ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆ ಶಾಂತಿಯುತ ಮತದಾನ

 • 39 ವಾರ್ಡ್‍ಗಳಿಗೆ ಚುನಾವಣೆ
 • 187 ಜನ ಅಭ್ಯರ್ಥಿಗಳು ಕಣದಲ್ಲಿ
 • 338 ಮತಗಟ್ಟೆಗಳಲ್ಲಿ ಮತದಾನ
  (ಸಂಜೆವಾಣಿ ಪ್ರತಿನಿಧಿಯಿಂದ)

  ಬಳ್ಳಾರಿ,ಏ.27: ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ಜಿದ್ದಾಜಿದ್ದಿನ ಕಣವಾಗಿರುವ ಇಲ್ಲಿನ ಮಹಾನಗರ ಪಾಲಿಕೆಯ 39 ವಾರ್ಡುಗಳ ಸದಸ್ಯರ ಆಯ್ಕೆಯ ಚುನಾವಣೆ ಅಗಂವಾಗಿ. ಇಂದು ಬೆಳಿಗ್ಗೆ 7 ರಿಂದ ಮತದಾನ 338 ಮತಗಟ್ಟೆಗಳಲ್ಲಿ ಶಾಂತಿಯುತವಾಗಿನಡೆಯುತ್ತಿದೆ. ಕೋವಿಡ್ ನಿಂದಾಗಿ ಸಂಜೆ 5 ರವರೆಗೆ ಇದ್ದ ಮತದಾನವನ್ನು ಸಂಜೆ 5 ರಿಂದ 6 ವರೆಗೆ ಕೋವಿಡ್ ಸೋಂಕಿತರು ಬಂದು ಮರತದಾನ ಮಾಡಲು ಅವಕಾಶ ಕಲ್ಪಿಸಿದೆ. ಕೋವಿಡ್ ಮತ್ತು ಬಿಸಿಲಿನ ತಾಪ ಹೆಚ್ಚಿರುವ ಹಿನ್ನಲೆಯಲ್ಲಿ ಮತದಾನ ಹೆಚ್ಚಾಗುವ ಸಾಧ್ಯತೆ ಕಡಿಮೆ ಇದೆ.
  ಮತದಾನ ಮಾಡಲು 1,66,298 ಪುರುಷರು,1,74,538 ಮಹಿಳೆಯರು ಹಾಗೂ 36 ಇತರೇ ಸೇರಿದಂತೆ ಒಟ್ಟು 3ಲಕ್ಷದ 40 ಸಾವಿರದ 882 ಮತದಾರರು ಅರ್ಹರಿದ್ದಾರೆ. ಪ್ರತಿ ಮತಗಟ್ಟೆಯಲ್ಲಿ 6 ಜನ ಚುನಾವಣಾ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ.
  ಅಂಗನವಾಡಿ ಅಥವಾ ಆಶಾ ಕಾರ್ಯಕರ್ತೆಯರನ್ನು ಮತದಾನ ಮಾಡಲು ಆಗಮಿಸುವ ಮತದಾರರಿಗೆ ಥರ್ಮಲ್‍ಸ್ಕ್ಯಾನಿಂಗ್ ಮತ್ತು ಪಲ್ಸ್ ಆಕ್ಸಿಮಿಟರ್ ಪರಿಶೀಲಿಸಿ ಮತಗಟ್ಟೆಯೊಳಕ್ಕೆ ಬಿಡುತ್ತಿದ್ದಾರೆ.
