ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆಯ ಮತಎಣಿಕೆ ಮೆರವಣಿಗೆ/ಸಂಭ್ರಮಾಚರಣೆಗೆ ಬ್ರೇಕ್;ರಸ್ತೆ ಸಂಚಾರಕ್ಕೂ ನಿರ್ಬಂಧ:ಎಸ್ಪಿ ಸೈದುಲು ಅಡಾವತ್

ಬಳ್ಳಾರಿ,ಏ.30: ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆಯ ಮತ ಎಣಿಕೆ ಕಾರ್ಯವು ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಏ.30ರಂದು ನಡೆಯಲಿದೆ. ಕೋವಿಡ್-19 ಸೋಂಕಿನ ಪ್ರಕರಣಗಳು ದಿನೇದಿನೇ ಹೆಚ್ಚುತ್ತಿರುವ ಕಾರಣ, ಜಿಲ್ಲೆಯ ಸಾರ್ವಜನಿಕರ ಹಿತದೃಷ್ಟಿಯಿಂದ ಕೋವಿಡ್-19 ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಏ.30ರಂದು ಸಿ.ಆರ್.ಪಿ.ಸಿ.144 ಅಡಿಯಲ್ಲಿ ಬಳ್ಳಾರಿ ಮಹಾನಗರ ಪಾಲಿಕೆಯ ವ್ಯಾಪ್ತಿಯಾದ್ಯಂತ ನಿಷೇದಾಜ್ಞೆ ಹೊರಡಿಸಿದ್ದಲ್ಲದೆ, ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮತ್ತು ವ್ಯಾಪ್ತಿಯ 03 ಕಿ.ಮೀ. ಪರದಿಯಲ್ಲಿ ಮಧ್ಯ ನಿಷೇಧದ ಆದೇಶಗಳನ್ನು ಹೊರಡಿಸಿರುತ್ತಾರೆ ಎಂದು ಎಸ್ಪಿ ಸೈದುಲು ಅಡಾವತ್ ಅವರು ತಿಳಿಸಿದ್ದಾರೆ.
*ಸಂಭ್ರಮಾಚರಣೆ/ಮೆರವಣಿಗೆಗೆ ಬ್ರೇಕ್: ಬಳ್ಳಾರಿ ನಗರದಾದ್ಯಂತ ಯಾವುದೇ ಕಾರಣಕ್ಕೂ ನಾಲ್ಕು ಜನಕ್ಕಿಂತ ಹೆಚ್ಚಿನ ಗುಂಪು ಸೇರಬಾರದು. ಮತ ಎಣಿಕೆ ಕೇಂದ್ರದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿದ ಅಭ್ಯರ್ಥಿಯಾಗಲಿ ಅಥವಾ ಅವರ ಪ್ರತಿನಿಧಿಯಾಗಲಿ ಕೇವಲ ಒಬ್ಬರಿಗೆ ಮಾತ್ರ ಅಧಿಕೃತ ಪಾಸ್‍ನೊಂದಿಗೆ ಪ್ರವೇಶಕ್ಕೆ ಅವಕಾಶವಿರುತ್ತದೆ. ಚುನಾವಣೆಯಲ್ಲಿ ಗೆದ್ದವರು ಯಾವುದೇ ರೀತಿಯ ಸಂಭ್ರಮಾಚರಣೆ/ಮೆರವಣಿಗೆ ಮಾಡುವುದನ್ನು ನಿಷೇಧಿಸಿದೆ. ಅಲ್ಲದೆ, ಸಭೆ-ಸಮಾರಂಭ ಮಾಡುವುದನ್ನೂ ಸಹ ನಿಷೇಧಿಸಲಾಗಿದೆ ಎಂದು ತಿಳಿಸಿರುವ ಎಸ್ಪಿ ಸೈದುಲು ಅಡಾವತ್ ಅವರು ಜಿಲ್ಲಾಧಿಕಾರಿಗಳ ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡತಕ್ಕದ್ದು ಎಂದು ಸೂಚಿಸಿದ್ದಾರೆ.
*ರಸ್ತೆ ಸಂಚಾರಕ್ಕೆ ನಿರ್ಬಂಧ: ಮತ ಎಣಿಕೆ ನಿಮಿತ್ತ ಏ.30ರಂದು ಬೆಳಗ್ಗೆ 6ರಿಂದ ಸಂಜೆ 5ರವರೆಗೆ ಈ ಕೆಳಕಂಡಂತೆ ರಸ್ತೆ ಸಂಚಾರವನ್ನು ನಿರ್ಬಂಧಿಸಲಾಗಿದೆ ಎಂದು ಎಸ್ಪಿ ಸೈದುಲು ಅಡಾವತ್ ತಿಳಿಸಿದ್ದಾರೆ.
ಬಳ್ಳಾರಿ ನಗರದ ಸರ್ಕಾರಿ ಪಾಲಿಟೆಕ್ನಿಕ್ ನಲ್ಲಿ ಮತ ಎಣಿಕೆ ಕಾರ್ಯ ನಡೆಯುವುದರಿಂದ ಇದರ ಮುಂಭಾಗದ ರಸ್ತೆ ಮುಖಾಂತರ ಜನಸಂಚಾರ ತಡೆಯುವ ನಿಟ್ಟಿನಲ್ಲಿ, ಎಸ್.ಪಿ. ವೃತ್ತದಿಂದ ಅಂಬೇಡ್ಕರ್ ವೃತ್ತದ ರಸ್ತೆ, ಅಂಬೇಡ್ಕರ್ ವೃತ್ತದಿಂದ ಕೌಲ್‍ಬಜಾರ್ ಫ್ಲೈ ಓವರ್ ಹಾಗೂ ಹೊಸಪೇಟೆ ರಸ್ತೆಯ ಓ.ಪಿ. ವೃತ್ತದವರೆಗಿನ ರಸ್ತೆಯಲ್ಲಿ ಜನ/ವಾಹನ ಸಂಚಾರ ಸಂಪೂರ್ಣವಾಗಿ ನಿಷೇಧಿಸಿದೆ.
ಹೊಸಪೇಟೆ ಹಾಗೂ ಸಿರುಗುಪ್ಪ ರಸ್ತೆಯಿಂದ ಅನಂತಪುರ, ಕರ್ನೂಲು, ಬೆಂಗಳೂರು ಕಡೆ ಹೋಗುವ ವಾಹನಗಳು ಓ.ಪಿ. ವೃತ್ತದಿಂದ ಎಸ್.ಪಿ. ವೃತ್ತ, ದುರ್ಗಮ್ಮ ದೇವಸ್ಥಾನ, ರಾಯಲ್ ವೃತ್ತ ಹಾಗೂ ಇಂದಿರಾ ವೃತ್ತದ ಮೂಲಕ ಸಂಚರಿಸುವುದು.
ಅನಂತಪುರ ರಸ್ತೆಯಿಂದ ಮತ್ತು ಮೋಕಾ ರಸ್ತೆಯಿಂದ ಹೊಸಪೇಟೆ ಕಡೆ ಹೋಗುವ ವಾಹನಗಳು ಇಂದಿರಾ ವೃತ್ತ, ಮೋತಿ ವೃತ್ತ ರಂಗಮಂದಿರ ಮುಖಾಂತರ ರೇಡಿಯೋ ಪಾರ್ಕ್ ಮುಖಾಂತರ ಹೊಸಪೇಟೆ ರಸ್ತೆ ಮೂಲಕ ಸಂಚರಿಸುವುದು.