ ರೈಲ್ವೆ ಮೇಲ್ಸೇತುವೆ ಅಗಲೀಕರಣ ಪ್ರಸ್ತಾವನೆ ಸಲ್ಲಿಸಲಾಗಿದೆ. ಎನ್‌ಸಿಸಿ ಕಚೇರಿ ಮುಂಭಾಗದ ಸುಧಾ ಸರ್ಕಲ್‌ನ ರೈಲ್ವೆ ಮೇಲ್ಸೇತುವೆ ನಿರ್ಮಾಣದ ಭೂಮಿ ಪೂಜೆ ಶೀಘ್ರದಲ್ಲೇ ನೆರವೇರಲಿದೆ. ಕನಕ ದುರ್ಗಮ್ಮ ದೇವಸ್ಥಾನ ಸಮೀಪದ ರೈಲ್ವೆ ಕೆಳ ಸೇತುವೆ ಅಗಲೀಕರಣದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿದೆ.
ಗುಂತಕಲ್ಲು ಮತ್ತು ಹುಬ್ಬಳ್ಳಿ ಸೇರಿ ಪ್ರಮುಖ ರೈಲ್ವೆ ನಿಲ್ದಾಣಗಳಲ್ಲಿ ಇರುವಂತೆ. ರೈಲು ಸಂಚರಿಸುವ ಅರ್ಧಗಂಟೆ ಮೊದಲು, ರಿಸರ‍್ವೇಷನ್ ಚಾರ್ಟ್ ಸಿದ್ದವಾದ ಮೇಲೂ ರಿಸರ‍್ವೇಷನ್ ಮಾಡುವ `ಸ್ಪಾಟ್ ರಿಸರ‍್ವೇಷನ್’ ಕೌಂಟರ್ ಪ್ರಾರಂಭಿಸಲು ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಸಲ್ಲಿಸಿರುವ ಮನವಿಗೆ ಅಧಿಕಾರಿಗಳು ತಾತ್ವಿಕ ಒಪ್ಪಿಗೆ ನೀಡಿದ್ದು, ಶೀಘ್ರದಲ್ಲೇ ಈ ವ್ಯವಸ್ಥೆ ಪ್ರಾರಂಭವಾಗುವ ಸಾಧ್ಯತೆಗಳಿವೆ
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಎಲ್ಲಾ ಪದಾಧಿಕಾರಿಗಳು ಮತ್ತು ಬಳ್ಳಾರಿ ರೈಲ್ವೆ ನಿಲ್ದಾಣ ಅಭಿವೃದ್ಧಿಯ ಸದಸ್ಯರು ನಿರಂತರವಾಗಿ ಹುಬ್ಬಳ್ಳಿ, ಬೆಂಗಳೂರು ಮತ್ತು ದೆಹಲಿಗೆ ಭೇಟಿ ನೀಡಿ ರೈಲ್ವೆ ಸಚಿವರನ್ನು, ರೈಲ್ವೆ ಅಧಿಕಾರಿಗಳನ್ನು ಮತ್ತು ಈ ಭಾಗದ ಜನಪ್ರತಿನಿಧಿಗಳನ್ನು ಭೇಟಿ ಮಾಡಿ ನಿರಂತರ ಸಂಪರ್ಕದಲ್ಲಿರುವ ಕಾರಣ ಈ ಸೌಲಭ್ಯಗಳು ತ್ವರಿತವಾಗಿ ಲಭಿಸಿವೆ ಎಂದು ಝೆಡ್‌ಆರ್‌ಸಿಸಿ ಸದಸ್ಯ ವಿ. ರವಿಕುಮಾರ್, ಬಳ್ಳಾರಿ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಸಿ. ಶ್ರೀನಿವಾಸರಾವ್ ಮತ್ತು ಗೌರವ ಕಾರ್ಯದರ್ಶಿ ಯಶವಂತ್ ರಾಜ್ ನಾಗಿರೆಡ್ಡಿ ಅವರು ತಿಳಿಸಿದ್ದಾರೆ