  ಮತದಾರರು ಬಹುತೇಖವಾಗಿ ಮಾಸ್ಕಧರಿಸಿಕೊಂಡು ಬರುತ್ತಿದ್ದಾರೆ, ಹಾಗೆ ಬಂದವರಿಗೆ ಮಾಸ್ಕನ್ನು ನೀಡಲಾಗುತ್ತಿತ್ತು. ಆದರೂ ಅನೇಖ ಕಡೆಗಳಲ್ಲಿ ಕೋವಿಡ್ ನಿಯಮಗಳನ್ನು ಬರೀ ಜನಪ್ರತಿಗಳಲ್ಲದೆ ಜನರು ಕೂಡ ಮತದಾನದ ವೇಳೆ ಗಾಳಿಗೆ ತೂರಿದ್ದು ಮತಗಟ್ಟೆ ಹೊರಗೆ ಕಂಡು ಬಂತು. ಸಾಮಾಜಿಕ ಅಂತರ ಇಲ್ಲವೇ ಇಲ್ಲ.ಮತಗಟ್ಟೆ ಬಳಿ ಚುನಾವಣೆ ಅಧಿಕಾರಿಗಳ ಮಾತಿಗೆ ಬೆಲೆ ಕೊಡದ ಜನ ಮತದಾನ ಮಾಡಲು ಮುಗಿಬಿದ್ದಿದ್ದರು.
  ಬೆಳಿಗ್ಗೆ ಮತದಾರರು ಬಹುತೇಖ ಮತಗಟ್ಟೆಗಳ ಮುಂದೆ ಸರದಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು. ಬಿಸಿಲು ಬೀಳುವ ಮತಗಟ್ಟೆಗಳ ಮುಂದೆ. ಷಾಮೀಯಾನ ವ್ಯವಸ್ಥೆಯನ್ನು ಸಹ ಕಲ್ಪಿಸಲಾಗಿದೆ. ಬೆಳಿಗ್ಗೆ 11 ರ ವೇಳೆಗೆ ಶೇ 22.11 ರಷ್ಟು ಮತದಾನವಾಗಿತ್ತು. ಮಧ್ಯಾಹ್ನ 1 ಗಂಟೆ ವೇಳೆಗೆ ಶೇ 35.73 ಮತದಾನವಾಗಿತ್ತು. ಬಿಸಿಲು ಹೆಚ್ಚುತ್ತಿದ್ದಂತೆ ಮತದಾರರು ಮತಗಟ್ಟೆಗಳತ್ತ ಬರುವುದು ಕಡಿಮೆಯಾತು. ಅಂತಿಮವಾಗಿ ಮತದಾನ ಶೇ 60 ರಿಂದ 65 ರಷ್ಟು ಆಗಬಹುದು.
  ಕೆಲವು ಮತಗಟ್ಟೆಗಳ ಬಳಿ ತಮ್ಮ ಅಭ್ಯರ್ಥಿಗಳ ಮತನೀಡುವಂತೆ ಬೆಂಬಲಿಗರು ಬಂದು ಮತದಾರರಲ್ಲಿ ಮನವಿ ಮಾಡುವ ಬಗ್ಗೆ ಪೊಲೀಸರು ಕೊರೋನಾ ಹಿನ್ನಲೆಯಲ್ಲಿ ಆಪೇಕ್ಷಣೆ ವ್ಯಕ್ತಪಡಿಸಿದರು. ಇದಕ್ಕೆ ಬೆಂಬಲಿಗರು ವಾಗ್ವಾದ ನಡೆಸಿದ್ದು ಕಂಡುಬಂತು. ಇನ್ನು ಕೆಲವೆಡೆ ಕಾಂಗ್ರೆಸ್ ಹಾಗೂ ಬಿಜೆಪಿ ಬೆಂಬಲಿಗರು ಮತಗಟ್ಟೆ ಬಳಿ ಇರುವ ಬಗ್ಗೆ ಪರಸ್ಪರ ವಾಗ್ವಾದಕ್ಕೆ ಮುಂದಾಗ ಪೊಲೀಸರು ಲಾಠಿ ತೋರಿಸಿ ಚದುರಿಸಿದ್ದು ಶಾಂತಿನಗರ, ಶ್ರೀರಾಮ್ ಪುರ ಕಾಲೋನಿ, ಬಿಸಿಲಹಳ್ಳಿ, ಬಾಪೂಜಿನಗರ, ಎಪಿಎಂಸಿ ಮಾರುಕಟ್ಟೆ, ಮೊದಲಾದ ಕಡೆ ಕಂಡುಬಂತು. ನಗರ ಡಿಎಸ್ಪಿ, ಎ.ಎಸ್ಪಿ ಮತ್ತು ಎಸ್.ಪಿ.ಅವರುಗಳು ನಗರದ ಹಲವೆಡೆ ಸಂಚರಿಸಿ ಮತದಾನ ಶಾಂತಿಯುತವಾಗಿ ನಡೆಯುವಂತೆ ನೋಡಿಕೊಂಡರು.
  ಗಣ್ಯರ ಮತದಾನ:
  ಬಳ್ಳಾರಿ ಮಹಾನಗರ ಪಾಲಿಕೆಗೆ ಇಂದು ನಡೆದ ಮತದಾನದಲ್ಲಿ ಮಾಜಿ ಸಂಸದ ಸಣ್ಣ ಪಕ್ಕೀರಪ್ಪ ಸಂತಜಾನ್ ಶಾಲೆಯಲ್ಲಿ ಮತಹಾಕಿ ಬಂದು ಕೊರೋನಾ ನಿಯಮ ಪಾಲನೆ ಮಾಡಿ ಮತದಾನ ಮಾಡುವಂತೆ ಮತದಾರರಲ್ಲಿ ಮನವಿ ಮಾಡಿದರು. ಕಾಂಗ್ರೆಸ್ ದುರಾಡಳಿತಕ್ಕೆ ಜನರು ಈ ಬಾರಿ ಬಿಜೆಪಿ ಬೆಂಬಲಿಸಲಿದ್ದಾರೆ. ಹಳ್ಳಿಯಿಂದ ಡಿಲ್ಲಿವರೆಗೂ ಜನರು ಕಾಂಗ್ರೆಸ್ ಧಿಕ್ಕರಿಸಲಿದ್ದಾರೆ. ಕಳೆದ ಬಾರಿ ಕೈತಪ್ಪಿದ ಪಾಲಿಕೆ ಗದ್ದುಗೆ ಈ ಬಾರಿ ಏರಲಿದೆ ಎಂದರು. ಅವರ ಮಗಳು ಉಮಾದೇವಿ 39ನೇ ವಾರ್ಡಿನಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದಾರೆ.
  ಮಾಜಿ ಶಾಸಕ ಸೂರ್ಯನಾರಾಯಣ ರೆಡ್ಡಿ ಅವರು ಗಾಂಧಿ ನಗರದಲ್ಲಿರುವ ಬಾಲ ಭಾರತಿ ಶಾಲೆಯ ಮತಗಟ್ಟೆಯಲ್ಲಿ ಮತಚಲಾಯಿಸಿದರೆ. ಮಾಜಿ ಮೇಯರ ಹಾಗು 13 ವಾರ್ಡಿನ ಬಿಜೆಪಿ ಅಭ್ಯರ್ಥಿಯೂ ಆಗಿರುವ ಸಿ. ಇಬ್ರಾಹಿಂ ಬಾಬು ಅವರ ಪತ್ನಿ ಸಮೇತ ಮಿಲ್ಲರ್ ಪೇಟೆಯ ಉರ್ದು ಸರ್ಕಾರಿ ಶಾಲೆಯಲ್ಲಿ ಮತದಾನ ಮಾಡಿದರು. ನಗರದ 32ನೇ ವಾರ್ಡು ವ್ಯಾಪ್ತಿಯ ಗೌತಮ ನಗರದಲ್ಲಿರುವ ಸರ್ಕಾರಿ ಶಾಲೆಯ ಮತಗಟ್ಟೆಯೊಂದರಲ್ಲಿ ಬಳ್ಳಾರಿ ನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಿ.ಎಸ್.ಮಹಮ್ಮದ ರಫೀಕ್ ದಂಪತಿ, ಪುತ್ರಿ ಜೊತೆ ಸೇರಿ ಮತದಾನ ಮಾಡಿದರು.
  ಇನ್ನು ಸಮಾಜ ಕಲ್ಯಾಣ ಸಚಿವ ಮಹಿಳಾ ಮತ್ತು ಮಕ್ಕಳ ಇಲಾಖೆ ಕಚೇರಿಯಲ್ಲಿನ ಬೂತ್ ನಲ್ಲಿ, ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಅವಂಬಾವಿಯ ಸರ್ಕಾರಿ ಶಾಲೆಯ ಮತಗಟ್ಟೆಯಲ್ಲಿ ತಮ್ಮ ಪತ್ನಿ ಪುತ್ರರ ಸಮೇತ ಮತಚಲಾಯಿಸಿದರು.
  ಅದೇ ರೀತಿ ವಿಧಾನ ಪರಿಷತ್ ಸದಸ್ಯರಾದ ಅಲ್ಲಂ ವೀರಭದ್ರಪ್ಪ ಅವರು ಮಿಲ್ಲರ್ ಪೇಟೆಯ ಕಮ್ಮಿಂಗ್ ರಸ್ತೆಯ ಸರ್ಕಾರಿ ಶಾಲೆಯ ಮತಗಟ್ಟೆಯಲ್ಲಿ, ಕೆ.ಸಿ.ಕೊಂಡಯ್ಯ ಅವರು ಶಾಂತಿವಿಹಾರ ಶಾಲೆಯ ಮತಗಟ್ಟೆಯಲ್ಲಿ, ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಬಾಲಭಾರತಿ ಶಾಲೆಯ ಮತಗಟ್ಟೆಯಲ್ಲಿ, ನಗರದ 32ನೇ ವಾರ್ಡು ವ್ಯಾಪ್ತಿಯ ಗೌತಮ ನಗರದಲ್ಲಿರುವ ಸರ್ಕಾರಿ ಶಾಲೆಯ ಮತಗಟ್ಟೆಯೊಂದರಲ್ಲಿ ನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಿ.ಎಸ್.ಮಹಮ್ಮದ ರಫೀಕ್ ಕುಟುಂಬ ಸಮೇತರಾಗಿ ಆಗಮಿಸಿ ಮತದಾನ ಮಾಡಿದರೆ, ಕೆಪಿಸಿಸಿ ಸ್ಥಿರಾಸ್ತಿ ಮತ್ತು ಸ್ವತ್ತುಗಳ ರಾಜ್ಯ ಸಮಿತಿ ಸದಸ್ಯ ಜೆ.ಎಸ್‌.ಆಂಜನೇಯಲು ಮತ್ತು ಪತ್ನಿ ಜೆ.ಪುಷ್ಪವತಿ ಬಳ್ಳಾರಿಯ ಡಾ. ರಾಜ್ ಕುಮಾರ್ ರಸ್ತೆಯಲ್ಲಿರುವ ವಂದನಾ ಪ್ರಾಥಮಿಕ ಶಾಲೆಯ 135ನೇ ಮತಗಟ್ಟೆ ಕೇಂದ್ರದಲ್ಲಿ ಮತದಾನ ಮಾಡಿದರು.
  ಮತಗಟ್ಟೆ ಮುಂದೆ
  ಬಹುತೇಕ ಮತಗಟ್ಟೆ ಬಳಿ, ಮುಂದೆ ಆಯಾ ವಾರ್ಡಿನ ಅಭ್ಯರ್ಥಿಗಳು ಮತಗಟ್ಟೆಗಳತ್ತ ಸಾಗಿ ಬಂದ ಮತದಾರರಿಗೆ ಅಂತಿಮವಾಗಿ ತಮಗೆ ಮತನೀಡುವಂತೆ ಕೈಮುಗಿದು ಕೇಳುವ ದೃಶ್ಯ ಸಾಮಾನ್ಯವಾಗಿತ್ತು. ಅಭ್ಯರ್ಥಿಗಳಷ್ಟೆ ಅಲ್ಲದೆ ಅವರ ಬೆಂಬಲಿಗರು, ಪಕ್ಷದ ಕಾರ್ಯಕರ್ತರು, ಹಿತೈಷಿಗಳು, ಸಂಬಂಧಿಕರು ಸಹ ತಮ್ಮ ಅಭ್ಯರ್ಥಿಗೆ ಮತನೀಡುವಂತೆ ಮನವಿ ಮಾಡಿದರು.